Advertisement

ಈ ಠೇವಣಿ ಫ್ಲೆಕ್ಸಿಬಲ್‌

02:55 PM Feb 27, 2017 | |

ಗ್ರಾಹಕರನ್ನು ಸೆಳೆಯಲು ಬ್ಯಾಂಕುಗಳು ನಾನಾ ರೀತಿಯ ಠೇವಣಿ ಯೋಜನೆಗಳನ್ನು ವಿನ್ಯಾಸಗೊಳಿಸುತ್ತವೆ. ಬಹುತೇಕ ಪ್ರಕರಣಗಳಲ್ಲಿ ಹೆಸರುಗಳಷ್ಟೇ ಬೇರೆಯಾಗಿದ್ದು, ದೊರೆಯುವ ಸವಲತ್ತುಗಳು ಮತ್ತು ಲಾಭಗಳು ಮಾತ್ರ ಒಂದೇ ಆಗಿರುತ್ತವೆ. ಕೆಲವುಗಳಲ್ಲಿ   

Advertisement

ಲಾಭಗಳಿದ್ದರೂ  ಅದು ಮಾರ್ಜಿನಲ್‌ ಇರುತ್ತಿದ್ದು, ಹೆಸರಿಗಷ್ಟೇ ಲಾಭ ದೊರಕುತ್ತದೆ.  ಕೆಲವು ಸ್ಕೀಮ್‌ಗಳಲ್ಲಿ  ಗ್ರಾಹಕರು  ಸ್ವಲ್ಪ ಲಾಭವನ್ನೂ ಪಡೆಯತ್ತಾರೆ. ಬ್ಯಾಂಕುಗಳು ಅವುಗಳಿಗೆ ಕೊಡುವ ಪ್ರಚಾರ,  ಅವುಗಳನ್ನು ಮಾರ್ಕೆಟಿಂಗ್‌ ಮಾಡುವ  ವೈಖರಿ, ಅವುಗಳನ್ನು ಪ್ಯಾಕೇಜಿಂಗ್‌ ಮಾಡುವ ಪರಿ ವಿಶೇಷವಾಗಿರುತ್ತದೆ. ನಾಲ್ಕು ಕಾಸು  ಹೆಚ್ಚಿಗೆ  ಪಡೆಯುವ ದೌರ್ಬಲ್ಯದಲ್ಲಿ ಆಥವಾ ಆಸೆಯಲ್ಲಿ ಇಂಥ ಸ್ಕೀಮ್‌ಗಳತ್ತ ಗ್ರಾಹಕರು ಆಕರ್ಷಿಸಲ್ಪಡುತ್ತಾರೆ. ಇವುಗಳಲ್ಲಿ ಮೋಸ ಅಥವಾ ವಂಚನೆಗಳಿರುವುದಿಲ್ಲ.  ಅವರು ಹೇಳುವುದನ್ನು ನೇರವಾಗಿ ಹೇಳದೇ ಸ್ವಲ್ಪ ಸುತ್ತಿ ಬಳಸಿ ಅಲಂಕಾರ ಉಪಮೆಗಳೊಂದಿಗೆ ಹೇಳುತ್ತಾರೆ. ಉಳಿದವರಿಗಿಂತ ಮತ್ತು ಉಳಿದವುಗಳಿಗಿಂತ ಹೆಚ್ಚು ಕೊಡುತ್ತೇವೆ  ಎಂದು ಅರ್ಥಗರ್ಭಿತವಾಗಿ ಬಿಂಬಿಸುತ್ತಾರೆ. ಹಣ ದುಬ್ಬರದ ದಿನಗಳಲ್ಲಿ ಒಂದು ಕಾಸು ಹೆಚ್ಚಿಗೆ ಬಂದರೂ ಪರಮಾನ್ನ ಎಂದು ಸ್ವೀಕರಿಸುವ  ದೌರ್ಬಲ್ಯ ಗ್ರಾಹಕರಲ್ಲಿ ಇರುವಾಗ,  ಬ್ಯಾಂಕುಗಳು ಬಹುಬೇಗ ಎನ್‌ಕ್ಯಾಷ್‌ ಮಾಡುತ್ತವೆ.  ಅಂತೆಯೇ ಈ ಯೋಜನೆಗಳು ಬಹುಬೇಗ  ಕ್ಲಿಕ್‌ ಆಗುತ್ತವೆ. ಪಾರಂಪರಿಕ  ಠೇವಣಿ ಯೋಜನೆಗಳು ಕ್ರಮೇಣ ಮೆರುಗನ್ನು ಕಳೆದುಕೊಳ್ಳುತ್ತಿದ್ದು,  ಬ್ಯಾಂಕುಗಳು ಮತ್ತು ಗ್ರಾಹಕರು ಹೊಸದನ್ನು  ಸದಾ ಬಯಸುತ್ತವೆ. ಹೊಸದನ್ನು ಕೊಡಲಾಗದಿದ್ದರೂ,  ಹೊಸತನವನ್ನು ತೋರಿಸುವ ಅನಿವಾರ್ಯತೆ ಇರುತ್ತದೆ. ಇಂಥ ಜನಾಕರ್ಷಣೆಯ  ಹಲವು ಠೇವಣಿ ಸ್ಕೀಮ್‌ಗಳಲ್ಲಿ  ಫ್ಲೆಕ್ಸಿ ಠೇವಣಿ  ಸ್ಕೀಮ್‌ ಕೂಡಾ ಒಂದು.

