ಮಯಾಮಿ: ಶ್ವಾನವೆಂದರೆ ಹೆಚ್ಚಿನವರ ಜೀವನದ ಅವಿಭಾಜ್ಯ ಅಂಗ. ಅದರ ಸ್ಮರಣಾರ್ಥ ಸ್ಮಾರಕ ನಿರ್ಮಾಣವನ್ನೂ ಕೆಲವರು ಮಾಡುತ್ತಾರೆ. ಆದರೆ, ಅಮೆರಿಕದ ಮಯಾಮಿ ನಗರದಲ್ಲಿರುವ ಶ್ವಾನವೊಂದಕ್ಕಿರುವ ಅದೃಷ್ಟವೋ ಅದೃಷ್ಟ. ಅದರ ಹೆಸರಿನಲ್ಲಿ 3,715 ಕೋಟಿ ರೂ. ಮೌಲ್ಯದ ಆಸ್ತಿ ಇದೆಯಂತೆ. ಅದರ ಹೆಸರೇನು ಗೊತ್ತೇ ಆರನೇ ಗುಂಥರ್.
ಜಗತ್ತಿನಲ್ಲಿ ಅತ್ಯಂತ ಅದ್ಧೂರಿ ವೆಚ್ಚದ ಬಂಗಲೆಯಲ್ಲಿ ಅದರ ವಾಸ್ತವ್ಯ. ಈ ನಾಯಿಯ ಅಜ್ಜ ನಾಲ್ಕನೇ ಗುಂಥರ್ ಹೆಸರಿನಲ್ಲಿ ಈ ಬಂಗಲೆ ಇತ್ತಂತೆ. ಇದೇ ಶ್ವಾನದ ಕುಟುಂಬಕ್ಕೆ ಸೇರಿದ ಮೂರನೇ ಗುಂಥರ್ ಹೆಸರಿನಲ್ಲಿ 431 ಕೋಟಿ ರೂ. ಮೌಲ್ಯದ ಆಸ್ತಿ ಇತ್ತು. ಅದು 1992ರಲ್ಲಿ ಅಸುನೀಗಿತ್ತು. ಈ ಆಸ್ತಿಯ ಮೂಲ ಮಾಲೀಕ ಜರ್ಮನ್ ಕೌಂಟ್‌ಲೆಸ್ ಕಾರ್ಲೊಟ್ಟಾ ಲೆಬೈನ್‌ಸ್ಟೈನ್ ಆಗಿದ್ದರು. ಅವರು ಅಸುನೀಗಿದ ಬಳಿಕ ಆಸ್ತಿಯ ಮಾಲೀಕತ್ವ ಗುಂಥರ್ ಶ್ವಾನದ ಕುಟುಂಬಕ್ಕೆ ಲೆಬೈನ್‌ಸ್ಟೈನ್‌ನ ಕುಟುಂಬಸ್ಥರು ವರ್ಗಾಯಿಸಿದ್ದರು. ಈ ಆಸ್ತಿಯ ಮಾರುಕಟ್ಟೆ ಮೌಲ್ಯ ಬೆಳೆದು 3, 715 ಕೋಟಿ ರೂ.ಗೆ ಬಂದಿದೆ.
ವಿಶ್ವದ ಅತ್ಯಂತ ಸಿರಿವಂತ ಶ್ವಾನ ಉಸ್ತುವಾರಿಯನ್ನು ಹ್ಯಾಂಡರ್ಸ್ ಎಂಬುವರು ನೋಡಿಕೊಳ್ಳುತ್ತಿದ್ದಾರೆ. ಆರನೇ ಗುಂಥರ್ ಶ್ವಾನ ತಾನು ಇದ್ದ ಅದ್ಧೂರಿ ಬಂಗಲೆಯನ್ನು ಮಡೋನ್ನಾ ಎಂಬುವರಿಗೆ ಮಾರಾಟ ಮಾಡಿತ್ತು. ಅದನ್ನು ಖರೀದಿ ಮಾಡಿದವರು ಮತ್ತೆ ಅದನ್ನು 238 ಕೋಟಿ ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಕ್ಷಮೆ ಯಾಚಿಸಿದರೆ ಸಾಲದು,ಹೊಣೆ ಹೊರಬೇಕು: ಪ್ರಕಾಶ್ ರಾಜ್
ಮತ್ತೆ ಅದನ್ನು ಈ ಶ್ವಾನವೇ ಖರೀದಿ ಮಾಡುತ್ತಿದೆ. ಈ ಅದ್ಧೂರಿ ಬಂಗಲೆಯಲ್ಲಿ 9 ಬೆಡ್‌ರೂಮ್, ಎಂಟು ಸ್ನಾನ ಗೃಹ, ಬಂಗಲೆಯ ಹೊರ ಆವರಣದಲ್ಲಿ ಈಜುಕೊಳವಿದೆ. ಬಂಗಲೆಯ ಮಾರಾಟದ ಉಸ್ತುವಾರಿ ಹೊತ್ತಿದ್ದ ರೂಥ್ ಮತ್ತು ಎಥಾನ್ ಅಸೌಲಿನ್‌ನ ಹಿರಿಯ ಅಧಿಕಾರಿ “ಈ ಬಂಗಲೆಯ ಮಾಲೀಕರು ಶ್ವಾನವೆಂದು ತಿಳಿದು ಅಚ್ಚರಿಗೊಂಡೆ’ ಎಂದು ಉದ್ಗರಿಸಿದ್ದರಂತೆ.