ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಭಾಗದಲ್ಲಿ ಮತ್ತೆ ಒಂಟಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು ಆ ಭಾಗದ ಗ್ರಾಮಸ್ಥರು ಆತಂಕದೊಂದಿಗೆ ಬದುಕು ಸಾಗಿಸುವಂತಾಗಿದೆ.
ಆಗುಂಬೆ ಭಾಗದ ಅಗಸರ ಕೋಣೆಯಲ್ಲಿ ಮಂಗಳವಾರ ಮುಖ್ಯರಸ್ತೆಯ ಕಾಡಿನ ಪಕ್ಕದಲ್ಲಿ ಕಾಡನೆ ಕಾಣಿಸಿದೆ. ಆಗುಂಬೆ ಸುತ್ತಮುತ್ತಲಿನ ಬಾಳೇಹಳ್ಳಿ, ಹೊಸಗದ್ದೆ, ತಲ್ಲೂರಂಗಡಿ, ಮಲ್ಲದೂರು ಮುಂತಾದ ಪ್ರದೇಶಗಳಲ್ಲಿ ಗ್ರಾಮಸ್ಥರು ಕಾಡಾನೆಯ ಆತಂಕದಿಂದ ಕಾಲ ಕಳೆಯುವಂತಾಗಿದೆ. ವಾಟೇಹಳ್ಳಿ ಗ್ರಾಮದ ಅಡಕೆ ತೋಟಕ್ಕೆ ನುಗ್ಗಿದ ಕಾಡಾನೆ ಅಡಕೆ ಮರಗಳನ್ನು ಧ್ವಂಸ ಮಾಡಿದೆ.
ಇಲ್ಲಿನ ಅಗಸರಕೋಣೆ ಗ್ರಾಮದ ಕಾಡಿನಲ್ಲಿ ಹುಲಿಯೊಂದು ಮರಿಹಾಕಿದ್ದು ಮರಿಗಳಿಗೆ ತೊಂದರೆ ಉಂಟಾಗಿದ್ದರಿಂದ ಆನೆಯ ಮೇಲೆ ಹುಲಿ ದಾಳಿ ನಡೆಸಿರಬಹುದು. ಈ ದಾಳಿಯಿಂದ ಆನೆಯ ಸೊಂಡಿಲಿಗೆ ಗಾಯವಾದ ಕಾರಣ ಭಯಗೊಂಡ ಆನೆ ಕಾಡಿನಲ್ಲಿ ಆತಂಕದಿಂದ ಸುತ್ತಾಡುತ್ತಿದೆ ಎಂಬುದಾಗಿ ಕೆಲ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮತ್ತೆ ಕಾಡಾನೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ದಿನನಿತ್ಯ ಕೂಲಿ ಕೆಲಸಕ್ಕೆ ಹೋಗುವ ಕೃಷಿ ಕಾರ್ಮಿಕರು, ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ತಮ್ಮ ಜಮೀನುಗಳಿಗೆ ಓಡಾಡುವ ಕೃಷಿಕರು ಹಾಗೂ ಗ್ರಾಮಸ್ಥರು ಭಯದ ವಾತಾವರಣದಲ್ಲಿದ್ದಾರೆ.
ಕಳೆದ ವರ್ಷ ಕಾಣಿಸಿಕೊಂಡಿದ್ದ ಇದೇ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಈ ಭಾಗದ ಗ್ರಾಮಸ್ಥರು, ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆಯ ಹೋರಾಟವನ್ನು ಅರಣ್ಯ ಇಲಾಖೆಯ ವಿರುದ್ಧ ಆಯೋಜಿಸಿದ್ದರು. ಆದರೂ ಇದುವರೆಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ.್ಲ ಕಾಡಾನೆ ದಾಳಿಯಿಂದ ತಮ್ಮ ಕೃಷಿ ಜಮೀನುಗಳು ಸಂಪೂರ್ಣ ನಾಶವಾಗುತ್ತಿವೆ. ಇಲ್ಲಿನ ರೈತರ ಗೋಳನ್ನು ಕೇಳುವ ಸರ್ಕಾರಗಳು, ಇಲಾಖೆಗಳು ಮೌನ ವಹಿಸಿವೆ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆನೆಯ ಸಂಚಾರ ರಾತ್ರಿಯ ಸಂದರ್ಭದಲ್ಲಿ ಕಾಣಿಸಿ ಕೊಳ್ಳುತ್ತಿರುವುದರಿಂದ ಕೆಲವಮ್ಮೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಿದ್ದರೆ ಇಲ್ಲಿನ ಗ್ರಾಮಸ್ಥರು ಭಯಪಡುವಂತಾಗಿದೆ. ಆನೆಯ ಭಯದಿಂದ ಮನೆಗಳಿಗೆ ನೆಂಟರು ಬರುತ್ತಿಲ್ಲ. ವೈವಾಹಿಕ ಸಂಬಂಧಗಳು ನಡೆಯುತ್ತಿಲ್ಲ ಎಂದು ನಾಲೂರು ಗ್ರಾಪಂ ಮಾಜಿ ಸದಸ್ಯ ಬಿ. ಶ್ರೀಕಾಂತ್ ಹೇಳುತ್ತಾರೆ. ಅರಣ್ಯ ಇಲಾಖೆ ಇನ್ನಾದರೂ ಒಂಟಿ ಕಾಡಾನೆಯನ್ನು ಸೆರೆ ಹಿಡಿಯುವ ಬಗ್ಗೆ, ಸ್ಥಳಾಂತರಿಸುವ ಬಗ್ಗೆ ಗಮನ ಹರಿಸದಿದ್ದರೆ ಆ ಭಾಗದಲ್ಲಿ ಅನಾಹುತಗಳು ಸಂಭವಿಸುವುದು ಖಚಿತ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ. ಇನ್ನಾದರೂ ಸರ್ಕಾರ, ಇಲಾಖೆ ಎಚ್ಚೆತ್ತುಕೊಳ್ಳಲಿ ಎಂಬುದು ಆಗುಂಬೆ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ.
ಆಗುಂಬೆ ಭಾಗದ ಒಂಟಿ ಕಾಡಾನೆಯ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮಳೆಗಾಲಕ್ಕೂ ಮುನ್ನವೇ ಕಾರ್ಯಾಚರಣೆ ನಡೆಸುವ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ.
•ಆರಗ ಜ್ಞಾನೇಂದ್ರ, ಶಾಸಕ
ಕಳೆದ 2 ವರ್ಷಗಳಿಂದ ಒಂಟಿ ಕಾಡಾನೆಯ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದೆ. ಮಳೆಗಾಲಕ್ಕೂ ಮುನ್ನವೇ ಆನೆಯನ್ನು ಸ್ಥಳಾಂತರಿಸಬೇಕಿದೆ.
•
ಹಸಿರುಮನೆ ನಂದನ್,
ಆಗುಂಬೆ ಗ್ರಾಪಂ ಅಧ್ಯಕ್ಷ