ಫ್ಲೆಕ್ಸಿ ಠೇವಣಿ ಸ್ಕೀಮ್‌ ಎಂದರೇನು?
ಇದು ಬ್ಯಾಂಕುಗಳು ತನ್ನ ಗ್ರಾಹಕರಿಗಾಗಿ ವಿಶೇಷವಾಗಿ  ವಿನ್ಯಾಸ ಗೊಳಿಸಿದ  ಡಿಮಾಂಡ… ಮತ್ತು ನಿಶ್ಚಿತ ಅವಧಿಯ, ಹೀಗೆ ಎರಡೂ ರೀತಿಯ ಠೇವಣಿಗಳನ್ನು ಸಮ್ಮಿಶ್ರಗೊಳಿಸಿದ  ವಿಶೇಷ ಠೇವಣಿ ಖಾತೆ.  ಇದರಲ್ಲಿ ಖಾತೆದಾರ  ಚಾಲ್ತಿ ಮತ್ತು ಉಳಿತಾಯ ಖಾತೆಯ ಲಿಕ್ವಿಡಿಟಿ ಮತ್ತು ನಿಶ್ಚಿತ ಅವಧಿ ಠೇವಣಿಯ ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯಬಹುದು.  ಈ  ಸೌಲಭ್ಯವನ್ನು  ಪ್ರತಿಯೊಂದು ಬ್ಯಾಂಕುಗಳು ನೀಡುತ್ತಿದ್ದು, ವಿದೇಶಗಳಲ್ಲಿಯೂ ಪ್ರಚಲಿತವಿದೆ. ಈ ಖಾತೆಯ ವಿಶೇಷವೆಂದರೆ, ಇದರ ಬದಲಾಗುವ  ವೈಖರಿ. ಸಮಯಕ್ಕೆ  ಸರಿಯಾಗಿ, ಗ್ರಾಹಕನ ಅವಶ್ಯಕತೆಗೆ ಅನುಗುಣವಾಗಿ, ಇದು ಊಸರವಳ್ಳಿ ಹಾವಿನಂತೆ, ಬಣ್ಣ ಬದಲಾಯಿಸಿ ಗ್ರಾಹಕನ  ಅವಶ್ಯಕತೆಗೆ  ಸ್ಪಂದಿಸುತ್ತದೆ.

