Advertisement

ಸ್ವದೇಶಿಗಳಿಗೆ ಮೇಲ್ಪಂಕ್ತಿ ಈ ವಿದೇಶಿ ಮುನ್ರೋಲಪ್ಪ

12:35 AM May 22, 2021 | Team Udayavani |

ಕೆನರಾ (1799) ಮತ್ತು ಬಳ್ಳಾರಿ ಜಿಲ್ಲೆಗಳ (1800-07) ಪ್ರಥಮ ಜಿಲ್ಲಾಧಿಕಾರಿ ಥಾಮಸ್‌ ಮುನ್ರೋ. 222 ವರ್ಷಗಳ ಬಳಿಕ ಡಾ|ಕೆ.ವಿ. ರಾಜೇಂದ್ರ ಈಗಿನ ದ.ಕ. ಜಿಲ್ಲೆಯ 130 ನೆಯ ಜಿಲ್ಲಾಧಿಕಾರಿ, ಪವನ್‌ಕುಮಾರ್‌ ಮಾಲಾಪಾಟಿ ಬಳ್ಳಾರಿಯ 155 ನೆಯ ಜಿಲ್ಲಾಧಿಕಾರಿ.

Advertisement

ಸ್ವಾತಂತ್ರ್ಯ ಹೋರಾಟಗಾರ, ಮುತ್ಸದ್ದಿ, ಸ್ವಾತಂತ್ರ್ಯ ಪೂರ್ವ- ಅನಂತರ ಭಾರತದ ಕೊನೆಯ ಮತ್ತು ಮೊದಲ ಗವರ್ನರ್‌ ಜನರಲ್‌ ಹೀಗೆ ಬಹುವಿಶೇಷಣ ಹೊತ್ತ ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಒಬ್ಬ ಬ್ರಿಟಿಷ್‌ ಅಧಿಕಾರಿಯನ್ನು ಬಾಯ್ತುಂಬ ಹೊಗಳಬೇಕಾದರೆ ಆತನ ಕರ್ತೃತ್ವ ಶಕ್ತಿ ಹೇಗಿದ್ದಿರ ಬಹುದು? ರಾಜಾಜಿಯವರು ಯುವ ಅಧಿಕಾರಿಗಳಿಗೆ “ಭೂದಾಖಲೆಗಳಿರಬಹುದು, ಕಾನೂನು ಸುವ್ಯವಸ್ಥೆಗಳಿ ರಬಹುದು, ಆಡಳಿತದ ವಿಷಯವಾಗಿರ ಬಹುದು, ಮುನ್ರೊàವನ್ನು ಅಧ್ಯಯನ ಮಾಡಿ’ ಎಂದು ಕಿವಿಮಾತು ಹೇಳುತ್ತಿದ್ದರು.

ಈತನ ಹೆಸರು ಸರ್‌ ಥಾಮಸ್‌ ಮುನ್ರೋ. ದಕ್ಷಿಣ ಭಾರತದ ದಂತಕಥೆ ಎನಿಸಿದವನು. ಯುನೈಟೆಡ್‌ ಕಿಂಗ್‌ಡಮ್‌ನ ಗ್ಲಾಸ್ಗೋದಲ್ಲಿ 1761ರಲ್ಲಿ ಜನಿಸಿದ. ತಂದೆ ಉದ್ಯಮ ಕ್ಷೇತ್ರಕ್ಕೆ ಪ್ರವೇಶ ಮಾಡಬೇಕೆಂದಿದ್ದರೂ ಬ್ರಿಟಿಷ್‌ ಅಧಿಪತ್ಯದ ಮದ್ರಾಸ್‌ ಸೈನಿಕ ಶಾಲೆಗೆ 1779ರಲ್ಲಿ ಸೇರಿದ. ಹೈದರ್‌ ಆಲಿ, ಟಿಪ್ಪು ಸುಲ್ತಾನ್‌ ಜತೆ ಬ್ರಿಟಿಷರು ಸಾರಿದ ಯುದ್ಧದಲ್ಲಿ ಪಾಲ್ಗೊಂಡ ಈತ ಟಿಪ್ಪುವಿನಿಂದ ಪಡೆದ ಸೇಲಂ ಭಾಗದಲ್ಲಿ (ಕೃಷ್ಣಗಿರಿ, ಧರ್ಮಪುರಿ, ಹೊಸೂರು ಇತ್ಯಾದಿ ಮಧ್ಯೆ ಕರ್ನಾಟಕದ ಚಾಮರಾಜನಗರ ಜಿಲ್ಲೆ ಗಡಿಯೂ ಇದೆ) ಏಳು ವರ್ಷ ಭೂಕಂದಾಯ ಸಮೀಕ್ಷೆಯ ಅಧ್ಯಯನ ನಡೆಸಿದ. ಇದನ್ನೇ ಮುಂದೆ ತಾನು ಸಲ್ಲಿಸಿದ ಸೇವಾವಧಿಯಲ್ಲಿ ಅನ್ವಯಿಸಿ ಅಜರಾಮರನಾದ.

