Advertisement

ತೀರ್ಥಹಳ್ಳಿ ಗೋಪಾಲ್ ಆಚಾರ್ಯರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ

06:11 PM Oct 31, 2021 | ವಿಷ್ಣುದಾಸ್ ಪಾಟೀಲ್ |

ಉಡುಪಿ : ಬಡಗು ತಿಟ್ಟು ಯಕ್ಷಗಾನದಲ್ಲಿ ‘ತೀರ್ಥಹಳ್ಳಿ’ ಎಂದೇ ಜನಪ್ರಿಯರಾಗಿರುವ ‘ಯಕ್ಷರಂಗದ ಸಿಡಿಲ ಮರಿ’, ‘ಅಭಿಮನ್ಯು’ ಬಿರುದಾಂಕಿತ ಗೋಪಾಲ್ ಆಚಾರ್ಯ ಅವರಿಗೆ ಅರ್ಹವಾಗಿಯೇ 2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

Advertisement

ಪ್ರಸಕ್ತ ಮೇಳದ ತಿರುಗಾಟ ನಿಲ್ಲಿಸಿದರೂ, ಗಜ್ಜೆ ಕಟ್ಟಿ ಉತ್ಸಾಹದಲ್ಲಿ ಕುಣಿಯುತ್ತಿರುವ ಚಿರ ಯುವಕ ತೀರ್ಥಹಳ್ಳಿಯವರು ಬಡಗುತಿಟ್ಟು ಯಕ್ಷರಂಗವನ್ನು ಶ್ರೀಮಂತ ಗೊಳಿಸಿದವರು.

ರಂಜದಕಟ್ಟೆ, ನಾಗರಕೊಡಿಗೆ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ನಡೆಸಿ, ಪೆರ್ಡೂರು ಮೇಳವೊಂದರಲ್ಲೇ 3೦ ಕ್ಕೂ ಹೆಚ್ಚು ವರ್ಷ ತಿರುಗಾಟ ನಡೆಸಿ ನಿವೃತ್ತರಾಗಿದ್ದರು. ಅಪಾರ ಅಭಿಮಾನಿಗಳ ಸಮಕ್ಷಮದಲ್ಲಿ ‘ಅರವತ್ತರ ಅಭಿಮನ್ಯು’ ಎಂಬ ಕಾರ್ಯಕ್ರಮದಲ್ಲಿ ‘ಪದ್ಮಶ್ರೀ ರಾಮಚಂದ್ರ ಚಿಟ್ಟಾಣಿ’ ಅವರ ‘ದ್ರೋಣ’ ಪಾತ್ರದ ಎದುರು ‘ಅಭಿಮನ್ಯು’ ವಾಗಿ ನವ ತರುಣನಂತೆ ವೀರಾವೇಶ ತೋರಿ ರಂಗದ ಧೂಳೆಬ್ಬಿಸಿದ್ದರು.

1955 ರಲ್ಲಿ ಜನಿಸಿದ್ದ ಗೋಪಾಲ್ ಆಚಾರ್ಯರು, ಅದ್ಭುತ ಲಯ, ಅಪಾರ ಶ್ರುತಿ ಬದ್ಧತೆ, ರಂಗ ನಡೆಗಳು,ಪೌರಾಣಿಕ ಪ್ರಜ್ಞೆ, ಪ್ರವೇಶದಿಂದ ನಿರ್ಗಮನದವರೆಗೆ ಎಲ್ಲಾ ತರಹದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಮಾಂತ್ರಿಕ ಶಕ್ತಿಯನ್ನು ತನ್ನಲ್ಲಿ ಹೊಂದಿದ್ದರು.

ತನ್ನ ವೃತ್ತಿ ಜೀವನದಲ್ಲಿ ಎಂದೂ ಬೇಡಿಕೆ ಕಳೆದುಕೊಳ್ಳದ ಅಪಾರ ಅಭಿಮಾನಿಗಳನ್ನು ಸಂಪಾದಿಸುತ್ತಲೇ ಹೋದ ಗೋಪಾಲ್ ಆಚಾರ್ಯ ಅವರಿಗೆ ಈಗಾಗಲೇ ಸಾವಿರಾರು ಸನ್ಮಾನಗಳು ಸಂದಿದ್ದು, ರಾಜ್ಯೋತ್ಸವ ಪ್ರಶಸ್ತಿ ಅವರ ಕೀರ್ತಿಯನ್ನು ಇನ್ನಷ್ಟು ಬೆಳಗಿದೆ.