 ಇದು ಹೇಗೆ ಕೆಲಸ ಮಾಡುತ್ತದೆ?
ಈ ಠೇವಣಿಗಳು ಇನ್ನಿತರ ನಿಶ್ಚಿತ ಅವಧಿಯ ಠೇವಣಿಗಳಿಗಿಂತ ನಗದಾಗುವಿಕೆ ಮತ್ತು  ಗ್ರಾಹಕರ ಆಶಯಕ್ಕೆ ತಕ್ಕಂತೆ ಬದಲಾಗುವ ವಿಚಾರದಲ್ಲಿ ಭಿನ್ನವಾಗಿರುತ್ತವೆ. ಸಾಮಾನ್ಯ ನಿಶ್ಚಿತ ಅವಧಿ ಠೇವಣಿಗಳನ್ನು ಒಂದು ನಿರ್ದಿಷ್ಟ ಮೊತ್ತಕ್ಕೆ, ನಿರ್ದಿಷ್ಟ ಸಮಯಕ್ಕೆ  ಮತ್ತು ನಿರ್ದಿಷ್ಟ ಬಡ್ಡಿ ದರಕ್ಕೆ ಇಡಲಾಗುವುದು. ಠೇವಣಿ ಅವಧಿಯ ಮೊದಲು ಇದನ್ನು ಹಿಂಪಡೆಯಲಾಗದು.  ತುರ್ತು ಅಗತ್ಯ ಬಿದ್ದಲ್ಲಿ,  ಹಿಂಪಡೆಯ ಬೇಕಾದರೆ ದಂಡ ಕೊಡಬೇಕಾಗುವುದು. ಆದರೆ ಫ್ಲೆಕ್ಸಿಖಾತೆಯಲ್ಲಿ ಫ್ಲೆಕ್ಸಿ ಮೊತ್ತದವರೆಗೆ   ಹಣವನ್ನು  ಹಿಂಪಡೆಯಬಹುದು. ಉದಾಹರಣೆಗೆ 50000 ರೂ. ಗೆ   179 ದಿವಸಗಳಿಗೆ ಇಂಥ ಖಾತೆಯನ್ನು ತೆರೆದರೆ, ಈ ಅವಧಿಗೆ ನಿಶ್ಚಿತ ಅವಧಿಯ ಠೇವಣಿಗೆ ದೊರಕುವ  ಬಡ್ಡಿ  ಸಿಗುತ್ತದೆ. ನಿಮ್ಮ ಫ್ಲೆಕ್ಸಿ ಖಾತೆಯಲ್ಲಿ 10,0000 ರೂ. ಬ್ಯಾಲೆನ್ಸ್‌ ಇದ್ದರೆ, ಫ್ಲೆಕ್ಸಿ ನಿಶ್ಚಿತ ಅವಧಿ ಠೇವಣಿ 70,000  ಒಂದು  ವರ್ಷದ  ಅವಧಿಗೆ ಶೇ.5 ರಷ್ಟು ಬಡ್ಡಿಯನ್ನು ಕೊಡುತ್ತಿದ್ದು, ವಾರ್ಷಿಕ 3,500 ಬಡ್ಡಿ ಬರುತ್ತದೆ. ಬಾಕಿ ಉಳಿದ 30,000 ರೂಪಾಯಿ ಉಳಿತಾಯ ಖಾತೆಯಲ್ಲಿ ಇರುತ್ತಿದ್ದು,   ಈ ಬ್ಯಾಲೆನ್ಸ್‌ಗೆ  ಉಳಿತಾಯ  ಖಾತೆಯ ಬಡ್ಡಿ ದೊರಕುತ್ತದೆ. ಅಕಸ್ಮಾತ್‌ ಈ ಖಾತೆಯಿಂದ   50,000 ರೂ. ಗೆ ಚೆಕ್‌ ನೀಡಿದರೆ, ಚೆಕ್‌ ಅನ್ನು  ವಾಪಸ್‌ಮಾಡದೇ  20,000 ರೂ.ಅನ್ನು   ಫ್ಲೆಕ್ಸಿ ಖಾತೆಯಿಂದ  ಉಳಿತಾಯ ಖಾತೆಗೆ  ವರ್ಗಾಯಿಸಿ ಚೆಕ್‌ ಅನ್ನು  ಪಾಸ್‌ ಮಾಡಲಾಗುವುದು. 

