ನವದೆಹಲಿ: ನಿಮ್ಮ ಕೆಲಸ ನಿದ್ರೆ ಮಾಡುವುದು, ಚೆನ್ನಾಗಿ ನಿದ್ರೆ ಮಾಡಿದರೆ 1 ಲಕ್ಷ ರೂ. ಕೊಡುತ್ತೇವೆಂದು ಹೇಳಿದರೆ ಯಾರಿಗೆ ರೋಮಾಂಚನವಾಗುವುದಿಲ್ಲ ಹೇಳಿ? ಬೆಂಗಳೂರಿನ ವೇಕ್‌ಫಿಟ್.ಕೊ ಎಂಬ ಕಂಪನಿಯೊಂದು ಅಂತಹ ವಿಶಿಷ್ಟ ಅವಕಾಶ ನೀಡಿದೆ. ಸತತ 100 ದಿನ, ತಲಾ 9 ಗಂಟೆ ನಿದ್ರಿಸಬೇಕು. ಅದಕ್ಕೆ ವೇಕ್‌ಫಿಟ್ ನೀಡಿದ ಹಾಸಿಗೆ (ಮ್ಯಾಟ್ರೆಸ್) ಬಳಸಬೇಕು. ಇಲ್ಲಿ ಅತ್ಯುತ್ತಮವಾಗಿ ನಿದ್ರಿಸಿದವರಿಗೆ 1 ಲಕ್ಷ ರೂ. ಸಿಗಲಿದೆ… ಹೀಗೆಂದು ಕಂಪನಿ ನಿರ್ದೇಶಕ ಚೈತನ್ಯ ರಾಮಲಿಂಗೇ ಗೌಡರು ತಿಳಿಸಿದ್ದಾರೆ.
ಈ ಕಂಪನಿಯ ಉದ್ದೇಶವೇ ನಿದ್ರೆಯ ಮಹತ್ವದ ಅರಿವನ್ನು ಮೂಡಿಸುವುದು. ಸಮಾಜದಲ್ಲಿ ಈಗ ನಿದ್ರಿಸುವ ಬಗ್ಗೆ ತಪ್ಪು ತಿಳಿವಳಿಕೆಯಿದೆ. ನಿದ್ರೆ ಕಡಿಮೆಯಾಗುತ್ತಿದೆ. ಆದ್ದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ಕಾರ್ಯಕ್ಷಮತೆ ಕುಗ್ಗುತ್ತಿದೆ ಎಂದು ಅವರು ಹೇಳುತ್ತಾರೆ.
ಆದ್ದರಿಂದಲೇ ಕಂಪನಿ ಇಂತಹ ವಿಶಿಷ್ಟ ಕರೆ ನೀಡಿದೆ. ಈ ಸಂದರ್ಶನದಲ್ಲಿ ಈಗಾಗಲೇ 1500 ಮಂದಿ ಪಾಲ್ಗೊಂಡಿದ್ದಾರೆ. ಬಹುತೇಕರು ತಾವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮಲಗಲು ಜಾಗವಿಲ್ಲ. ಸ್ವಲ್ಪ ನಿದ್ರಿಸಲು ಅವಕಾಶ ಕೊಟ್ಟರೆ, ಸಖತ್ತಾಗಿ ಕೆಲಸ ಮಾಡುತ್ತೇವೆ ಎಂದು ತಮ್ಮ ಅಂತರಂಗವನ್ನು ತೆರೆದಿಟ್ಟಿದ್ದಾರೆ.
ಅರ್ಹತೆಗಳೇನಿರಬೇಕು?
ನಿದ್ರೆ ಮಾಡುವ ಕೆಲಸಕ್ಕೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ, ಕೆಲವು ಅರ್ಹತೆಗಳನ್ನು ನೀವು ಹೊಂದಿರಬೇಕು. ಯಾವಾಗೆಂದರೆ ಆಗ, ಎಲ್ಲಿ ಬೇಕಾದರಲ್ಲಿ ನಿದ್ರೆ ಮಾಡುವ ಶಕ್ತಿಯಿರಬೇಕು. ಕಣ್ಮುಚ್ಚಿದರೆ ಸಾಕು ನಿದ್ರಿಸುವ ಸಾಮರ್ಥ್ಯ ಇರಬೇಕು. ನಿದ್ರಿಸುವ ನಿಮ್ಮ ದಾಖಲೆಯನ್ನು ನೀವೇ ಮುರಿಯುವ ಯೋಗ್ಯತೆಯಿರಬೇಕು. ಇದರ ವಸ್ತ್ರಸಂಹಿತೆ ಪೈಜಾಮ. ಗೆದ್ದವರಿಗೆ 1 ಲಕ್ಷ ರೂ. ಸಿಗುತ್ತದೆ. ನಿದ್ರಾಪ್ರಮಾಣವನ್ನು ಗುರ್ತಿಸುವ ಟ್ರ್ಯಾಕರ್ ಸಿಗುತ್ತದೆ.