Advertisement

ಈ “ಕಾಪಿ’ದುನಿಯಾ: ಕಲ್ಲಿನೊಂದಿಗೆ ಹಾರಿದ ಲಂಕೇಶ್‌ ಪೋಯೆಮ್ಮು! 

09:23 AM Aug 22, 2017 | |

ನಮ್ಮ ಚೀಟಿಯಲ್ಲಿ ಉತ್ತರಗಳು ಮಾತ್ರವಲ್ಲದೇ, ಆ ಚೀಟಿ ಯಾರಿಂದ ಯಾರಿಗೆ ತಲುಪಬೇಕು ಎಂಬ ಸೂಚನೆಯನ್ನೂ ಬರೆಯುತ್ತಿದ್ದೆವು…
  
ಅದು ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ ಸಮಯ. ಅಂದು ಇಂಗ್ಲಿಷ್‌ ಪರೀಕ್ಷೆ ಇತ್ತು. ನಾವು ಹತ್ತು ಜನ ಸ್ನೇಹಿತರು ಸೇರಿ ಪ್ಲಾನ್‌ ಮಾಡಿ, ನಮಗೆ ಬೇಕಾದ ಗೈಡ್‌ನ‌ ಹಾಳೆ ಮತ್ತು ಪಟ್ಟಿ ನೋಟ್ಸ್‌ ಹರಿದು ಅದರಲ್ಲಿ ಸಣ್ಣ ಸಣ್ಣ ಕಲ್ಲು ಹಾಕಿ, ಕಾಗದದ ಮುದ್ದೆ ಮಾಡಿ ಒಬ್ಬರಿಂದ ಒಬ್ಬರಿಗೆ ಥ್ರೋಬಾಲ… ಥರ ಪಾಸ್‌ ಮಾಡುವ ಪ್ಲಾನ್‌ ಮಾಡಿದೆವು.

Advertisement

ಪರೀಕ್ಷೆ ಶುರುವಾಯಿತು. ಕಾಪಿ ಚೀಟಿ ರೊಟೇಶನ್‌ ಆಗ್ತಾ ಇತ್ತು. ಇನ್ನೇನು ಪರೀಕ್ಷೆ ಮುಗಿಯಲಿಕ್ಕೆ ಒಂದು ತಾಸು ಬಾಕಿ ಇತ್ತು. ನನ್ನ ಸ್ನೇಹಿತನೊಬ್ಬನ ಕೈಯಲ್ಲಿ ನನಗೆ ಬೇಕಾದ ಕಾಪಿ ಚೀಟಿ ಇತ್ತು. ಎಷ್ಟೊತ್ತಾದರೂ ಅದು ನನ್ನ ಬಳಿ ಬರಲಿಲ್ಲ. ನಾನು ಮೆಲ್ಲಗೆ ಗದರಿದಾಗ ಅವನು ಒಂದೇ ಸಲ ಅದರಲ್ಲಿ ಕಲ್ಲು ಹಾಕಿ ಸಿಟ್ಟಿನಿಂದ ಜೋರಾಗಿ ನನ್ನತ್ತ ಎಸೆದ. ಅವನು ಎಸೆದ ಫೋರ್ಸಿಗೆ ಅದು ಮಿಸ್‌ ಆಗಿ ನಮ್ಮ ರೂಮ್‌ಗೆ ಇನ್‌ವಿಜಿಲೇಟರ್‌ ಆಗಿ ಬಂದಿದ್ದ ನಮ್ಮದೇ ಶಾಲೆಯ ಹೆಗಡೆ ಸರ್‌ ತಲೆಗೆ ಬಿದ್ದಿತ್ತು. ಪಾಪ, ಪತ್ರಿಕೆ ಓದುತ್ತಾ ಮೈಮರೆತು ಕೂತಿದ್ದವರು, ಒಮ್ಮೆಲೇ “ಅಯ್ಯಪ್ಪಾ’ ಎನ್ನುತ್ತಾ ದಢಕ್ಕನೆ ಹೌಹಾರಿ ಕೆಳಗೆ ಬಿದ್ದರು. ಪುಣ್ಯಾತ್ಮ ಗೆಳೆಯ ಕಾಪಿಚೀಟಿಯಲ್ಲಿ ದೊಡ್ಡ ಕಲ್ಲನ್ನೇ ಸುತ್ತಿದ್ದರಿಂದ ಸರ್‌ಗೆ ಏಟಾಗಿತ್ತು. ಅದರ ಹಿಂದೆಯೇ ನಮ್ಮ ಬಂಡವಾಳವೂ ಬಯಲಾಗಿತ್ತು.

