ಪ್ಯಾರಿಸ್: ಬಾಹ್ಯಾಕಾಶಕ್ಕೆ ಮಾನವನ ಪ್ರಯಾಣ ಅಷ್ಟು ಸುಲಭವಲ್ಲ. ದೀರ್ಘಕಾಲದ ಯೋಜನೆಗಳಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ಹೋಗುವ ಗಗನಯಾತ್ರಿಗಳು ಮಾನವನ ದೇಹದ ಜೀವರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಪೈಕಿ ಒಂದು ಹಗುರಭಾವನೆ. ಗುರುತ್ವಾಕರ್ಷಣೆ ಪ್ರಭಾವವು ಕೊನೆಗೊಳ್ಳುತ್ತಿದ್ದಂತೆ ದೇಹದ ತೂಕವೇ ಇಲ್ಲದ ಸ್ಥಿತಿ ಭಾಸವಾಗುತ್ತದೆ.
ಈ ಸ್ಥಿತಿಯ ಪರಿಣಾಮಗಳನ್ನು ಅರಿಯಲು ಫ್ರಾನ್ಸ್‌ನ ಟೌಲೌಸ್‌ನಲ್ಲಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಸೈಸ್ಪೇಸ್ ತಂಡ ಮತ್ತು ವಿಜ್ಞಾನಿಗಳು “ವಿವಾಲ್ಡಿ’ ಎಂಬ ವಿಶಿಷ್ಟ ಪ್ರಯೋಗವನ್ನು ವಿನ್ಯಾಸಗೊಳಿಸಿದ್ದಾರೆ.
“ಹಗುರಭಾವನೆಯ ಕೆಲವು ಪರಿಣಾಮಗಳನ್ನು ತಗ್ಗಿಸಲು ಗಗನಯಾತ್ರಿಗಳು ವ್ಯಾಯಾಮ ಮತ್ತು ಸಪ್ಲಿಮೆಂಟ್ಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಮೈಕ್ರೋಗ್ರಾವಿಟಿಯ ಡೀಕಂಡಿಷನಿಂಗ್ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ಈ ಪ್ರಯೋಗ ಸಹಕಾರಿಯಾಗಲಿದೆ,’ ಎಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ವಿವಾಲ್ಡಿ ಪ್ರಯೋಗ ಎಂದರೇನು ? :
ವಿವಾಲ್ಡಿ ಪ್ರಯೋಗವು ನೆಲದ ಮೇಲೆ ಶೂನ್ಯ ಗುರುತ್ವಾಕರ್ಷಣೆ ಪರಿಣಾಮ ಉಂಟು ಮಾಡುವ ಸ್ಥತಿಯನ್ನು ಸೃಷ್ಟಿಸಲಿದೆ. ಈ ಪ್ರಯೋಗದಲ್ಲಿ ವ್ಯಕ್ತಿಯು ದೀರ್ಘ ಕಾಲದವರಗೆ ಶುಷ್ಕವಾಗಿ ಇರುವಂತೆ ನೀರಿನಲ್ಲಿ ಮುಳುಗಬೇಕಾಗುತ್ತದೆ. ಪ್ರಯೋಗಕ್ಕೆ ಒಳಾಗುವವರು ಜಲನಿರೋಧಕ ಬಟ್ಟೆಯನ್ನು ಧರಿಸಬೇಕಾಗುತ್ತದೆ.
ಜತೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ನೀರಿರುವ ಬಾತ್ ಟಬ್‌ನಲ್ಲಿ ಇರಿಸಲಾಗುತ್ತದೆ. ಜಲನಿರೋಧಕ ಬಟ್ಟೆಯೊಂದಿಗೆ ತೋಳುಗಳು ಮತ್ತು ತಲೆಯನ್ನು ನೀರಿನಿಂದ ಮೇಲೆ ಇರಿಸಲಾಗುತ್ತದೆ. ಈ ಪ್ರಯೋಗವು ಐದು ದಿನಗಳ ವರೆಗೆ ಮುಂದುವರಿಯುತ್ತದೆ. ಈ ವೇಳೆ ದಿಂಬು ಮತ್ತು ತೇಲುವ ಬೋರ್ಡ್‌ನ ಸಹಾಯದಿಂದ ಭೋಜನ ನೀಡಲಾಗುತ್ತದೆ. ವಿರಾಮಕ್ಕಾಗಿ ಸಿಬ್ಬಂದಿಯ ಸಹಾಯದಿಂದ ಅವರನ್ನು ತಾತ್ಕಾಲಿಕವಾಗಿ ನೀರಿನಿಂದ ಹೊರತೆಗೆಯಲಾಗುತ್ತದೆ.