Advertisement
ಉಡುಪಿಯ ಕಲ್ಯಾಣಪುರದ ಯುವಕ ಜೋಸೆಫ್ ಜಿ. ಎಂ. ರೆಬೆಲ್ಲೊ. ವೃತ್ತಿಯಲ್ಲಿ ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನ ಬಸ್ ಚಾಲಕ. ಇವರು ಬೆಳಗ್ಗೆ 9.30ಕ್ಕೆ ಕೆಲಸ ಮುಗಿಸಿದ ಬಳಿಕ ನೀರಿನ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ತೊಡಗಿಕೊಳ್ಳುತ್ತಾ ಸಂಜೆ ಮತ್ತೆ 4ರಿಂದ 5 ಗಂಟೆವರೆಗೆ ಚಾಲಕ ವೃತ್ತಿ ಮಾಡುತ್ತಾರೆ. ಐದು ವರ್ಷಗಳಿಂದ ಪ್ರಕೃತಿಯ ಬಗ್ಗೆ ಒಂದಲ್ಲ ಒಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ನಮ್ಮ ನಾಳೆಗಾಗಿಯೇ ಇವರು ದುಡಿಯುತ್ತಿದ್ದಾರೆ. ಉಡುಪಿ ಜಿಲ್ಲೆಯಷ್ಟೇ ಅಲ್ಲ. ಇತರೆಡೆಗಳಲ್ಲಿಯೂ ವನ ಮಹೋತ್ಸವ, ಜಲ ಸಂರಕ್ಷಣ ಜಾಗೃತಿ ಕಾರ್ಯಕ್ರಮ, ಸ್ವತ್ಛತೆಯ ಬಗ್ಗೆ ಅರಿವು, ಘನ ತ್ಯಾಜ್ಯ, ದ್ರವ ತ್ಯಾಜ್ಯ ಮತ್ತು ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿಯ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಈಗ ತೆರೆದ ಬಾವಿಗೆ, ನಿರ್ಜೀವ ಹಾಗೂ ನೀರಿರುವ ಕೊಳವೆ ಬಾವಿಗಳಿಗೆ ಮಳೆ ನೀರು ಇಳಿಸುವ ವಿಧಾನಗಳನ್ನು ತಿಳಿಸುತ್ತಿದ್ದಾರೆ. “ಜಲ ಜಾಗೃತಿ’ ಎನ್ನುವ ಶೀರ್ಷಿಕೆಯಡಿ ಒಂದು ವರ್ಷದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಕಡೆಗಳಲ್ಲಿ 8ನೇ ತರಗತಿಯಿಂದ ಹಿಡಿದು ಪಿಯುಸಿ, ಪದವಿ, ಎಂಎಸ್‌ಡಬ್ಲೂ, ನರ್ಸಿಂಗ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಸ್ವಸಹಾಯ ಸಂಘಗಳಿಗೆ, ಪ್ರತಿಷ್ಠಿತ ಸಂಘ ಸಂಸ್ಥೆಗಳಿಗೆ, ಗ್ರಾ. ಪಂ. ಗಳ ಸಭೆಗಳಲ್ಲಿ, ಪೊಲೀಸ್ ಸಿಬಂದಿಗೆ, ವಸತಿ ಸಮುಚ್ಚಯ ಇನ್ನಿತರ ಕಡೆ ನೀರಪಾಠ ಮಾಡಿದ್ದಾರೆ. ನಿಸರ್ಗದಿಂದ ಉಚಿತವಾಗಿ ಸಿಗುತ್ತಿರುವ ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ ಸದ್ಬಳಕೆ ಮಾಡಿಕೊಳ್ಳುವ ಕುರಿತು ಪವರ್ ಪಾಯಿಂಟ್ ಮೂಲಕ ಮಾಹಿತಿ ಕಾರ್ಯಾಗಾರ ನಡೆಸುತ್ತಿದ್ದಾರೆ. ತೆರೆದ ಬಾವಿಗೆ ಮತ್ತು ಕೊಳವೆ ಬಾವಿಗೆ ಮಳೆ ನೀರನ್ನು ಇಂಗಿಸುವ ಘಟಕಗಳನ್ನು ಸ್ವತಃ ಇವರೇ ಮನೆಯಲ್ಲಿ ನಿರ್ಮಿಸಿದ್ದಾರೆ. ಅದೇ ರೀತಿ ಹೊಸದಾಗಿ ನಿರ್ಮಿಸುವವರಿಗೆ ಭೂಗರ್ಭ ಶಾಸ್ತ್ರಜ್ಞ, ಜಲ ತಜ್ಞರ ಸಲಹೆ ಪಡೆದು ಮಾರ್ಗದರ್ಶನ ನೀಡುತ್ತಿದ್ದಾರೆ. ಮನೆಯ ಛಾವಣಿಯಿಂದ ಮಳೆಗಾಲದಲ್ಲಿ ಬೀಳುವ ಮಳೆ ನೀರು, ನಮ್ಮ ಹಿತ್ತಲ ಆವರಣದಿಂದ ಚರಂಡಿಗೆ, ತೋಡು, ಹಳ್ಳ, ನದಿಯ ಮೂಲಕ ಸಮುದ್ರಕ್ಕೆ ಸೇರಿ ವ್ಯರ್ಥವಾಗುವ ಬದಲು ಈ ರೀತಿಯಾಗಿ ಸದುಪಯೋಗವಾಗಲಿ ಎನ್ನುವುದು ಅವರ ಅಭಿಲಾಷೆ. ಭೂಮಿಯಲ್ಲಿ ನೀರು ಇಂಗಿಸಿ ಅಂತರ್ಜಲವನ್ನು ವೃದ್ಧಿಸಿ, ನೀರಿನ ಸಮಸ್ಯೆಗೆ ಸುಲಭ ಪರಿಹಾರದ ಪ್ರಕ್ರಿಯೆ ಈ ಕೂಡಲೇ ಆರಂಭಿಸದೆ ಹೋದಲ್ಲಿ ಮುಂದೆ ಅಂತರ್ಜಲ ಸಂಪತ್ತಿಗಾಗುವ ಬಹು ದೊಡ್ಡ ಅಪಾಯವನ್ನು ನಾವು ಎದುರಿಸಬೇಕಾದೀತು. ನದಿ ಬತ್ತಿ ಹೋಗಿದೆ. ಬಾವಿಗಳಲ್ಲಿ ನೀರು ತಳಮಟ್ಟಕ್ಕಿಳಿದಿವೆ. ಎಷ್ಟು ಬೋರ್‌ವೆಲ್ ತೋಡಿದರೂ ನೀರು ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕೆಂದರೆ ಮಳೆ ನೀರನ್ನು ಇಂಗಿಸುವ, ಸುವ್ಯವಸ್ಥಿತ ರೀತಿಯಲ್ಲಿ ಜಲಮರುಪೂರಣ ಮಾಡಿ ಮಳೆ ನೀರನ್ನು ಭೂಮಿಗೆ ಸೇರುವಂತೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವತ್ತ ಗಮನಹರಿಸಬೇಕು ಎನ್ನುತ್ತಾರವರು.
Related Articles
ದೇವರು ಈ ಪ್ರಕೃತಿಗೆ ಅಗತ್ಯವಿರುವ ವಾತಾವರಣ, ಕಾಲ ಕಾಲಕ್ಕೆ ಮಳೆ, ಬೆಳೆ ಎಲ್ಲವನ್ನೂ ನೀಡುತ್ತಿದ್ದರೂ, ನಾವು ಅದನ್ನು ಸರಿಯಾಗಿ ನಿರ್ವಹಿಸದೆ ಸಮಸ್ಯೆಯನ್ನು ತಂದುಕೊಳ್ಳುತ್ತಿದ್ದೇವೆ. ಒಂದೆಡೆ ನೀರಿನ ದುರ್ಬಳಕೆ ಮಾಡುತ್ತಾ ಮತ್ತೂಂದೆಡೆ ಮಳೆಗಾಗಿ ದೇವರ ಪ್ರಾರ್ಥಿಸಿದರೆ ಏನು ಪ್ರಯೋಜನ. ಈ ಭೂಮಿ, ಈ ಸುಂದರ ಪ್ರಕೃತಿಯ ಆರೋಗ್ಯ, ವಾತಾವರಣದ ಆರೈಕೆ, ಜೀವಜಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ.
ಜೋಸೆಫ್ ರೆಬೆಲ್ಲೊ, ಕಲ್ಯಾಣಪುರ
Advertisement
ಅರ್ಥ ಹನಿನೆಮ್ಮದಿಯ ನಾಳೆಗಾಗಿ ಇಂದು ಪ್ರತಿ ಹನಿಯನ್ನೂ ಮೌಲ್ಯಯುತವಾಗಿ ಬಳಸಬೇಕು, ಉಳಿದದ್ದನ್ನು ಸಂರಕ್ಷಿಸಬೇಕು. ಪ್ರಶಾಂತ್ ಪಾದೆ