ಉಳಿತಾಯ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್‌  ಇಲ್ಲವೆಂದು ಚೆಕ್‌ಅನ್ನು ಹಿಂತಿರುಗಿಸುವುದಿಲ್ಲ.  ನಿಮ್ಮ ಉಳಿತಾಯ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್‌ ಇರದಿದ್ದಾಗ, ಈ ಫ್ಲೆಕ್ಸ್‌ ಖಾತೆಗಳು  ನೆರವಿಗೆ ಬರುತ್ತವೆ.  ಅಂಥ ಪ್ರಸಂಗದಲ್ಲಿ  ಬ್ಯಾಂಕುಗಳು  ತಾವೇ  ಈ ಪ್ರಕ್ರಿಯೆಯನ್ನು ಮಾಡುತ್ತವೆ. ಉಳಿತಾಯ ಖಾತೆಯಲ್ಲಿ ಅವಶ್ಯಕತೆ ಇಲ್ಲದೇ ಬ್ಯಾಲೆನ್ಸ್‌ ಇರುವಾಗ  ಈ ಸೌಲಭ್ಯವನ್ನು ಬಳಸಿಕೊಂಡು ಸ್ವಲ್ಪ ಹೆಚ್ಚು ಬಡ್ಡಿಯನ್ನು ಗಳಿಸಬಹುದು. ಆದರೆ, ಈ ಲಾಭ ಕೇವಲ ಅಲ್ಪಾವಧಿ ಸಮಯಕ್ಕೆ ಮಾತ್ರ ಉಪಯೋಗಿಸಬಹುದು. ಇದಕ್ಕೂ ಮಿಗಿಲಾಗಿ ಈ ಸ್ಕೀಮ್‌ ಗ್ರಾಹಕರ ಹಣವನ್ನು ಗ್ರಾಹಕರಿಗೆ  ನೀಡಿ ಬ್ಯಾಂಕುಗಳು ಭಾರೀ ಸಹಾಯ ಮಾಡಿದಂತೆ  ಬಿಂಬಿಸಲಾಗುವುದು.  ಹೆಚ್ಚಿಗೆ  ಲಾಭ  ಇಲ್ಲದಿದ್ದರೂ ಗ್ರಾಹಕರಿಗೆ  ಅನುಕೂಲವಾಗುತ್ತದೆ ಎನ್ನುವುದನ್ನು ಅಲ್ಲ ಗೆಳೆಯಲಾಗದು. ಸ್ವಲ್ಪ  adjustment ಮಾಡಿಕೊಂಡು ಗ್ರಾಹರಿಗೆ ಅನುಕೂಲ ಮಾಡಿ ಕೊಡುವುದು ಈ ಫ್ಲೆಕ್ಸಿ ಖಾತೆಗಳ ಹಿಂದಿನ ಉದ್ದೇಶ ಎನ್ನಬಹುದು.  ಅಂತೆಯೇ ಇದನ್ನು ಫ್ಲೆಕ್ಸಿ ಎಂದು ಕರೆಯತ್ತಾರೆ.

