Advertisement

ಅರಣ್ಯ ಹಕ್ಕು ಅರ್ಜಿ ತಿರಸ್ಕರಿಸಿದ್ರೆ ಅಧಿಕಾರಿಗಳೇ ಹೊಣೆ

03:42 PM Jun 14, 2019 | Naveen |

ತೀರ್ಥಹಳ್ಳಿ: ಅರಣ್ಯ ಹಕ್ಕು ಕಾಯ್ದೆಯಲ್ಲಿ ಗ್ರಾಮಸಭೆಗೆ ವಿಶೇಷ ಅಧಿಕಾರ ಇದೆ. ಕಚೇರಿಯಲ್ಲಿ ಕುಳಿತು ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳನ್ನು ಸಾರಾಸಗಟು ತಿರಸ್ಕರಿಸಲು ಕಾಯ್ದೆಯಲ್ಲಿ ಅವಕಾಶ ಇಲ್ಲ. ಹಾಗೆ ತಿರಸ್ಕರಿಸಿದರೆ ಅಧಿಕಾರಿಗಳು ಹೊಣೆ ಹೊರಬೇಕು. ಅರ್ಜಿ ತಿರಸ್ಕಾರ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು.

Advertisement

ಬುಧವಾರ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಪಾರಂಪರಿಕ ವಾಸಿಗಳ ಅರಣ್ಯ ಹಕ್ಕು ಕಾಯ್ದೆ ಸರಳವಾಗಿದೆ. ಬೇರೆ ಕಾಯ್ದೆಗಳಿಗಿಂತ ಭಿನ್ನವಾಗಿದ್ದು ಅರಣ್ಯವಾಸ, ಸಾಗುವಳಿಯನ್ನು ಗಂಭೀರವಾಗಿ ಗಮನಿಸಿ ಸಂಬಂಧಪಟ್ಟವರಿಗೆ ಹಕ್ಕು ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದೆ. ಈ ಹಿಂದೆ ನೀಡಿದ ಅರ್ಜಿಗಳು ವಿಲೇವಾರಿ ಆಗಿಲ್ಲ. ಈ ಕಾಯ್ದೆ ಕುರಿತು ಗ್ರಾಮ ಅರಣ್ಯ ಸಮಿತಿಗೆ ಸೂಕ್ತ ಮಾಹಿತಿ ಇಲ್ಲದಂತಾಗಿದೆ ಎಂದು ತಾಪಂ ಸದಸ್ಯರಾದ ರಾಂಚಂದ್ರ, ಕವಿರಾಜ್‌ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಶಾ ಅರ್ಜಿಗಳ ವಿಲೇವಾರಿಗೆ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಅರಣ್ಯ ಸಮಿತಿ ಪದಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.

ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ ಪಡಿತರ ಚೀಟಿ ಪಡೆಯಲು ಬಡವರಿಂದ 500ರೂ. ಲಂಚ ತೆಗೆದುಕೊಳ್ಳುತ್ತಿದ್ದಾರೆ. ಮಲ್ಲಪ್ಪ ಎಂಬ ಸಿಬ್ಬಂದಿ ಹಣ ಕೊಡದೆ ಕೆಲಸ ಮಾಡುವುದಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ಪ್ರಶಾಂತ್‌ ಕೆ. ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆಯ ತಹಶೀಲ್ದಾರ್‌ ರಾಘವೇಂದ್ರ ಲಂಚ ತೆಗೆದುಕೊಳ್ಳುವ ಸಿಬ್ಬಂದಿ ವಿರುದ್ಧ ಮೇಲಧಿಕಾರಿಗೆ ಪತ್ರ ಬರೆಯಾಲಾಗುವುದು ಎಂದು ತಿಳಿಸಿದರು.

ಆಗುಂಬೆ ಭಾಗದಲ್ಲಿ ಹೆಚ್ಚುತ್ತಿರುವ ಒಂಟಿ ಕಾಡಾನೆಯ ಹಾವಳಿಯ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಾಡಾನೆ ಹಿಡಿಯುವುದು ಯಾವಾಗ ಎಂದು ತಾಪಂ ಸದಸ್ಯೆ ವೀಣಾ ಗಿರೀಶ್‌ ಪ್ರಶ್ನೆಗೆ ಉತ್ತರಿಸಿದ ಶಾಸಕರು ಕಾಡಾನೆ ಸ್ಥಳಾಂತರದ ವಿಚಾರದ ಬಗ್ಗೆ ಮುಂದಿನ ವಾರದಲ್ಲಿ ಬಂಡಿಪುರದ ವನ್ಯಜೀವಿ ವಿಭಾಗದ ಅಧಿಕಾರಿಗಳು ಆಗುಂಬೆಗೆ ಆಗಮಿಸಲಿದ್ದಾರೆ. ಮತ್ತೆ ಈ ಸಮಸ್ಯೆ ಬಗೆಹರಿಯದಿದ್ದರೆ ವಿಧಾನಸಭಾ ಅಧಿವೇಶ‌ನದಲ್ಲಿ ಚರ್ಚಿಸಲಾಗುವುದು ಎಂದರು.

Advertisement

ತಾಲೂಕಿನ ಬಂಡ್ಯ – ಕುಕ್ಕೆ ಸರ್ಕಾರಿ ಶಾಲೆಯಲ್ಲಿನ ಎಸ್‌ಡಿಎಂಸಿಯ 2 ಲಕ್ಷ ಹಣ ದುರುಪಯೋಗಪಡಿಸಿದ್ದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದೆ 2 ವರ್ಷಗಳಾಗಿವೆ. ಈ ಹಿಂದೆ ಬಿಇಒ ಆಗಿದ್ದ ಕೃಷ್ಣಮೂರ್ತಿ ಅವರು ಈ ಪ್ರಕರಣದ ದಾಖಲೆಗಳನ್ನು ನಾಶಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಹಿಂದಿನ ಸಭೆಗಳಲ್ಲಿ ಕೈಗೊಂಡ ನಿರ್ಣಯ ಏನಾಯಿತು ಎಂದು ಸದಸ್ಯರು ಪ್ರಶ್ನಿಸಿದರು. ಮಂಗನ ಕಾಯಿಲೆ ಜ್ವರದಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ಧನ ಮಂಜೂರಾಗಿಲ್ಲ. ಈ ಕುರಿತು ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನೆಯಿಲ್ಲ. ತಾಲೂಕಿನ ಕೆಲವೆಡೆ ಅಪಘಾತವಾದಾಗ 108 ವಾಹನದ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಸರ್ಕಾರಿ ಆಸ್ಪತ್ರೆ ಶಿವಮೊಗ್ಗದಲ್ಲಿ ಇದ್ದರೂ ಖಾಸಗಿ ಆಸ್ಪತ್ರೆಗಳ ಕಮಿಶನ್‌ಗೆ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ ಎಂದು ಸದಸ್ಯರು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ 35 ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡ ವಾರ್ಡ್‌ನ ವಿರುದ್ಧ ಕಾನೂನು ಕ್ರಮ ಕೂಡಲೇ ತೆಗೆದುಕೊಳ್ಳಬೇಕು ಎಂದು ಸದಸ್ಯರ ಪ್ರಶ್ನೆಗೆ ಶಾಸಕರು ಉತ್ತರಿಸಿದರು. ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ನವಮಣಿ ವಹಿಸಿದ್ದರು. ಉಪಾಧ್ಯಕ್ಷೆ ಯಶೋಧ, ತಾಪಂ ಅಧಿಕಾರಿ ಧನರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next