Advertisement

ಈ ಕುಟುಂಬಕ್ಕೆ ನೆರೆಯವರದ್ದೇ ನೆರವು

11:45 AM Jul 31, 2019 | Suhan S |

ಪಾಲಭಾವಿ: ಸಪ್ತಪದಿ ತುಳಿದು ಕೈ ಹಿಡಿದ ಹೆಂಡತಿಗೆ ನಡೆಯಲು ಬರುತ್ತಿಲ್ಲ, 21 ವರ್ಷದ ಅಂಗವಿಕಲ ಮಗನ ಆರೈಕೆ, ವಯಸ್ಸಾದ ಅತ್ತೆಯ ಜೋಪಾನ, ಮನೆಯ ಯಜಮಾನನಿಗೆ ದುಡಿಯಲು ಶಕ್ತಿಯಿಲ್ಲದ ಸ್ಥಿತಿ.

Advertisement

ಇದು ರಾಯಬಾಗ ತಾಲೂಕು ಕುಡಚಿ ಮತಕ್ಷೇತ್ರದಲ್ಲಿ ಪೂರ್ವಭಾಗದ ಕಪ್ಪಲಗುದ್ದಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸುಲ್ತಾನಪುರ ಗ್ರಾಮದ ನಿವಾಸಿ ಶಿವಲಿಂಗಪ್ಪ ಖಾನಗೌಡ ಎಂಬುವರ ಕುಟುಂಬದ ದುಸ್ಥಿತಿ.

ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ಪತ್ನಿ ನೀಲವ್ವ ಖಾನಗೌಡ ಅವರಿಗೆ ಕಾಲು ನೋವು ಕಾಣಿಸಿಕೊಂಡದ್ದೇ ನೆಪ. ಅಂದಿನಿಂದ ಒಂದು ಹೆಜ್ಜೆ ಮುಂದಿಡಲು ಆಗುತ್ತಿಲ್ಲ. ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಹೆಚ್ಚಿನ ಚಿಕಿತ್ಸೆ ಕೊಡಿಸಿ ಕಾಲುಗಳಲ್ಲಿ ಮತ್ತೆ ಚೈತನ್ಯ ತುಂಬಬೇಕೆಂದರೆ ಕೈಯಲ್ಲಿ ಹಣವಿಲ್ಲದಿರುವುದು ಒಂದೆಡೆಯಾದರೆ, ಕುಟುಂಬದ ಜವಾಬ್ದಾರಿ ಹೊರಬೇಕಾದ 21 ವರ್ಷದ ಮಗ ರಮೇಶ ಖಾನಗೌಡ ಅಂಗವೈಕಲ್ಯ ಇನ್ನೊಂದೆಡೆ. ಇವೆಲ್ಲದರ ಮಧ್ಯೆ ವಯಸ್ಸಾದ ಅತ್ತೆ. ಇವರನ್ನೆಲ್ಲ ಕಟ್ಟಿಕೊಂಡು ದಿನವಿಡೀ ಸಂಸಾರ ಬಂಡಿ ನೂಕುತ್ತ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಸುಲ್ತಾನಪುರದ ಶಿವಲಿಂಗಪ್ಪ.

ಕಬ್ಬಿನ ಸದೆಯಲ್ಲಿ ಗುಡಿಸಲು: ಕಳೆದ 2014ರಲ್ಲಿ ಸುಲ್ತಾನಪುರದಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಶಾಸಕ ಪಿ.ರಾಜೀವ್‌ ಗ್ರಾಮದ ಆಸ್ತಿ ನಂಬರ್‌ 71ರಲ್ಲಿ 23X15 ಚದರ ಅಡಿಯ ನಿವೇಶನವನ್ನು ಈ ಕುಟುಂಬಕ್ಕೆ ನೀಡಿದ್ದಾರೆ. ಆದರೆ ಮನೆ ಮಂಜೂರಾಗಿಲ್ಲ. ಕಟ್ಟಿಗೆ ಕಟ್ಟಿಕೊಂಡು ಕಬ್ಬಿನ ಸದೆಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎನ್ನುತ್ತಾರೆ ಶಿವಲಿಂಗಪ್ಪ.

ಮಗನ ಚಿಕಿತ್ಸೆಗೆ ಒಂದು ಎಕರೆ ಜಮೀನು: ಹಿರಿಯರು ಗಳಿಸಿದ ಒಂದು ಎಕರೆ ಜಮೀನು ಮಗನ ಚಿಕಿತ್ಸೆ ಖರ್ಚಿಗಾಗಿ ಕೈಬಿಟ್ಟಿತು. ಆತನಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು ಹೀಗೆ ಕಂಡ ಕಂಡಲೆಲ್ಲ ಅಲೆದಿದ್ದೇನೆ. ಆದರೆ ಮಗ ಮಾತ್ರ ಇನ್ನೂ ಗುಣವಾಗಲೇ ಇಲ್ಲ. ಇದರಿಂದ ಇದ್ದ ಒಂದು ಎಕರೆ ಜಮೀನು ಕೂಡ ಕಳೆದುಕೊಂಡೆ. ನನಗೂ ವಯಸ್ಸಾಯಿತು, ಕಣ್ಣುಗಳು ಕಾಣುತ್ತಿಲ್ಲ, ಜೊತೆಗೆ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಪತ್ನಿ, ನನ್ನ ಆಶ್ರಯದಲ್ಲಿರುವ ಇಳಿ ವಯಸ್ಸಿನ ಅತ್ತೆ ಎಲ್ಲರನ್ನು ಸಾಕುವುದು ದೊಡ್ಡ ಪರೀಕ್ಷೆಯಾಗಿದೆ ಎಂದು ನೊಂದು ನುಡಿಯುತ್ತಾರೆ ಶಿವಲಿಂಗಪ್ಪ.