Advertisement

ಎಲ್ಲಾ ಪ್ರಸಂಗದ ಶ್ರೀಕೃಷ್ಣ, ಲವ ಕುಶ , ಬಬ್ರುವಾಹನ , ಸುಧನ್ವ, ಚಂದ್ರಹಾಸ,ದೇವವ್ರತ ಮೊದಲಾದ ಪೌರಾಣಿಕ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. ಬಹುಪಾಲು ಡೇರೆ ಮೇಳಗಳಲ್ಲಿಯೇ ವೃತ್ತಿ ಜೀವನ ಕಳೆದ ಗೋಪಾಲ್ ಆಚಾರ್ಯರಿಗೆ ಹೊಸ ಪ್ರಸಂಗಗಳೂ ಅಪಾರ ಜನ ಮನ್ನಣೆ ತಂದಿಟ್ಟಿವೆ. ಮರೆಯಾದ ಮೇರು ಭಾಗವತ ಕಾಳಿಂಗ ನಾವಡ ವಿರಚಿತ ‘ನಾಗಶ್ರೀ’ ಪ್ರಸಂಗದ ‘ಶೈಥಿಲ್ಯ’ ಪಾತ್ರ ಅವರ ಯೌವನದಲ್ಲಿ ಪ್ರಖ್ಯಾತಿ ಪಡೆದು ಅವರ ಗುರುತಿಸುವಿಕೆಗೆ ಕಾರಣವಾಗಿತ್ತು.

ಯಕ್ಷಾಭಿಮಾನಿಗಳು, ಕಲಾವಿದರು ನಾಟ್ಯದ ವಿಚಾರಕ್ಕೆ ಬಂದರೆ ‘ತೀರ್ಥಹಳ್ಳಿಯವರಿಗೆ ತೀರ್ಥಹಳ್ಳಿಯವರೇ ಸಾಟಿ’ ಎನ್ನುತ್ತಾರೆ. ವಯಸ್ಸು ಹೆಚ್ಚುತ್ತಾ ಹೋದಂತೆ ತೀರ್ಥಹಳ್ಳಿಯವರು ರಂಗದಲ್ಲಿ ಉತ್ಸಾಹ ಹೆಚ್ಚಿಸುತ್ತಾ ಹೋದರೆ ಹೊರತು ಎಂದೂ ದಣಿಯಲಿಲ್ಲ.

ಗೆಜ್ಜೆ ಕಟ್ಟಿ ಕೋಡಂಗಿ ಪಾತ್ರದಿಂದ ಯಕ್ಷ ಜೀವನ ಆರಂಭಿಸಿ ಹಂತ ಹಂತವಾಗಿ ಮೇಲೇರಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರು ದಿಗ್ಗಜ ಕಲಾವಿದರ ಒಡನಾಡಿಯಾಗಿ, ರಂಗದ ಮೇಲೆ ಬೆವರಿನಲ್ಲಿ ಮಿಂದೆದ್ದು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವುದು ರಾಜ್ಯೋತ್ಸವ ಪ್ರಶಸ್ತಿಯಿಂದ ಶೃತಪಟ್ಟಿದೆ .

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಹರಿಗೆ ನೀಡುವ ಸಲುವಾಗಿ ರಾಜ್ಯ ಸರಕಾರ ಜನರಿಂದಲೇ ಶಿಫಾರಸು ಆಹ್ವಾನಿಸಿತ್ತು, ತೀರ್ಥಹಳ್ಳಿ ಗೋಪಾಲ್ ಆಚಾರ್ಯ ಅವರಿಗಿದ್ದ ಸಾವಿರಾರು ಅಭಿಮಾನಿಗಳು ಪ್ರಶಸ್ತಿ ನೀಡುವಂತೆ ಸರಕಾರಕ್ಕೆ ಶಿಫಾರಸು ಮಾಡಿದ್ದರು.ಅದನ್ನು ಪರಿಗಣಿಸಿದ ಸರಕಾರ ಸಾಧಕ ಶ್ರೇಷ್ಠ, ಯುವ ಕಲಾವಿದರಿಗೆ ಮಾದರಿ ಎನಿಸುವ ಗೋಪಾಲ ಆಚಾರ್ಯ ಅವರಿಗೆ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next