1799ರಲ್ಲಿ ಟಿಪ್ಪು ಪತನಾನಂತರ ಕಾಸರಗೋಡಿನಿಂದ ಕಾರವಾರದವರೆಗಿನ ಕರ್ನಾಟಕದ ಕರಾವಳಿಯ (ಕೆನರಾ ಜಿಲ್ಲೆ) ಪ್ರಥಮ ಜಿಲ್ಲಾ ಕಲೆಕ್ಟರ್‌ ಹುದ್ದೆಯನ್ನು ಮುನ್ರೋಗೆ ನೀಡಲಾಯಿತು. ಆಗ ಹಾಕಿಕೊಟ್ಟ ಸರ್ವೇ, ಭೂಕಂದಾಯ ನಿಗದಿಯಂತಹ ಪಂಚಾಂಗವೇ ಈಗಿರುವುದು. ಹೈದರಾಬಾದ್‌ ನಿಜಾಮನಿಂದ ಬಂದ ಅನಂತಪುರ, ಕಡಪ, ಕರ್ನೂಲು ಭಾಗ, ಬಳ್ಳಾರಿ, ತುಮಕೂರು ಜಿಲ್ಲೆಯ ಪಾವಗಢ ಭಾಗಗಳ (ಬಳ್ಳಾರಿ ಕೇಂದ್ರ) ಜಿಲ್ಲಾಧಿಕಾರಿಯಾಗಿ (1800-07)ಯೂ ನೇಮಕಗೊಂಡಿದ್ದ.

ರೈತವಾರಿ ಪದ್ಧತಿ ಪಿತಾಮಹ: 1807ರ ಬಳಿಕ ಬ್ರಿಟನ್‌ಗೆ ಕಾರ್ಯನಿಮಿತ್ತ ತೆರಳಿ 1814ರಲ್ಲಿ ಮದ್ರಾಸ್‌ ಪ್ರಾಂತ್ಯದ ನ್ಯಾಯಾಂಗ ಮತ್ತು ಪೊಲೀಸ್‌ ಸುಧಾರಣೆಗಾಗಿ ಮರಳಿದ. 1819ರಿಂದ 25ರ ವರೆಗೆ ಮದ್ರಾಸ್‌ ಪ್ರಾಂತದ ಗವರ್ನರ್‌ ಆದ. ಬಳ್ಳಾರಿಯಲ್ಲಿದ್ದಾಗ ಮತ್ತು ಗವರ್ನರ್‌ ಆದಾಗ ಪುಂಡುಪೋಕರಿಗಳನ್ನು ಹದ್ದುಬಸ್ತಿನಲ್ಲಿಟ್ಟು ರೈತವಾರಿ ಪದ್ಧತಿ ಜಾರಿಗೊಳಿಸಿದ. ವ್ಯವಸಾಯಗಾರರು ಮತ್ತು ಸರಕಾರದ ನಡುವೆ ಮಧ್ಯವರ್ತಿಗಳ ಹಾವಳಿ ಇಲ್ಲದ ನೇರ ಒಪ್ಪಂದವೇ ರೈತವಾರಿ. “ರೈತವಾರಿ ಪದ್ಧತಿಯ ಪಿತಾಮಹ’ ಎಂಬ ಹೆಗ್ಗಳಿಕೆಯೂ ಈತನದ್ದು. ಒಂದರ್ಥ ದಲ್ಲಿ 1974ರಲ್ಲಿ ಜಾರಿಗೆ ಬಂದ ಭೂಮಸೂದೆ ಕಾಯಿದೆಯ ಪೂರ್ವರೂಪವಿದು.

Advertisement

ಮುನ್ರೋಲಪ್ಪನಾದ: ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಜಾರಿಗೊಳಿಸಿದ್ದ. ಶಾಲೆಗಳನ್ನು ತೆರೆಯು ವುದು, ಕುಡಿಯುವ ನೀರಿಗಾಗಿ ಬಾವಿ ತೋಡುವುದು ಇತ್ಯಾದಿ ಜನೋಪಯೋಗಿ ಕೆಲಸ ಮಾಡಿದ್ದರಿಂದಲೇ ಜನರ ಬಾಯಲ್ಲಿ ಮುನ್ರೋಲಪ್ಪನಾದ. ಮಕ್ಕಳಿಗೆ ಈ ಹೆಸರು ಇಡುತ್ತಿದ್ದರಂತೆ. ಜನರ ಬಾಯಲ್ಲಿ ಲಾವಣಿಗಳೂ ನಲಿದಾಡಿದವು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದರೆ ಸುಲಲಿತ ಆಡಳಿತ ಸಾಧ್ಯವಿಲ್ಲ ಎಂಬುದು ಅವನಿಗೆ ಸ್ಪಷ್ಟವಾಗಿ ತಿಳಿದಿತ್ತು.

ರಾಯರ ಇಂಗ್ಲಿಷ್‌, ಕ್ರೈಸ್ತರ ನೆಮ್ಮದಿ: ಮುನ್ರೋ ಸ್ಥಳೀಯ ಸಂಸ್ಕೃತಿಯನ್ನು ಮೆಚ್ಚಿಕೊಂಡಿದ್ದ ಎನ್ನುವುದ ಕ್ಕಿಂತ ಪೂರ್ವಾಗ್ರಹಗಳಿರಲಿಲ್ಲ ಎನ್ನುವುದು ಮೇಲು. ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದಾಗ (1800-07) ಒಂದು ಘಟನೆ ನಡೆಯಿತು. ಶ್ರೀ ರಾಘವೇಂದ್ರಸ್ವಾಮಿಗಳು ಮಂತ್ರಾಲಯದಲ್ಲಿ 1671ರಲ್ಲಿ ವೃಂದಾವನ ಪ್ರವೇಶಿಸಿ ದ್ದರು. ಕಂದಾಯಕ್ಕೆ ಸಂಬಂಧಿಸಿ ಮಠದ ಭೂಮಿಯನ್ನು ವಶಪಡಿಸಿಕೊಳ್ಳಲು ಆತ ಮಠಕ್ಕೆ ಹೋದ. ಟೊಪ್ಪಿ ತೆಗೆದು ಒಳಗೆ ಪ್ರವೇಶಿಸಿದ. ವೃಂದಾವನದಿಂದ ಸ್ವಾಮಿಗಳು ಹೊರಬಂದರಂತೆ. ಇಬ್ಬರ ನಡುವೆ ಇಂಗ್ಲಿಷ್‌ನಲ್ಲಿ ಮಾತುಕತೆ ನಡೆಯಿತಂತೆ. ಸ್ವಾಮೀಜಿಗಳು ಮಂತ್ರಾಕ್ಷತೆ ಕೊಟ್ಟರು. ಮುನ್ರೋ ಅದನ್ನು ತಂದು ಮನೆಯಲ್ಲಿರುವ ಅಕ್ಕಿ ಪಾತ್ರೆಗೆ ಹಾಕಿದ. ಇದನ್ನು ಮದ್ರಾಸ್‌ ಗೆಜೆಟಿಯರ್‌ನಲ್ಲಿ ಉಲ್ಲೇಖೀಸಿದ್ದಾನೆ. ಶ್ರೀ ರಾಘವೇಂದ್ರ ಸ್ವಾಮಿಗಳ ವಿಶೇಷತೆಗಳಲ್ಲಿ ಇದೂ ಒಂದು. ಇದೆಂತಹ ಸಂಬಂಧವೋ ತಿಳಿಯದು. ಇವನ ಜನ್ಮ (1761), ಸ್ವಾಮಿಗಳ ನಿರ್ಯಾಣದ (1671) ಇಸವಿಗಳ ಅಂಕೆಗಳನ್ನು ಕೂಡಿಸಿದರೆ 15 ಬರುತ್ತದೆ. ಟಿಪ್ಪುನಿಂದ ಹೈರಾಣಾಗಿದ್ದ ಮಂಗಳೂರಿನ ಕ್ರೈಸ್ತ ಸಮುದಾಯದವರು ಉಸಿರಾಡಿದ್ದು ಮುನ್ರೊà ಅಧಿಪತ್ಯದ ಬಳಿಕವೇ.

