ತೀರ್ಥಹಳ್ಳಿ: ಆಶ್ಲೇಷ ಮಳೆಯ ಅಬ್ಬರವು ತಾಲೂಕಿನಾದ್ಯಂತ ಕಳೆದ 2ದಿನಗಳಿಂದ ಮುಂದುವರಿದಿದೆ. ಬುಧವಾರ ಬೆಳಗ್ಗೆ ಜಲಾವೃತಗೊಂಡ ತುಂಗಾ ನದಿ ನಡುವಿನ ಶ್ರೀರಾಮ ಮಂಟಪ ಯಥಾಸ್ಥಿತಿಯಲ್ಲಿದೆ. ತುಂಗಾನದಿಯಲ್ಲಿ 86 ಅಡಿ ನೀರು ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ 2 ದಿನಗಳಿಂದ ತೀರ್ಥಹಳ್ಳಿ ಹಾಗೂ ಆಗುಂಬೆ ಭಾಗದಲ್ಲಿ ಸತತ ಗಾಳಿ ಮಳೆಗೆ ಗದ್ದೆ ಹಾಗೂ ಅಡಕೆ ತೋಟಗಳಲ್ಲಿ ಅಪಾರ ಹಾನಿಯಾಗಿದೆ. ತಾಲೂಕಿನಲ್ಲಿ 14 ಮನೆಗಳು ಹಾಗೂ 150ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳು ಹಾನಿಯಾಗಿವೆ. ನೂರಾರು ಕಿಮೀ ರಸ್ತೆಗಳು ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಕಳೆದ 24 ಗಂಟೆಗಳಲ್ಲಿ ತೀರ್ಥಹಳ್ಳಿಯಲ್ಲಿ 99.4 ಮಿಮೀ ಹಾಗೂ ಆಗುಂಬೆಯಲ್ಲಿ 276 ಮಿಮೀ ಮಳೆಯಾಗಿದೆ. ಆಗುಂಬೆ ಭಾಗದಲ್ಲಿ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯ ಆರ್ಭಟಕ್ಕೆ ಅನೇಕ ಮನೆಗಳ ಹೆಂಚುಗಳು ಹಾರಿ ಹೋಗಿವೆ. ಅಡಕೆ ತೋಟಗಳಲ್ಲಿ ಗಾಳಿಗೆ ಅಡಕೆ ಮರಗಳು ಮುರಿದು ದಿಕ್ಕಾ ಪಾಲಾಗಿವೆ. ಕಳೆದ 3 ದಿನಗಳಿಂ ಆಗುಂಬೆ ಭಾಗದಲ್ಲಿ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ತಾಲೂಕಿನಾದ್ಯಂತ ಭಾರೀ ಮಳೆಗೆ ವಿದ್ಯುತ್ ಕಂಬಗಳು ಉರುಳಿವೆ.
ಕುರುವಳ್ಳಿಯ ಜೋಪಡಿವಾಸಿಗಳಿಗೆ ಪಟ್ಟಣದ ರಾಮೇಶ್ವರ ಸಭಾಭವನದ ಗಂಜಿಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ. ಗುರುವಾರ ಜಿಲ್ಲಾ ಉಸ್ತುವಾರಿ ಅಧಿಕಾರಿ ಮಣಿವಣ್ಣನ್ ಹಾಗೂ ಶಾಸಕ ಆರಗ ಜ್ಞಾನೇಂದ್ರ ಗಂಜಿಕೇಂದ್ರದಲ್ಲಿನ ನಿರಾಶ್ರಿತರ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಉಪಹಾರ ಸೇವಿಸಿದರು. ಕ್ಷೇತ್ರದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಪಟ್ಟಣದ ರಾಮೇಶ್ವರ ಸಭಾಭವನದ ಗಂಜಿಕೇಂದ್ರಕ್ಕೆ ಭೇಟಿ ನೀಡಿ ನಿರಾಶ್ರಿತರ ಯೋಗಕ್ಷೇಮ ವಿಚಾರಿಸಿದರು. ಗುರುವಾರವೂ ತಾಲೂಕಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ಭಾರೀ ಮಳೆಯ ಕಾರಣ ರಜೆ ಘೋಷಿಸಿಲಾಗಿತ್ತು.
ತಡೆಗೋಡೆ ಕುಸಿತ: ತಾಲೂಕಿನ ಬೆಜ್ಜವಳ್ಳಿ ಆಯನೂರು ರಸ್ತೆಯ ಹೊನ್ನಸ್‌ಗದ್ದೆಯ ಬಳಿ ರಸ್ತೆ ಪಕ್ಕ ತಡೆಗೋಡೆಯೊಂದು ಭಾರೀ ಮಳೆಗೆ ಕುಸಿದಿದೆ. ಇದರಿಂದ ಪಕ್ಕದ ಅಡಕೆ ತೋಟ ಹಾಗೂ ರೈತರ ಗದ್ದೆಯ ಮೇಲೆ ಧಾರಾಕಾರ ನೀರು ಹರಿದು ತೋಟ- ಗದ್ದೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿ ಕಳೆದ ವರ್ಷ ನಿರ್ಮಾಣಗೊಂಡ ಈ ತಡೆಗೋಡೆಯ ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ದುರಸ್ತಿ ಮಾಡುವಂತೆ ಸೂಚಿಸಿದ್ದಾರೆ.