Advertisement
ಹೌದು ಯಶವಂತಪುರದ ಪಂಡಿತ್ ದೀನದಯಾಳ್ ಉಪಾದ್ಯಾಯ ಮೇಲ್ಸೇತುವೆ ಈಗ “ಡೇಂಜರ್ ಝೋನ್’. ಪದೇ ಪದೆ ಒಂದೇ ಕಡೆ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಉದ್ದೇಶಿತ ಮೇಲ್ಸೇತುವೆಯ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ಮೌಲ್ಯಮಾಪನ ನಡೆಸಿತು. ಆಗ ಯಶವಂತಪುರ ಮೇಲ್ಸೇತುವೆಯು ದೋಷ ಪೂರಿತವಾಗಿರುವುದು ಪತ್ತೆಯಾಗಿದೆ.
Related Articles
Advertisement
ರಾತ್ರಿ ವೇಳೆ ಅದರಲ್ಲೂ ಭಾರಿ ವಾಹನಗಳು ಹೆಚ್ಚು ಅಪಘಾತಕ್ಕೀಡಾಗುತ್ತಿವೆ. ಅನೇಕ ಚಾಲಕರೂ ಇದಕ್ಕೆ ಬಲಿ ಆಗಿದ್ದಾರೆ. ಈಚೆಗೆ ಮಟನ್ ಮತ್ತು ಮಶ್ರೂಮ್ ಸಾಗಿಸುತ್ತಿದ್ದ ವಾಹನಗಳು ಅಪಘಾತಕ್ಕೀಡಾಗಿದ್ದವು ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಭಾರಿ ವಾಹನಗಳು ವೇಗವಾಗಿ ಸಾಗಿ ಬರುವಾಗ ತಿರುವಿನಲ್ಲಿ ರಸ್ತೆ ಅಂಚಿನಿಂದ ಹೊರಕ್ಕೆ ಚಲಿಸುತ್ತಿದ್ದವು.
ಇತ್ತೀಚೆಗೆ ಇಲ್ಲಿ ಅಣಬೆ ಸಾಗಿಸುತ್ತಿದ್ದ ಲಾರಿ ಮೇಲ್ಸೇತುವೆಯಿಂದ ಕೆಳಗೆ ಉರುಳಿಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು. ಮೇಲ್ಸೇತುವೆ ವಿನ್ಯಾಸದಲ್ಲಿ ದೋಷ ಇರುವುದು ಕಂಡುಬಂದಿದೆ ಎಂದು ಐಐಎಸ್ಸಿಯ ಸುಸ್ಥಿರ ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್ ವರ್ಮಾ ತಿಳಿಸಿದರು.
ಅಪಘಾತಗಳಿಗೆ ಕಡಿವಾಣ ಹಾಕಬೇಕಾದರೆ, ಮುಖ್ಯವಾಗಿ ಈ ಮಾರ್ಗದಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ ಹಾಕಬೇಕು. ಈ ನಿಟ್ಟಿನಲ್ಲಿ ಈ ಮೇಲ್ಸೇತುವೆ ಆರಂಭವಾಗುವ ಹಾಗೂ ಅಂತ್ಯವಾಗುವಲ್ಲಿ ರಸ್ತೆಯ ರಬ್ಬಲ್ ಸ್ಟ್ರಿಪ್ (ರಸ್ತೆ ಉಬ್ಬುಗಳು)ಗಳನ್ನು ಅಳವಡಿಸಬೇಕು.
ಭಾರಿ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಎತ್ತರ ಸೀಮಿತಗೊಳಿಸುವ ಬ್ಯಾರಿಕೇಡ್ ಹಾಕಬೇಕು. ರಾತ್ರಿ ಹೊತ್ತಿನಲ್ಲೂ ವಾಹನ ಚಾಲಕರಿಗೆ ಕಾಣಿಸುವಂತೆ ರಸ್ತೆ ಸುರಕ್ಷತಾ ಸಂಕೇತಗಳನ್ನೂ ಅಳವಡಿಸಬೇಕು ಎಂದು ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.
ತಿಂಗಳ ಹಿಂದೆಯೇ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿದೆ. ಇದಕ್ಕೆ ಸಂಚಾರ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲವು ಪೂರಕ ಕ್ರಮ ಕೈಗೊಂಡಿದ್ದಾರೆ. ಆದರೆ, ಎಲ್ಲ ಶಿಫಾರಸುಗಳನ್ನು ಅನುಷ್ಠಾನಗೊಳಿಸಿಲ್ಲ. -ಪ್ರೊ.ಆಶಿಶ್ ವರ್ಮಾ, ಐಐಎಸ್ಸಿ ಸುಸ್ಥಿರ ಸಾರಿಗೆ ವ್ಯವಸ್ಥೆ ವಿಭಾಗದ ಸಹ ಪ್ರಾಧ್ಯಾಪಕರು * ವಿಜಯಕುಮಾರ್ ಚಂದರಗಿ