ಈಗ ನಾವು ಕಾಪಿ ಚೀಟಿ ರೆಡಿ ಮಾಡುತಿದ್ದ ವಿಧಾನವನ್ನು ಹೇಳುತ್ತೇನೆ. ನಮ್ಮ ಚೀಟಿಯಲ್ಲಿ ಉತ್ತರಗಳು ಮಾತ್ರವಲ್ಲದೇ, ಆ ಚೀಟಿ ಯಾರಿಂದ ಯಾರಿಗೆ ತಲುಪಬೇಕು ಎಂಬ ಸೂಚನೆಯನ್ನೂ ಬರೆಯುತ್ತಿದ್ದೆವು. “ಪ್ರಭು, ನಿಂದು ಬರೆದಾದ ಕೂಡಲೇ ಹರೀಶನಿಗೆ ಕೊಡು’, ಈ ರೀತಿಯ ಅನೇಕ ಟಿಪ್ಪಣಿಗಳೂ ಇದ್ದವು. ಒಟ್ಟಿನಲ್ಲಿ ಆ ಕಾಪಿಚೀಟಿಯನ್ನು ಬಳಸಿದ್ದ ಎಲ್ಲರ ಹೆಸರೂ ಅದರಲ್ಲಿ ನಮೂದಾಗಿರುತ್ತಿತ್ತು. 

ಹೆಗಡೆ ಸರ್‌, ಕಾಪಿ ಚೀಟಿಯನ್ನು ಬಿಡಿಸಿ ನೋಡಿ, ಆಗ ಸುಮ್ಮನಿದ್ದರು. ಪರೀಕ್ಷೆ ಮುಗಿದ ಮೇಲೆ ಚೀಟಿಯಲ್ಲಿದ್ದ ಒಬ್ಬೊಬ್ಬರ ಹೆಸರನ್ನೇ ಕರೆದು “ವಾಟ್‌ ಈಸ್‌ ದ ಸಮ್ಮರಿ ಆಫ್ ದಿ ಪೋಯೆಮ… ದಿ ಮದರ್‌?’ ಎಂದು ಕೇಳುತ್ತಾ ಹೋದರು. ಉತ್ತರಪತ್ರಿಕೆಯಲ್ಲಿ ಮಾತ್ರ ನೀಟಾಗಿ ಉತ್ತರ ಬರೆದಿದ್ದ ನಮಗೆ, ಉತ್ತರ ಹೇಳಲು ಬರಲಿಲ್ಲ. ನಾನು “ದ ಮದರ್‌ ಈಸ್‌ ಎ ಬ್ಯೂಟಿಫ‌ುಲ… ಪೋಯೆಮ… ಬೈ ಲಂಕೇಶ್‌…’ ಎಂದು ರಾಗವೆಳೆದೆ. ಅಲ್ಲಿಂದ ಮುಂದೆ ಗೊತ್ತಿದ್ದರಲ್ಲವೆ ಹೇಳ್ಳೋಕೆ! ಸರ್‌ ನಮ್ಮೆಲ್ಲರ ಕಿವಿ ಹಿಂಡಿದರು. “ಕಾಪಿ ಚೀಟಿ ಬರೆಯೋಕೆ ಒಂದು ಗಂಟೆ ವೇಸ್ಟ್‌ ಮಾಡ್ತೀರ. ಅದೇ ವೇಳೇಲಿ ಓದೋಕೆ ಆಗಲ್ವಾ?’ ಎಂದು ಬೈದು ಬುದ್ಧಿ ಹೇಳಿದರು. ಅದೇ ಪ್ರಶ್ನೆ ಫೈನಲ್‌ ಪರೀಕ್ಷೆಯಲ್ಲಿ ಬಂದಾಗ ಉತ್ತರ ನನಗೆ ಚೆನ್ನಾಗಿ ಬಾಯಿಪಾಠ ಬಂದಿತ್ತು! 

ನಾಗಪ್ಪಎಂ. ಪ್ರಭು, ಅಂಕೋಲಾ

Advertisement
Advertisement

Udayavani is now on Telegram. Click here to join our channel and stay updated with the latest news.

Next