ಅರಿಜೋನಾ(ಅಮೆರಿಕಾ
) : ನೀವು ನಿಮ್ಮ 12 ನೇ ವಯಸ್ಸಿನಲ್ಲಿ ಏನು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರೆ, ದಿನ ನಿತ್ಯ ಶಾಲೆಗೆ ಹೋಗುವುದು, ಪಾಠ ಕಲಿಯುವುದು, ಹೋಮ್ ವರ್ಕ್ ಮಾಡುವುದು, ಆಟ ಆಡುವುದನ್ನೇ ಹೇಳುತ್ತೀರಿ. ಈ 12ನೇ ವಯಸ್ಸಿನಲ್ಲಿ ಯೂನಿವರ್ಸಿಟಿಯಲ್ಲಿ ಓದಬೇಕು ಎಂದು ನಿಮಗನ್ನಿಸಿತ್ತಾ?. ಬಹು ಜನರನ್ನು ಹೇಳಿದ್ರೆ ಇಲ್ಲ ಎಂಬ ಉತ್ತರಗಳೇ ಬರುತ್ತವೆ. ಆದ್ರೆ ಇಲ್ಲೊಂದು 12 ವರ್ಷದ ಬಾಲಕಿಗೆ ಈ ಚಿಕ್ಕ ವಯಸ್ಸಿನಲ್ಲೇ ಯೂನಿವರ್ಸಿಟಿ ಶಿಕ್ಷಣವನ್ನು ಓದಬೇಕು ಎಂಬ ಆಸೆ ಇದೆಯಂತೆ.
ಆ ಮಗುವಿನ ಹೆಸರು ಅಲೇನಾ ವಿಕರ್. ಈಕೆ ಅಮೆರಿಕಾದ ಅರಿಜೋನಾದವಳು. ಈ ಮಗು ಈಗಾಗಲೇ ತನ್ನ ಪ್ರೌಢ ಶಿಕ್ಷಣವನ್ನು ಮುಗಿಸಿದೆಯಂತೆ. ಮನೆಯಲ್ಲೇ ಓದಿದ್ದು, ತನ್ನ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿರುವುದಾಗಿ ಅಲೇನಾ ತಾಯಿ ದಾಫ್ನೆ ಮೆಕ್ ಕ್ವಾರ್ಟರ್ ಹೇಳಿದ್ದಾರೆ.
ಇನ್ನು 12 ವರ್ಷದ ಅಲೇನಾ ಕೇವಲ ಯೂನಿವರ್ಸಿಟಿಯಲ್ಲಿ ಓದುವ ಕನಸನ್ನು ಮಾತ್ರ ಹೊಂದಿಲ್ಲ. ಆಕೆಗೆ ಮುಂದಿನ ದಿನಗಳಲ್ಲಿ ನಾಸಾದ ಜೊತೆ ಕೆಲಸ ಮಾಡಬೇಕು ಎಂಬ ಹಂಬಲವೂ ಇದೆಯಂತೆ.
ಈ ಬಗ್ಗೆ ಮಾತನಾಡಿರುವ ಅಲೇನಾ, ನಾನು ಕಾಲೇಜಿನಲ್ಲಿ ಓದುವ ಸಮಯದಲ್ಲಿ ಬಾಹ್ಯಾಕಾಶದ ಬಗ್ಗೆ ಕಲಿಯುವ ಆಸೆ ಇದೆ. ಸಾಧನೆ ಮಾಡಲು ಮತ್ತು ಕನಸು ಕಾಣಲು ವಯಸ್ಸಿನ ಮಿತಿ ಇಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಂಗಳ ಗ್ರಹದಲ್ಲಿ ಉಡಾವಣೆಗೊಂಡ ಪರ್ಸೆವೆರೆನ್ಸ್ ರೋವರ್ ವೀಕ್ಷಿಸಿದ ನಂತರ ನನಗೆ ನಾಸಾದಲ್ಲಿ ಕೆಲಸ ಮಾಡಬೇಕು ಎಂಬ ಸ್ಪೂರ್ತಿ ಬಂದಿರುವುದಾಗಿ ಆ ಚಿಕ್ಕ ಹುಡುಗಿ ಹೇಳಿದ್ದಾಳೆ.
“ನನ್ನ ಮಗಳು ಓದಿನಲ್ಲಿ ಮುಂದಿರುವುದನ್ನು ನಾನೇ ಗುರುತಿಸಿದೆ. ಶಾಲೆಯ ಎಲ್ಲಾ ಪಠ್ಯಗಳನ್ನು ಅತೀ ಕಡಿಮೆ ಅವಧಿಯಲ್ಲಿ ಓದಿ ಮುಗಿಸುತ್ತಿದ್ದಳು, ಅವಳು 5 ವರ್ಷದವಳಿದ್ದಾಗಲೇ ಅಮ್ಮ ನಾನು ನಾಸಾಕ್ಕೆ ಹೋಗುತ್ತೇನೆ ಎಂದಿದ್ದಳು ಎಂಬ ವಿಚಾರವನ್ನು ಅಲೇನಾ ತಾಯಿ ದಾಫ್ನೆ ಮೆಕ್ ಕ್ವಾರ್ಟರ್ ಹೇಳಿದ್ದಾರೆ.
ಸದ್ಯ ಚಿಕ್ಕ ವಯಸ್ಸಿನಲ್ಲೇ ವಿಶ್ವ ವಿದ್ಯಾಲಯದಲ್ಲಿ ಓದಿ ದಾಖಲೆ ಬರೆದಿರುವ ಬಾಲಕ ಅಂದ್ರೆ ಮೈಕೆಲ್ ಕೀರ್ನಿ. ಈತ 10 ವರ್ಷದವನಿದ್ದಾಗಲೇ ಮಾನವಶಾಸ್ತ್ರದಲ್ಲಿ ಪದವಿ ಪಡೆದಿದ್ದಾನೆ.