ಸ್ವರ್ಣಹಾರ, ಗಂಗಳಂ: ಕಡಪ ಜಿಲ್ಲೆಯಲ್ಲಿ ಎರಡು ಗಿರಿಪರ್ವತಗಳಿವೆ. ಲಂಕೆಯಿಂದ ರಾಮಲಕ್ಷ್ಮಣರು ಹಿಂದಿರುಗುವಾಗ ಆಂಜನೇಯ ಎರಡು ಪರ್ವತಗಳ ನಡುವೆ ಒಂದು ಸ್ವರ್ಣ ತೋರಣ ಕಟ್ಟಿದ್ದನಂತೆ. ಇದು ಮಹಾತ್ಮರಿಗಷ್ಟೇ ತೋರುತ್ತದೆ ಎಂಬ ನಂಬಿಕೆ ಇದೆ. ಮುನ್ರೊàಗೆ ಇದು ತೋರಿತ್ತು. “ಈತ ಮಹಾನು ಭಾವನೇನೋ ಹೌದು, ಆದರೆ ಸದ್ಯವೇ ಇಹಲೋಕ ತ್ಯಜಿಸುತ್ತಾನೆ’ ಎಂದು ವೃದ್ಧ ಹಳ್ಳಿಯವನೊಬ್ಬ ಹೇಳಿದ ನಂತೆ. ಸ್ವರ್ಣ ಹಾರ ತೋರಿದ್ದನ್ನೂ ಗೆಜೆಟಿಯರ್‌ನಲ್ಲಿ ಮುನ್ರೋ ದಾಖಲಿಸಿದ್ದಾನೆ. ಕಡಪದ ಗಂಡಿ ಕ್ಷೇತ್ರದಲ್ಲಿ ಮುನ್ರೋ ಚಿತ್ರ ರಾರಾಜಿಸುತ್ತಿದೆ. ತಿರುಪತಿ ಕ್ಷೇತ್ರದ ನೈವೇದ್ಯಕ್ಕೆ ಕೊಟ್ಟ ಪಾತ್ರೆ “ಮುನ್ರೊà ಗಂಗಳಂ’ ಎಂದೇ ಹೆಸರಾಗಿದೆ.

ಕಾಲರಾ ಸೋಂಕಿನ ಕಾಲ: 1825ರಲ್ಲಿ ಹೊಸ ಗವರ್ನರ್‌ ನೇಮಕಗೊಂಡಿರಲಿಲ್ಲ. ಕಾಲರಾ ರೋಗ ವಿತ್ತು. ಪ್ರವಾಸ ಮಾಡುತ್ತ ಅನಂತಪುರದಿಂದ ಗುತ್ತಿ ಪ್ರದೇಶಕ್ಕೆ ಬಂದಾಗ ಜತೆಗಿದ್ದವರಿಗೆ ಕಾಲರಾ ತಗಲಿತು. ಪತ್ತಿಕೊಂಡದಲ್ಲಿ ಮುನ್ರೋಗೆ ತಗಲಿತು. 1827ರ ಜುಲೈ 6ರಂದು ನಿಧನ ಹೊಂದಿದ. ಪ್ರಾಂತ್ಯವೇ ಕಣ್ಣೀರು ಹಾಕಿತು. ಗುತ್ತಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾ ಯಿತು. ಪತ್ತಿಕೊಂಡದ ಮುನ್ರೋ ಛತ್ರ ಈಗ ಶಾಲೆಯಾ ಗಿದೆ. ಮುನ್ರೋ ತಾಮ್ರದ ಪುತ್ಥಳಿ 1839ರ ಅಕ್ಟೋಬರ್‌ 23ರಂದು ಮದ್ರಾಸ್‌(ಚೆನ್ನೈ)ನಲ್ಲಿ ಎದ್ದು ನಿಂತಿತು.

ಜನಸ್ನೇಹಿ ಆಡಳಿತದ ಸ್ಮರಣೆ: ಮೇ 27ರಂದು ಮುನ್ರೊà ಜಯಂತಿ. ಈಗಲೂ ಕೆಲವರ ಮನಸ್ಸಿನಲ್ಲಿ ಮುನ್ರೊà ಅಚ್ಚಳಿಯದೆ ಉಳಿಯಲು ಅವನ ಜನಸ್ನೇಹಿ ಆಡಳಿತವೇ ಕಾರಣ. ಇದಕ್ಕಾಗಿ ಬ್ರಿಟಿಷ್‌ ಮೇಲಧಿಕಾರಿಗಳ, ಸ್ಥಳೀಯ ಬಲಿಷ್ಠರ ಕೆಂಗಣ್ಣಿಗೂ ಒಳಗಾಗಿದ್ದ.ಯಾವುದೇ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ಮುನ್ರೊà ಮಾಡಿದ ಸಾಧನೆ ಅತ್ಯಾಧುನಿಕ ವ್ಯವಸ್ಥೆಗಳಿರುವ ಈ ಹೊತ್ತಿಗೆ ಕನಿಷ್ಠ ಸೌಜನ್ಯದ, ಸೂಕ್ತ ಉತ್ತರವನ್ನಾದರೂ ಅಧಿಕಾರಶಾಹಿಯಿಂದ ಜನರು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next