Advertisement

 ಇಂಥ ಖಾತೆಗಳನ್ನು ಯಾರು ತೆರೆಯಬಹುದು ಎನ್ನುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಮಧ್ಯ ಏಕರೂಪತೆ ಇರುವುದಿಲ್ಲ.  ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಅರ್ಹರಿರುವರೆಲ್ಲಾ ಇಂಥ ಠೇವಣಿ ಖಾತೆಯನ್ನು ತೆರೆಯಬಹುದು. ಈ  ಖಾತೆಗಳ  ಮೂಲ ಉದ್ದೇಶ ಮತ್ತು ನೀತಿ ನಿಯಮಾವಳಿಗಳು ಒಂದೇ ಆಗಿದ್ದರೂ, ಇಡಬೇಕಾದ ಕನಿಷ್ಟ ಮೊತ್ತ, ಠೇವಣಿಯ  ಸಮಯ ಮುಂತಾದವುಗಳ ವಿಷಯದಲ್ಲಿ ಸಾಕಷ್ಟು ಭಿನ್ನತೆ ಇದೆ. ಹಾಗೆಯೇ ನೀಡುವ ಬಡ್ಡಿದರದಲ್ಲಿಯೂ  ವ್ಯತ್ಯಾಸ ಇರುತ್ತದೆ. ಗಳಿಸಿದ ಬಡ್ಡಿಯ ಮೇಲೆ ಟಿಡಿಎಸ್‌  ಕೂಡಾ ಆಕರಿಸಲಾಗುವುದು. ಈ ಖಾತೆಯನ್ನು ಒಂದು ರೀತಿಯ ತತ್ಕಾಲದ  ಸಹಾಯ ಎಂದೂ ಕರೆಯಬಹುದು. ಈ ಸ್ಕೀಮ…ನಲ್ಲಿ ಬ್ಯಾಂಕುಗಳು ನೀಡುವ ಹಣ ಒಂದು ರೀತಿಯಲ್ಲಿ ಪರೋಕ್ಷವಾಗಿ ಠೇವಣಿಯನ್ನು  ಪಕ್ವವಾಗುವ ಮೊದಲೇ  ಹಂತ- ಹಂತವಾಗಿ ಮುರಿಸುವ ಪ್ರಕ್ರಿಯೆಯಾಗಿರುತ್ತದೆ. ನಿಶ್ಚಿತ ಅವಧಿ ಠೇವಣಿ ಆಧಾರದ ಮೇಲೆ ಬ್ಯಾಂಕುಗಳು ಗ್ರಾಹಕನ  ತತ್ಕಾಲದ ಹಣದ ಅವಶ್ಯಕತೆಯನ್ನು ಪೂರೈಸುತ್ತವೆ ಮತ್ತು ಬ್ಯಾಂಕುಗಳಿಗೆ ಇದರಲ್ಲಿ 

ಯಾವುದೇ ರೀತಿಯ ರಿಸ್ಕ್ ಇರುವುದಿಲ್ಲ. ಗ್ರಾಹಕನೂ  ತನ್ನ  ತತ್ಕಾಲದ ಹಣಕಾಸು ಅವಶ್ಯಕತೆಗಾಗಿ ಪ್ರತ್ಯೇಕವಾಗಿ ಸಾಲವನ್ನು ಕೇಳುವ ಅಗತ್ಯ ಬೀಳುವುದಿಲ್ಲ. ಈ ಸ್ಕೀಮ್‌ ಅನ್ನು ವೈಯುಕ್ತಿಕ ಹಣಕಾಸು ನಿರ್ವಹಣೆಯ  ಅತಿ ಜಾಣ್ಮೆಯ ನಡೆ ಎಂದು ಬ್ಯಾಂಕಿನವರು 

ಬಣ್ಣಿಸುತ್ತಾರೆ. ಇದನ್ನು ಬ್ಯಾಂಕಿನವರಿಗೆ ಮತ್ತು ಗ್ರಾಹಕರಿಗೆ ಹೀಗೆ ಇಬ್ಬರಿಗೂ ನೋ ಲಾಸ್‌ ನೋ ಪ್ರಾಫಿಟ್‌ ವ್ಯವಹಾರ  ಎಂದು  ಹೇಳಲಾಗುತ್ತದೆ. ಬ್ಯಾಂಕಿಂಗ್‌ನ ಅಪಾರ ಅನುಭವ ಇರುವವರು ಇಂಥ ಸ್ಕೀಮ್‌ಗಳನ್ನು ಹೊಸ ಬಣ್ಣದ, ಹೊಳೆಯುವ  ಮತ್ತು ವಿನ್ಯಾಸದ  ಬಾಟಲಿಯಲ್ಲಿ ಹಳೆ ಮಧ್ಯೆ ಎಂದು ಟೀಕಿಸುತ್ತಾರೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next