Advertisement

ಈ ಸೋಲು ಪಾಠವಾಗಬೇಕು: ಹೋಲ್ಡರ್‌

01:11 AM Jun 08, 2019 | Team Udayavani |

ನಾಟಿಂಗ್‌ಹ್ಯಾಮ್‌: ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧದ ಸೋಲು ನಮಗೊಂದು ಪಾಠ ಆಗಬೇಕು ಎಂಬುದಾಗಿ ವೆಸ್ಟ್‌ ಇಂಡೀಸ್‌ ನಾಯಕ ಜಾಸನ್‌ ಹೋಲ್ಡರ್‌ ಹೇಳಿದ್ದಾರೆ.

Advertisement

‘ಈ ಸೋಲಿನಿಂದ ತೀವ್ರ ನಿರಾಸೆಯಾಗಿದೆ. ಕೆಲವು ಬೇಜವಾಬ್ದಾರಿಯ ಹೊಡೆತಗಳು ನಮಗೆ ಮುಳುವಾದವು. ಇನ್ನಷ್ಟು ಹೊತ್ತು ಕ್ರೀಸಿನಲ್ಲಿ ಉಳಿದು ಜತೆಯಾಟ ಬೆಳೆಸಬೇಕಿತ್ತು. ಚೇಸಿಂಗ್‌ ವೇಳೆ ಯಾವತ್ತೂ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೋಲ್ಟರ್‌ ನೈಲ್ 60 ರನ್‌ ಮಾಡಿದಾಗ ಜೀವದಾನ ನೀಡಿದೆವು. ಅವರು ಹೆಚ್ಚುವರಿ 30 ರನ್‌ ಹೊಡೆದರು. ಇದು ಕೂಡ ನಮಗೆ ದುಬಾರಿಯಾಯಿತು. ಆದರೂ ಈ ಪಂದ್ಯದಿಂದ ಸಾಕಷ್ಟು ಧನಾತ್ಮಕ ಅಂಶಗಳನ್ನು ಪಡೆದಿದ್ದೇವೆ’ ಎಂದು ಹೋಲ್ಡರ್‌ ಹೇಳಿದರು.

‘ಇದು ಪಂದ್ಯಾವಳಿಯ ಆರಂಭಿಕ ಹಂತ ಮಾತ್ರ. ಅವಕಾಶ ಎಲ್ಲರಿಗೂ ಮುಕ್ತವಾಗಿದೆ. ಇನ್ನಷ್ಟು ಸ್ಥಿರವಾದ ಪ್ರದರ್ಶನ ನೀಡಬೇಕಿದೆ. ಈ ಕೂಟದಲ್ಲಿ ನಾವು ಜಯಶಾಲಿಯಾಗಲಿದ್ದೇವೆ ಎಂಬ ನಂಬಿಕೆ ಇದೆ’ ಎಂದೂ ಹೋಲ್ಡರ್‌ ಹೇಳಿದರು.

ನೈಲ್‌ಗೆ ನಂಬಿಕೆ ಇರಲಿಲ್ಲವಂತೆ!
ನಥನ್‌ ಕೋಲ್ಟರ್‌ ನೈಲ್ ಈ ಪಂದ್ಯದ ರಿಯಲ್ ಹೀರೋ. ಆದರೆ ಇಂಥದೊಂದು ದೊಡ್ಡ ಇನ್ನಿಂಗ್ಸ್‌ ಕಟ್ಟಬಲ್ಲೆನೆಂಬ ನಂಬಿಕೆ ನನಗಿರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಅದೃಷ್ಟ ನನ್ನ ಪಾಲಿಗಿತ್ತು. ಕೆಲವು ದೊಡ್ಡ ಹೊಡೆತಗಳು ಸುರಕ್ಷಿತ ಪ್ರದೇಶದಲ್ಲಿ ಬಿದ್ದವು. ಹಾಗೆಯೇ ನಮ್ಮ ಬೌಲರ್‌ಗಳ ಮೇಲೆ ವಿಶ್ವಾಸವಿತ್ತು’ ಎಂದು ಕೋಲ್ಟರ್‌ ನೈಲ್ ಹೇಳಿದರು.

Advertisement

ಅಂಪಾಯರ್‌ ಎಡವಟ್ಟು!
ಈ ಪಂದ್ಯದ ವೇಳೆ ಅಂಪಾಯರ್‌ಗಳಾದ ರುಚಿರ ಪಲ್ಲಿಯಗುರುಗೆ ಮತ್ತು ಕ್ರಿಸ್‌ ಗಫಾನಿ ಸಾಕಷ್ಟು ಎಡವಟ್ಟು ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದರು. ವಿಶ್ವಕಪ್‌ನಂಥ ಪ್ರತಿಷ್ಠಿತ ಕೂಟದಲ್ಲಿ ಇಂಥ ಕಳಪೆ ಅಂಪಾಯರಿಂಗೇ ಎಂದು ಎಲ್ಲರೂ ಪ್ರಶ್ನಿಸುವಂತಾಯಿತು. ಇದಕ್ಕೆ ಬಲಿಯಾದವರು ವಿಂಡೀಸಿನ ಸ್ಫೋಟಕ ಆರಂಭಕಾರ ಕ್ರಿಸ್‌ ಗೇಲ್. ಅವರ ವಿರುದ್ಧ 2 ಸಲ ಅಂಪಾಯರ್‌ಗಳು ಲೆಗ್‌ ಬಿಫೋರ್‌ ತೀರ್ಪು ನೀಡಿದರು. ಎರಡೂ ಸಲ ಡಿಆರ್‌ಎಸ್‌ ಮೂಲಕ ನಾಟೌಟ್ ತೀರ್ಪು ಬಂತು. ಬಳಿಕ ಸ್ಟಾರ್ಕ್‌ ಎಸೆದ 5ನೇ ಓವರಿನ 5ನೇ ಎಸೆತದಲ್ಲಿ ಗೇಲ್ ಮತ್ತೆ ಎಲ್ಬಿ ಆದರು. ಡಿಆರ್‌ಎಸ್‌ ತೀರ್ಪಿನಲ್ಲೂ ಔಟ್ ಎಂಬುದು ಸಾಬೀತಾಯಿತು. ಆದರೆ ಸ್ಟಾರ್ಕ್‌ ಅವರ ಇದಕ್ಕೂ ಹಿಂದಿನ ಎಸೆತ ನೋಬಾಲ್ ಆಗಿತ್ತು. ಅವರ ಕಾಲು ಬೌಲಿಂಗ್‌ ಕ್ರೀಸ್‌ಗಿಂತ ಎಷ್ಟೋ ಮುಂದಿತ್ತು. ಹೀಗಾಗಿ ಅನಂತರದ ಎಸೆತ ಫ್ರೀ ಹಿಟ್ ಆಗಬೇಕಿತ್ತು. ಆಗ ಗೇಲ್ ಬಚಾವಾಗುತ್ತಿದ್ದರು. ಆದರೆ ಈ ನೋಬಾಲ್ ಅಂಪಾಯರ್‌ ಕಣ್ಣಿಗೆ ಬೀಳಲೇ ಇಲ್ಲ!

Advertisement

Udayavani is now on Telegram. Click here to join our channel and stay updated with the latest news.

Next