Advertisement

ಅಡಕೆಗೆ ಕೊಳೆರೋಗದ ಆತಂಕ

12:49 PM Aug 25, 2019 | Team Udayavani |

ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾದಾಗಲ್ಲೆಲ್ಲ ಅಡಕೆ ಬೆಳೆಗಾರರು ಆತಂಕದಲ್ಲಿ ಬದುಕುವ ಸ್ಥಿತಿ ಪ್ರತಿ ವರ್ಷವೂ ನಿರಂತರವಾಗಿದೆ. ತಾಲೂಕಿನ ಶೇ. 60ರಷ್ಟು ಅಡಕೆ ತೋಟಗಳಲ್ಲಿ ಅಡಕೆ ಮರಗಳಿಗೆ ಕೊಳೆರೋಗ ಉಲ್ಬಣಿಸಿದ್ದು ಅಡಕೆ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ.

Advertisement

ಕಳೆದ 1 ತಿಂಗಳಿಂದ ತಾಲೂಕಿನಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆಗೆ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಹಲವು ಅಡಕೆ ತೋಟಗಳಲ್ಲಿ ಕೊಳೆ ರೋಗ ಪೀಡಿತ ಅಡಕೆಗಳು, ಅಎಕೆ ಮರದ ಕೆಳಗಡೆ ರಾಶಿಗಟ್ಟಲೆ ಹರಡಿ ಬಿದ್ದಿರುವುದನ್ನು ಕಂಡು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಆಗುಂಬೆ ಭಾಗದಲ್ಲಿ ಶೇ.85ರಷ್ಟು ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.

ಈಗಾಗಲೇ ತಾಲೂಕಿನ ಅಡಕೆ ಬೆಳೆಗಾರರು ಅಡಕೆಗೆ ತಗುಲಿರುವ ಕೊಳೆರೋಗ ನಿಯಂತ್ರಣಕ್ಕೆ 2 ಬಾರಿ ಔಷಧ ಸಿಂಪಡಿಸಿದ್ದರೂ ಹಲವೆಡೆ ರೋಗದ ನಿಯಂತ್ರಣವಾಗಿಲ್ಲ. ಮಳೆಯ ನಡುವೆಯೂ ಬೆಳೆಗಾರರು ಅಡಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಔಷಧ ಸಿಂಪಡಿಸುತ್ತಿದ್ದಾರೆ. ಹಲವೆಡೆ ಔಷಧ ಸಿಂಪಡಣೆಗೆ ಕೊನೆಗಾರರು ಸಿಗದೆ ರೈತರು ಚಡಪಡಿಸುವಂತಾಗಿದೆ.

ಕಳೆದ 4ವರ್ಷಗಳಿಂದ ನಿರಂತರವಾಗಿ ತಾಲೂಕಿನ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಇನ್ನೊಂದೆಡೆ ಈ ಬಾರಿಯ ಗಾಳಿ- ಮಳೆಗೆ ಅಡಕೆ ತೋಟಗಳಲ್ಲಿನ ಅಡಕೆ ಮರಗಳು ನೆಲಕ್ಕುರುಳಿವೆ. ಹೀಗೆ ಹಲವು ಸಮಸ್ಯೆಗಳ ನಡುವೆ ಆತಂಕದಲ್ಲಿರುವ ಅಡಕೆ ಬೆಳೆಗಾರರು ಸರ್ಕಾರ ಹಾಗೂ ಇಲಾಖೆಯಿಂದ ಸಿಗಬೇಕಾದ ವಿಶೇಷ ಅನುದಾನ ಪರಿಹಾರದ ಬಗ್ಗೆ ಕಾಯುತ್ತ ಕುಳಿತಿದ್ದಾರೆ.

ಸರ್ಕಾರ ಕೂಡಲೇ ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಸಂಬಂಧಪಟ್ಟ ಇಲಾಖೆಯವರು ಅಡಕೆ ತೋಟಗಳ ಸ್ಥಳ ಪರಿಶೀಲಿಸಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಧನ ನೀಡುವುದು ಒಳ್ಳೆಯದು. ಕೊಳೆರೋಗದಿಂದ ತಾಲೂಕಿನ ಮಧ್ಯಮ ಹಾಗೂ ಸಾಮಾನ್ಯ ಅಡಕೆ ಬೆಳೆಗಾರರು ಹೆಚ್ಚು ಚಿಂತೆಗೆ ಒಳಗಾಗಿ ಆತಂಕದಿಂದ ಬದುಕುವಂತಾಗಿದೆ.

Advertisement

ಕೊಳೆರೋಗದ ಲಕ್ಷಣಗಳು: ಅಡಕೆ ಕಾಯಿಗಳ ಮೇಲೆ ಕಂದುಬಣ್ಣದ ಶಿಲೀಂಧ್ರದ ಬೆಳೆವಣಿಗೆ ಕಂಡು ಬರುತ್ತದೆ. ನಂತರ ಬಿಳಿ ಶಿಲೀಂಧ್ರದ ಬೆಳವಣಿಗೆ ಕಂಡು ಬಂದು ಕಾಯಿಗಳು ಕೊಳೆಯಲು ಪ್ರಾರಂಭಿಸಿ ಉದುರುತ್ತದೆ. ಗೊಂಚಲುಗಳಲ್ಲೆ ಕಪ್ಪಾಗಿ ಕಾಣುತ್ತದೆ. ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಹೆಚ್ಚಿನ ಹಾನಿಯಾಗುತ್ತದೆ. ಜೂನ್‌ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಮಲೆನಾಡಿನ ಭಾಗದ ಅಡಕೆ ತೋಟಗಳಲ್ಲಿ ಕೊಳೆರೋಗದ ತೀವ್ರತೆ ಹೆಚ್ಚಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next