ಬೇಧ ಭಾವದ ತೀಟೆ, ಜೀವ ಜೀವಗಳ ಭೇಟೆ…
ಬಹುಶಃ ಬಹಳಷ್ಟು ಮಂದಿ ಈ ಹಾಡನ್ನು ಕೇಳಿರಲು ಸಾಧ್ಯವೇ ಇಲ್ಲ. ಕಳೆದ ವರ್ಷ ಬಿಡುಗಡೆಯಾದ “ಮಾರ್ಚ್ 22′ ಚಿತ್ರದ ಹಾಡಿದು. ಈ ಹಾಡಿನ ಗೀತ ರಚನೆಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಹೌದು, ಮೂರು ವರ್ಷಗಳ ಹಿಂದಷ್ಟೇ, ಅತ್ಯುತ್ತಮ ನಟನೆಗೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಹಲವು ದಶಕಗಳ ಬಳಿಕ ನಟನೆಗೆ ಸಿಕ್ಕ ರಾಷ್ಟ್ರಪ್ರಶಸ್ತಿ ಅದಾಗಿತ್ತು. ಕನ್ನಡಿಗರಿಗೆ ಆ ಪ್ರಶಸ್ತಿ ಗರಿ ಮೂಡಿಸಿತ್ತು.
Advertisement
ಈಗ ಗೀತರಚನೆಗಾಗಿ ಕನ್ನಡಕ್ಕೆ ಮತ್ತೂಂದು ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಕಳೆದ ಒಂದು ದಶಕದ ಹಿಂದೆ ಗೀತರಚನೆಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಬಿಟ್ಟರೆ, ಈ ಸಾಲಿನಲ್ಲಿ ಗೀತರಚನೆಕಾರ ಜೆ.ಎಂ. ಪ್ರಹ್ಲಾದ್ ಅವರು ಬರೆದ ಗೀತೆಗೆ ರಾಷ್ಟ್ರಪ್ರಶಸ್ತಿ ಬಂದಿರುವುದು ವಿಶೇಷ ಮತ್ತು ಕನ್ನಡಕ್ಕೆ ಸಿಕ್ಕ ಹೆಮ್ಮೆ. ಇದೇ ಮೊದಲ ಸಲ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಪ್ರಹ್ಲಾದ್ “ಉದಯವಾಣಿ’ ಜೊತೆ ಖುಷಿ ಹಂಚಿಕೊಂಡಿದ್ದಾರೆ.
Related Articles
Advertisement
ನಂಜುಂಡೇಗೌಡ ನಿರ್ದೇಶನದ “ನೋಡು ಬಾ ನಮ್ಮೂರ’ ಚಿತ್ರದ “ಎಂಥಾ ಮಾಯವೋ, ಎಂಥಾ ಮಾಯವೋ ಮಾದೇಶ, ಕತ್ಲೆ ರಾತ್ರೀಲಿ ಕುರುಡು ಕೋಳಿಯ ಆದೇಶ…’ ಗೀತೆಗೆ ರಾಜ್ಯಪ್ರಶಸ್ತಿ ಬಂದಿತ್ತು. ವಿಶೇಷವೆಂದರೆ, ರಾಜ್ಯ ಪ್ರಶಸ್ತಿ ಪಡೆದ ಆ ಹಾಡು ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಈ ಹಾಡಿನ ನಡುವೆ ಒಂದೇ ಉದ್ದೇಶವಿತ್ತು. ಅದು ಸಾಮರಸ್ಯ ಸಾರುವಂತಹ ಅಂಶಗಳಿದ್ದವು. “ನೋಡು ಬಾ ನಮ್ಮೂರ’ ಚಿತ್ರದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ, ಆ ಊರಿನಲ್ಲಿ ಎರಡು ಗುಂಪುಗಳಾಗುತ್ತವೆ.
ಆಗ ಒಬ್ಬ ಸಾಧು ವ್ಯಥೆ ಕುರಿತು, ಸಾಮರಸ್ಯ ಸಾರುವಂತಹ ಹಾಡು ಹಾಡುತ್ತಾನೆ. ಆಗ ಬರೆದ ಗೀತೆ ಅದು. “ಮಾರ್ಚ್ 22′ ಚಿತ್ರದಲ್ಲೂ ಜಾಗ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಜಗಳ ಉಂಟಾಗುತ್ತೆ. ಆಗ ಒಬ್ಬ ಫಕೀರ ವ್ಯಥೆ ಕುರಿತು ಸಾಮರಸ್ಯ ಸಾರುವ ಗೀತೆ ಹಾಡುತ್ತಾನೆ. ಈ ಎರಡು ಗೀತೆಯಲ್ಲೂ ಜನರ ನಡುವೆ ಸಾಮರಸ್ಯ ಸಾರುವ, ಎಲ್ಲರೂ ಒಂದಾಗಬೇಕೆಂಬ ಆಶಯಗಳ ಅಂಶಗಳಿದ್ದವು.
