Advertisement
ನನ್ನೊಲುಮೆಯ ಗೆಳತಿ…..ಪ್ರೀತಿಯಲಿ ಮುಳುಗದ, ಅದರ ಸುಮಧುರ ಬಂಧದ ತೆಕ್ಕೆಗೆ ಸಿಗದವರಿಲ್ಲ. ಎಂತಹ ಕಲ್ಲೆದೆಯವನನ್ನೂ ಕರಗಿಸಿ, ಅರಳಿಸುವ ಶಕ್ತಿ ಪ್ರೀತಿಗಿದೆ. ಪ್ರತಿಯೊಬ್ಬರೂ ಪ್ರೀತಿಗಾಗಿ ಹಪಹಪಿಸುವವರೇ. ಅದರ ಕೃಪಾಕಟಾಕ್ಷಕ್ಕೆ ಸಿಲುಕಲು ಗೋಳಾಡುವವರೇ. ಮೋಸ, ವಂಚನೆ, ಸ್ವಾರ್ಥ ತುಂಬಿರುವ ಈ ಜಗತ್ತಿನಲ್ಲಿ, ಹಿಡಿ ಪ್ರೀತಿಗೆ ಜನ ಹಂಬಲಿಸುವುದು ಸಹಜ ತಾನೆ? ನೋವಿಗೆ ಆಸರೆಯಾಗಿ, ನಲಿವಿಗೆ ಹಿರಿ ಹಿರಿ ಹಿಗ್ಗಿ, ಓಲೈಸುವ, ಸಂತೈಸುವ ಜೀವ ಸಂಜೀವಿನಿ ಪ್ರೀತಿ. ಇದರ ಕಬಂಧ ಬಾಹುಗಳಿಗೆ ಒಮ್ಮೆ ಸಿಲುಕಿದರೆ ಮುಗಿದೇ ಹೋಯಿತು. ಹೊರಬರುವ ಉಪಾಯವೇ ಗೊತ್ತಾಗುವುದಿಲ್ಲ. ನನ್ನ ಸ್ಥಿತಿಯೂ ಹೀಗೇ ಆಗಿದೆ ನೋಡು. ನಿನ್ನ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಆಗುತ್ತಲೇ ಇಲ್ಲ. ಅದೇಕೆ ಹೀಗೆ ಎಂದು ನೂರಾರು ಸಲ ಚಿಂತಿಸಿದ್ದೇನೆ. ಚಿಂತೆ ಚಿತೆಯಾಗಿ ಸುಟ್ಟಿದೆಯೇ ಹೊರತು, ಫಲ ನೀಡಿಲ್ಲ. ನೀನೇಕೆ ಯಾವುದೋ ಜನುಮದ ಮಧುರ ಗಾನದಂತೆ ಕಿವಿಗೆ ಇಂಪಾಗಿ ತಟ್ಟುತ್ತಿರುವೆ? ತಿಳಿಯುತ್ತಿಲ್ಲ!
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾುತೋ…
ಒಮ್ಮೊಮ್ಮೆ ಯೋಚನೆ ನಿರಾಸಕ್ತಿಯತ್ತ ಹೊರಳುತ್ತದೆ. ಜಗತ್ತನ್ನು ಬೆಳಗುವ ಸೂರ್ಯ ಚಂದ್ರರೇ ಅನವರತ ಭುವಿಯಲ್ಲಿ ಬೆಳಗುವುದಿಲ್ಲ. ಮನಕೆ ಆನಂದ ನೀಡುವ ಅಸಂಖ್ಯಾತ ತಾರೆಗಳೇ ಬೆಳಗಾಗೆದ್ದು ಕಣ್ಮರೆಯಾಗುತ್ತವೆ. ನಸುಕಿನಲ್ಲಿ ಅರಳುವ ಹೂವೇ ಸಂಜೆಗೆ ಬಾಡಿ ಮಂಕಾಗಿ ಬಿಡುತ್ತದೆ. ತುಂಬಿದ ನದಿಯೇ ಬಿರು ಬಿಸಿಲಿನ ಝಳಕ್ಕೆ ಬತ್ತಿ ಸೊರಗಿ ಹೋಗುತ್ತದೆ. ಅಂಥದ್ದರಲ್ಲಿ ನಮ್ಮಂಥ ಬಡಪಾಯಿಗಳ ಪಾಡೇನು? ನೀನು ಒಂದಲ್ಲ ಒಂದು ದಿನ, ನನಗೆ ಕಾರಣ ಹೇಳದೆ ದೂರಕೆ ಸಾಗಿಬಿಡಬಹುದೇ? ನನ್ನ ಯಾವುದೋ ಒಂದು ಸಣ್ಣ ತಪ್ಪಿಗೆ ಮುಖ ತಿರುಗಿಸಿ ಮರಳಿ ಬಾರದ ದಾರಿ ತುಳಿದು ಬಿಡಬಹುದೇ? ಹಾಗನ್ನಿಸಿದಾಗೆಲ್ಲ ತುಂಬಾ ಭಯವಾಗುತ್ತದೆ. ನನ್ನಿಂದ ಯಾವುದೇ ಪ್ರಮಾದ ಆಗದಂತೆ ಎಚ್ಚರವಹಿಸುತ್ತೇನೆ. ಆದರೂ ಅನುಮಾನ ಕಾಡುವುದ ಬಿಡುವುದಿಲ್ಲ. ಒಂದರೆ ಘಳಿಗೆ ನೀನಿಲ್ಲದ ದಿನಗಳ ಊಹಿಸಿಕೊಂಡರೂ ಎದೆ, ಮನಸ್ಸು, ಹೃದಯ ಖಾಲಿ ಖಾಲಿಯಾದಂತೆ, ಶೂನ್ಯ ಕವಿದಂತೆ ಭಾಸವಾಗುತ್ತದೆ. ಯಾರು ಶಾಶ್ವತ ಈ ಭೂಮಿಯ ಮೇಲೆ? ಬದುಕನ್ನೇ ಪ್ರೀತಿಗೆ ಮುಡಿಪಿಟ್ಟು, ಹಗಲಿರುಳು ಪ್ರೇಮದ ಕನವರಿಕೆಯಲ್ಲಿ ಕಾಲ ನೂಕಿ ಕಾಲಗರ್ಭದಲ್ಲಿ ಹೂತು ಹೋದ ಅಮರಪ್ರೇಮಿಗಳಿಲ್ಲವೇ? ನಾವು ಅಮರಪ್ರೇಮಿಗಳಾಗದಿದ್ದರೂ ನಿರ್ಮಲ ಪ್ರೇಮಿಗಳಾಗೋಣ. ಸ್ವತ್ಛಂದ ಪ್ರೀತಿಗೆ ತಳಪಾಯ ಹಾಕೋಣ. ಸದಾ ಪ್ರೀತಿಗಾಗಿ, ಪ್ರೀತಿಗೋಸ್ಕರ, ಪ್ರೀತಿಯಿಂದಲೇ ಬದುಕೋಣ. ಗೆಳತಿ… ಇವು ಹುಚ್ಚು ಕಲ್ಪನೆಗಳಲ್ಲ, ಬದುಕಿನ ವಾಸ್ತ¤ವಗಳು! ದೀರ್ಘ ಪತ್ರ ಓದಿ ಬೇಸರವೆನಿಸಿತೇ? ಪ್ರೀತಿ ಯಾಚಿಸುವ ಫಕೀರನೊಬ್ಬ ತನ್ನ ನಲ್ಲೆಯ ಎದುರಿಗಲ್ಲದೆ ಮತ್ಯಾರ ಬಳಿ ತನ್ನ ಭಾವನೆಗಳನ್ನು ಬಿಚ್ಚಿಡಬಲ್ಲ? ನಾನು ಫಕೀರ ನಿಜ, ಆದರೆ ಫೆರಾರಿ ಮಾರಿದ ಫಕೀರನಲ್ಲ. ಏಕೆಂದರೆ, ನನಗೆ ಪ್ರೀತಿಯೇ ಫೆರಾರಿ! ನೀನೇ ಬೇಸರಿಸಿಕೊಂಡರೆ ಮಾತುಗಳು ಮೊಟಕುಗೊಂಡಾವು, ನಿರಂತರ ಪತ್ರಗಳು ನಿಂತು ಹೋದಾವು, ಬಿಚ್ಚಿಡಬೇಕಾದ ಗುಟ್ಟುಗಳು ಗುಂಡಿಗೆಯಲ್ಲಿಯೇ ಗಟ್ಟಿಯಾಗಿ ಉಳಿದು ಹೋದಾವು! ಹಾಗಾಗಿ, ಈ ಪ್ರೇಮದಾಸನ ಮಾತುಗಳಿಗೆ ಯಾವತ್ತೂ ಬೇಸರಿಸಿಕೊಳ್ಳದಿರು…
Related Articles
-ನಾಗೇಶ್ ಜೆ. ನಾಯಕ
Advertisement