Advertisement

ಸಿಗದ ಮಾಸಾಶನ: ಅಂಗವಿಕಲ ಮಗನಿಗಾಗಿ ಅಲ್ಲಲ್ಲಿ ಸಾಲ ಮಾಡಿದ್ದೇನೆ. ಮಗನ ಹೆಸರಿನಲ್ಲಿ ಮಾಸಾಶನ ಮಾಡಿಸಬೇಕೆಂದು ರಾಯಬಾಗ, ಕುಡಚಿ ಸರಕಾರಿ ಅಧಿಕಾರಿಗಳಿಗೆ ನನ್ನ ಪರಿಸ್ಥಿತಿ ತೋಡಿಕೊಂಡಿದ್ದೇನೆ. 21 ವರ್ಷಗಳಿಂದ ಮಗನಿಗೆ ಮಾಸಾಶನವಿಲ್ಲ ಎಂದು ಹೇಳುವ ಶಿವಲಿಂಗಪ್ಪನ ಕತೆ ಕೇಳುತ್ತ ಹೋದರೆ ಎಲ್ಲರ ಕಣ್ಣಂಚು ಒದ್ದೆಯಾಗುತ್ತದೆ.

ಬಸಲಿಂಗಪ್ಪ ಖಾನಗೌಡ ಕುಟುಂಬ ತುಂಬ ಕಷ್ಟದಲ್ಲಿದೆ. ವಯಸ್ಸಾದ ಬಸಲಿಂಗಪ್ಪ, ಪತ್ನಿ ನೀಲವ್ವ, ಅಂಗವಿಕಲ ಮಗ ರಮೇಶ, ವಯಸ್ಸಾದ ಅತ್ತೆ ಚಪ್ಪರದಲ್ಲಿರುವ ವಾಸವಿರುವ ವಿಷಯ ತಿಳಿದು ಬಂದಿದೆ. ನಮ್ಮ ಸಹಾಯಕರಿಂದ ಮಾಹಿತಿ ಪಡೆದು ನಾಲ್ವರಿಗೂ ಮಾಸಾಶನ ಮಂಜೂರು ಮಾಡುತ್ತೇನೆ. •ಅಣ್ಣಾಸಾಹೇಬ ಜೊಲ್ಲೆಚಿಕ್ಕೋಡಿ, ಸಂಸದರು.

ಉಳುಮೆ ಮಾಡಲು ಜಮೀನು ಇಲ್ಲ, ಸ್ವಂತ ಮನೆ ಇಲ್ಲ, ದುಡಿಯಲು ಶಕ್ತಿಯಿಲ್ಲ. ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಪತ್ನಿ, ಪ್ರಪಂಚ ಜ್ಞಾನವಿಲ್ಲದ ಅಂಗವಿಕಲ ಮಗ, ವಯಸ್ಸಾದ ಅತ್ತೆಯನ್ನು ಸಾಕುವುದೇ ನನಗೆ ದೊಡ್ಡ ಸವಾಲು.•ಶಿವಲಿಂಗಪ್ಪ ಖಾನಗೌಡ
ಈ ಜೀವನವೇ ಬೇಸರವಾಗಿದೆ. ನಮ್ಮ ಮನೆಯವರಿಗೆ ದುಡಿಯುವ ಶಕ್ತಿಯಿಲ್ಲ. ನಾವು ಮೂರು ಜನ ಕುಳಿತು ತಿನ್ನುವವರು. ನೆರೆ-ಹೊರೆಯವರು, ಅಕ್ಕಿ, ಹಿಟ್ಟು, ಬೇಳೆ, ದಿನಸಿ ಕೊಡುತ್ತಾರೆ. ಎಷ್ಟು ದಿನ ಹೀಗೆ ಕಾಲ ಕಳೆಯುವುದು ಎನ್ನುವ ಚಿಂತೆ ಕಾಡುತ್ತಿದೆ. •ನೀಲವ್ವ ಖಾನಗೌಡ, ಪತ್ನಿ
ಕುಟುಂಬಕ್ಕೆ ನೆರವಾಗಿ:
ಶಿವಲಿಂಗಪ್ಪ ಸಿದ್ದಗಿರೆಪ್ಪ ಖಾನಗೌಡ

ಖಾತೆ ನಂಬರ್‌: 89045776321

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹಂದಿಗುಂದ ಶಾಖೆ

ಐಎಫ್‌ಸಿ ಕೋಡ್‌: ಕೆವಿಜಿಬಿ-0002703,

ವಿಳಾಸ: ಶಿವಲಿಂಗಪ್ಪ ಖಾನಗೌಡ

ಪೋಸ್ಟ್‌-ಸುಲ್ತಾನಪುರ,

ತಾ| ರಾಯಬಾಗ, ಜಿ| ಬೆಳಗಾವಿ

ಮೊ.ನಂ: 9591171065

•ಶಿವಾಜಿ ಮೇತ್ರಿ
Advertisement

Udayavani is now on Telegram. Click here to join our channel and stay updated with the latest news.

Next