ಅದನ್ನು ಪರಿಗಣಿಸಿ, ಪ್ರಶಸ್ತಿ ಸಿಕ್ಕಿದೆ. ವಿಶೇಷವೆಂದರೆ, ಎರಡೂ ಚಿತ್ರಗಳ ಗೀತೆಯಲ್ಲೂ ಒಂದೇ ರೀತಿಯ ಸಂದರ್ಭಗಳಿದ್ದುದರಿಂದ, ಅದೇ ರೀತಿಯ ಹಾಡು ಬರೆದೆ. ಹಾಗಾಗಿ, ಆಯ್ಕೆ ಸಮಿತಿ ಗೀತೆಯ ಸಾರ ಮೆಚ್ಚಿಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎನ್ನುತ್ತಾರೆ. “ನಾನು ಇದುವರೆಗೆ ಸುಮಾರು 500 ಗೀತೆಗಳನ್ನು ರಚಿಸಿದ್ದೇನೆ. “ರಾಮಾಯಣ’ ಮತ್ತು “ಮಹಾಭಾರತ’ ಧಾರಾವಾಹಿಗಳಿಗೆ ಸುಮಾರು 300 ಗೀತೆ ರಚಿಸಿದ್ದೇನೆ.
ಸುಮಾರು 1600 ಎಪಿಸೋಡಿನ ಧಾರಾವಾಹಿಗಳು ಅವು. ನಾನು ಬೇರೆ ಚಿತ್ರಗಳಿಗೂ ಗೀತೆ ಬರೆದಿರುವುದುಂಟು. ಆದರೆ, ಗುರುತಿಸಿಕೊಳ್ಳಲಾಗಿಲ್ಲ. ನಾನು ಬರೆದ ಕಥೆಯ ನಾಲ್ಕು ಚಿತ್ರಗಳಿಗೆ ಪ್ರಶಸ್ತಿ ಬಂದಿದೆ. “ಅತಿಥಿ’, “ಬೇರು’,”ತುತ್ತೂರಿ’ ಮತತು “ಹೆಜ್ಜೆಗಳು’ ಈ ಚಿತ್ರಗಳಿಗೆ ನನ್ನದೇ ಕಥೆ. ಇವೆಲ್ಲದ್ದಕ್ಕೂ ಪ್ರಶಸ್ತಿ ಸಿಕ್ಕಿದೆ. ಒಟ್ಟು ನಾನು ಕೆಲಸ ಮಾಡಿದ ಐದು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಆ ಪೈಕಿ ಮಕ್ಕಳ ಚಿತ್ರಗಳೂ ಇವೆ.
ದೊಡ್ಡವರ ಸಿನಿಮಾನೂ ಇದೆ. ನಾನೆಂದೂ ಪ್ರಶಸ್ತಿ ನಿರೀಕ್ಷಿಸಿ ಕೆಲಸ ಮಾಡಿದವನಲ್ಲ. ಇಲ್ಲಿ ಸಂದರ್ಭಕ್ಕನುಗುಣವಾಗಿ ಸಾಹಿತ್ಯ ಬರೆಯಬೇಕಿತ್ತು. ಬೇರೆ ಹಾಡುಗಳಲ್ಲಿ ತೀರಾ ಆಳಕ್ಕೆ ಹೋಗುವ ಅಗತ್ಯವಿರುವುದಿಲ್ಲ. ಇಂತಹ ಹಾಡುಗಳಿಗೆ ಆಳವಾಗಿ ಇಳಿದು, ಆಲೋಚಿಸಿ, ಗಾಂಭೀರ್ಯ ಉಳಿಸಿಕೊಂಡು ಗೀತೆ ಬರೆಯಬೇಕು. ಎಷ್ಟೇ ಹಾರ್ಡ್‌ವರ್ಕ್ ಮಾಡಿದರೂ, ಗುರುತಿಸಿಕೊಳ್ಳುವುದು ಕಷ್ಟ. ಕಮರ್ಷಿಯಲ್, ಕಲಾತ್ಮಕ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಕಮರ್ಷಿಯಲ್ ಚಿತ್ರಗಳಿಗೂ ಅಷ್ಟೇ ಎಫರ್ಟ್ ಹಾಕಿ ಕೆಲಸ ಮಾಡಿದ್ದರೂ, ಗುರುತಿಸಿಕೊಂಡಿಲ್ಲ.
ಆ ಬಗ್ಗೆ ಬೇಸರವೇನೂ ಇಲ್ಲ. ಆದರೆ, ಅವಕಾಶ ಕೊಟ್ಟರೆ, ನ್ಯಾಯ ಸಲ್ಲಿಸುವುದಷ್ಟೇ ನನ್ನ ಕೆಲಸ. ಸಣ್ಣ ಬಜೆಟ್, ದೊಡ್ಡ ಬಜೆಟ್, ಸ್ಟಾರ್ ಸಿನಿಮಾ, ಹೊಸಬರ ಚಿತ್ರ ಅಂತೇನೂ ಇಲ್ಲ. ಸಂಧರ್ಭಕ್ಕೆ ತಕ್ಕ ಗೀತೆ ರಚಿಸಿ, ನ್ಯಾಯ ಸಲ್ಲಿಸಬೇಕಷ್ಟೇ. ಈ ಪ್ರಶಸ್ತಿ ನನ್ನಲ್ಲಿ ಮತ್ತಷ್ಟು ಜವಾಬ್ದಾರಿ ಹಾಗೂ ಉತ್ಸಾಹ ಹೆಚ್ಚಿಸಿರುವುದಂತೂ ಹೌದು ಎನ್ನುತ್ತಲೇ, ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ ಎನ್ನುತ್ತಾರೆ ಪ್ರಹ್ಲಾದ್.