Advertisement

Thirupathi Laddu: ತುಪ್ಪ ಪೂರೈಸಿದ ತಮಿಳುನಾಡಿನ ಎ.ಆರ್‌.ಡೇರಿ ವಿರುದ್ಧ ಟಿಟಿಡಿ ದೂರು

11:11 PM Sep 26, 2024 | Team Udayavani |

ತಿರುಪತಿ: ತಿರುಪತಿಯ ತಿರುಮಲ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಸಿದ ತಮಿಳುನಾಡಿನ ಎ.ಆರ್‌.ಡೇರಿ ಫ‌ುಡ್ಸ್‌ ಪ್ರೈ.ಲಿ. ವಿರುದ್ಧ ತಿರುಪತಿ ತಿರುಮಲ ದೇವಸ್ಥಾನಮ್‌ ಟ್ರಸ್ಟ್‌ (ಟಿಟಿಡಿ) ಪೊಲೀಸರಿಗೆ ದೂರು ನೀಡಿದೆ.

Advertisement

ನಿಯಮಗಳ ಉಲ್ಲಂಘನೆ ಆರೋಪದ ಮೇರೆಗೆ ಟಿಟಿಡಿ ಜನರಲ್‌ ಮ್ಯಾನೇಜರ್‌ ಮುರಳಿ ಕೃಷ್ಣ ಎಂಬವರು ತಿರುಪತಿ ಪೂರ್ವ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಟಿಟಿಡಿ ಸಿಇಒ ಜೆ.ಶ್ಯಾಮಲಾ ರಾವ್‌, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು, ಹಂದಿಯ ಕೊಬ್ಬು ಬೆರೆಸಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎ.ಆರ್‌.ಡೇರಿ ಫ‌ುಡ್ಸ್‌, ನಾವು ಜೂನ್‌, ಜುಲೈ ತಿಂಗಳಲ್ಲಿ ಮಾತ್ರ ತುಪ್ಪ ನೀಡಿರುವುದು. ತುಪ್ಪದ ಗುಣಮಟ್ಟ ಸರಿಯಾಗಿದೆ ಎಂದು ಟಿಟಿಡಿಯೇ ಪರಿಶೀಲಿಸಿ ಪ್ರಮಾಣಪತ್ರ ನೀಡಿದೆ ಎಂದಿದೆ.

ಆಂಧ್ರದ ದೇಗುಲಗಳಲ್ಲಿ ಜಗನ್‌ ಪೂಜೆ!
ಮಾಜಿ ಸಿಎಂ ಜಗನ್‌ ರೆಡ್ಡಿ ಅಧಿಕಾರಾವಧಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬೆರೆಸಲಾಗಿದೆ ಎಂದು ಆರೋಪಿಸುವ ಮೂಲಕ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾಪ ಮಾಡಿದ್ದಾರೆ. ಆ ಪಾಪದಿಂದ ಅವರಿಗೆ ಮುಕ್ತಿ ಸಿಗಲಿ ಎಂಬ ಉದ್ದೇಶದಿಂದ ಪ್ರಾಯಶ್ಚಿತ್ತ ಮಾಡಲು ಜಗನ್‌ ರೆಡ್ಡಿ ಅಧ್ಯಕ್ಷರಾಗಿರುವ ವೈಎಸ್‌ಆರ್‌ಸಿಪಿ ಮುಂದಾಗಿದೆ. ಇದೇ ಶನಿವಾರ ಆಂಧ್ರಪ್ರದೇಶದ ಎಲ್ಲ ದೇಗುಲಗಳಲ್ಲಿ ಪ್ರಾಯಶ್ಚಿತ್ತಾರ್ಥವಾಗಿ ಪೂಜೆ ನಡೆಸಲಾಗುವುದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಟ್ವೀಟರ್‌ನಲ್ಲಿ ಜಗನ್‌ ಪೋಸ್ಟ್‌ ಮಾಡಿದ್ದಾರೆ.

ಪವನ್‌ ಕಲ್ಯಾಣ್‌-ಪ್ರಕಾಶ್‌ ರೈ ಸಂಘರ್ಷ ತೀವ್ರ
ತಿರುಪತಿ ಲಡ್ಡು ವಿಚಾರದಲ್ಲಿ ಆಂಧ್ರದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಹಾಗೂ ಖ್ಯಾತ ನಟ ಪ್ರಕಾಶ್‌ ರಾಜ್‌ ನಡುವಿನ ಘರ್ಷಣೆ ಮತ್ತಷ್ಟು ತೀವ್ರವಾಗಿದೆ. ರಾಜಕಾರಣಿ ಕಾನೂನು ಜಾರಿಯಲ್ಲಿ ಪಾತ್ರವಹಿಸಬೇಕು. ಆತ ಪ್ರಕರಣದ ತನಿಖೆ ಮಾಡಬೇಕೇ ಹೊರತು, ಕೋಮುಸಂಘರ್ಷ ಉಂಟು ಮಾಡುವುದಕ್ಕೆ ಯತ್ನಿಸಬಾರದು ಎಂದು ಪವನ್‌ ಕಲ್ಯಾಣ್‌ ವಿರುದ್ಧ ಪ್ರಕಾಶ್‌ ರೈ ಕಿಡಿಕಾರಿದ್ದರು.

Advertisement

ಅದಕ್ಕೆ ಪ್ರತಿಕ್ರಿಯಿಸಿರುವ ಪವನ್‌ ಕಲ್ಯಾಣ್‌, “ನಾನು ಹಿಂದೂ ಧರ್ಮದ ಪಾವಿತ್ರ್ಯತೆ ಬಗ್ಗೆ ಮಾತಾಡುತ್ತಿದ್ದೇನೆ. ನೀವೇಕೆ ನನ್ನನ್ನು ಟೀಕಿಸುತ್ತಿದ್ದೀರಿ ಎಂದು ಗೊತ್ತಿಲ್ಲ. ಸನಾತನ ಧರ್ಮದ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ನಾನು ಮಾತಾಡಬಾರದಾ? ಪ್ರಕಾಶ್‌ ಸ್ವಲ್ಪ ಪಾಠ ಕಲಿಯಬೇಕಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next