ಲಕ್ನೋ : ಅಯೋಧ್ಯೆಗೆ ಸಂಬಂಧಿಸಿದಂತೆ ಈ ದೀಪಾವಳಿಗೆ ನೀವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಕೆಲವು ಮಹತ್ವದ ಪ್ರಕಟನೆಗಳನ್ನು ಕೇಳಬಹುದಾಗಿದೆ ಎಂದು ಉತ್ತರ ಪ್ರದೇಶ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಮಹೇಂದ್ರ ನಾಥ್ ಪಾಂಡೆ ಇಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ ಪಾಂಡೆ, ”ಅದನ್ನು ಮಹಾನ್ ಸಂತ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಪ್ರಕಟಿಸುವುದು ಸೂಕ್ತ” ಎಂದು ಹೇಳಿದರು.
“ದೀಪಾವಳಿ ಬರಲಿ; ಅಯೋಧ್ಯೆಯ ಬಗ್ಗೆ ನಿಮಗೆಲ್ಲ ಖುಷಿ ಸುದ್ದಿ ಸಿಗಲಿದೆ’ ಎಂದು ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸುಪ್ರೀಂ ಕೋರ್ಟ್ ಅಯೋಧ್ಯೆಯ ರಾಮ ಜನ್ಮಭೂಮಿ ಒಡೆತನದ ವಿವಾದದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿದ ಎರಡೇ ದಿನಗಳ ತರುವಾಯ ಪಾಂಡೆ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಸುಪ್ರೀಂ ಕೋರ್ಟಿನಿಂದ ವಿಚಾರಣೆ ಮುಂದೂಡಿಕೆಗೆ ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಯಿಂದ ಕಟುವಾದ ಟೀಕೆ ವ್ಯಕ್ತವಾಗಿತ್ತು.
ಸುಪ್ರೀಂ ಕೋರ್ಟ್ ನಿರ್ಧಾರ ಪ್ರಕಟವಾದ ಒಂದು ದಿನದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಶಾಂತಿ ಮತ್ತು ಸಹೋದರತೆಗಾಗಿ ಅಯೋಧ್ಯೆ ವಿವಾದವನ್ನು ಕ್ಲಪ್ತವಾಗಿ ಇತ್ಯರ್ಥಪಡಿಸುವ ಅಗತ್ಯವಿದೆ’ ಎಂದು ಹೇಳಿದ್ದರು.