Advertisement

ನೆರೆ ಸ್ಥಿತಿ ನಿರ್ವಹಣೆ ನಿರ್ಲಕ್ಷ್ಯಕ್ಕೆ ಆಕ್ರೋಶ

03:30 PM Oct 26, 2019 | Team Udayavani |

ತೀರ್ಥಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತಿವೃಷ್ಟಿಯಿಂದಾಗಿ ಹಾನಿಗೆ ಒಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ವಿಫಲವಾಗಿವೆ. ಮಲೆನಾಡು ಭಾಗದ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಅಡಕೆಗೆ ತಗುಲಿದ ಕೊಳೆರೋಗದ ಬಗ್ಗೆ ಸೂಕ್ತ ಪರಿಹಾರ ನೀಡದ ಸರ್ಕಾರಗಳ ವೈಫಲ್ಯ ಹಾಗೂ ಕ್ಷೇತ್ರದ ಶಾಸಕರ ನಿರ್ಲಕ್ಷ್ಯ ಖಂಡಿಸಿ ತೀರ್ಥಹಳ್ಳಿ ಕಾಂಗ್ರೆಸ್‌ ವತಿಯಿಂದ ತಾಲೂಕಿನ ಆಗುಂಬೆಯಿಂದ ಮೇಗರವಳ್ಳಿಯವರೆಗೆ 15 ಕಿಮೀಗಳ ಬೃಹತ್‌ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

Advertisement

ಆಗುಂಬೆಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ಆರಂಭಗೊಂಡ ಈ ಪಾದಯಾತ್ರೆಗೆ ಮಾಜಿ ಶಾಸಕ ಕಡಿದಾಳ್‌ ದಿವಾಕರ್‌ ಚಾಲನೆ ನೀಡಿದರು. ಸುರಿಯುತ್ತಿದ್ದ ಮಳೆಯ ನಡುವೆಯೂ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮೇಗರವಳ್ಳಿಯ ಅರಣ್ಯ ಇಲಾಖೆ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ನೆರೆ ಸಂತ್ರಸ್ತರನ್ನು ಸಂಪೂರ್ಣ ಕಡೆಗಣಿಸಿದೆ.

ನೆರೆ ಪರಿಹಾರ ಸಿಗದೆ ಅತಂತ್ರ ಸ್ಥಿತಿ ತಲುಪಿದ್ದಾರೆ. ಮಲೆನಾಡಿನ ರೈತರು ಇಂದು ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು, ಇದರ ಬಗ್ಗೆ ಗಮನ ಹರಿಸದ ಎರಡೂ ಸರ್ಕಾರಗಳು ನಿಷ್ಕ್ರಿಯಗೊಂಡಿವೆ ಎಂದರು.

ಆಗುಂಬೆ ಭಾಗದಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಕಳೆದ ಹಲವು ತಿಂಗಳಿನಿಂದ ಈ ಭಾಗದಲ್ಲಿ ಒಂಟಿ ಕಾಡಾನೆಯ ಹಾವಳಿ ವಿಪರೀತವಾಗಿದೆ. ಜೊತೆಗೆ ಮಂಗಗಳ ಹಾವಳಿಯಿಂದ ಅಡಕೆ ಬೆಳೆಗಾರರು ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲಾಗದೆ ಅತಂತ್ರ ಸ್ಥಿತಿ ತಲುಪಿದ್ದಾರೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರ್ಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದರು.

Advertisement

ಕ್ಷೇತ್ರದಲ್ಲಿರುವ ಹಲವು ಸಮಸ್ಯೆಗಳ ಬಗ್ಗೆ ಗಮನ ಹರಿಸದ ಶಾಸಕ ಜ್ಞಾನೇಂದ್ರ ನೇತೃತ್ವದ ಬಿಜೆಪಿ ದ್ವೇಷದ ರಾಜಕಾರಣದಲ್ಲಿ ತೊಡಗಿದೆ. ರೈತರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಗಾಂಧಿ ಹೆಸರಿನಲ್ಲಿ ಸಂಕಲ್ಪಯಾತ್ರೆ ಹೊರಟಿದ್ದಾರೆ. ಬಿಜೆಪಿಯವರು ನಡೆಸುತ್ತಿರುವ ಗಾಂಧಿ  ಹೆಸರಿನ ಯಾತ್ರೆ ಕಪ್ಪೆಯಾತ್ರೆಯಾಗಿದೆ ಎಂದು ವ್ಯಂಗ್ಯವಾಡಿದರು. ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುವ ಬಿಜೆಪಿಯವರಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯವರು ನೀಡುತ್ತಿರುವ ಕಿರುಕುಳದ ವಿಚಾರ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಮಲೆನಾಡಿನ ರೈತರ ಸಮಸ್ಯೆಯ ಬಗ್ಗೆ ಮಾತನಾಡದ ಬಿಜೆಪಿಯ ಜನಪ್ರತಿನಿಧಿಗಳಿಗೆ ಮೋದಿ ಮತ್ತು ಶಾ ಅವರನ್ನು ಹೊಗಳುವ ಕೆಲಸವೇ ಹೆಚ್ಚಾಗಿದೆ. ಜೊತೆಗೆ ಮಲೆನಾಡಿನ ಪ್ರಮುಖ ಬೆಳೆ ಅಡಕೆಯ ಬೆಲೆ ನೆಲಕಚ್ಚಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಯಲಿದ್ದು, ಇದಕ್ಕೆ ಕಾರಣ ಕೇಂದ್ರದ ಬಿಜೆಪಿ ಸರ್ಕಾರ.

ಈ ಎರಡೂ ಸರ್ಕಾರಗಳು ಅಡಕೆ ಬೆಳೆಗಾರರ ವಿರೋ ಧಿ ಸರ್ಕಾರವಾಗಿವೆ ಎಂದರು. ಪ್ರತಿಭಟನೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ, ಮುಡುಬಾ ರಾಘವೇಂದ್ರ, ಕೆಪಿಸಿಸಿ ಸದಸ್ಯ ಜಿ.ಎಸ್‌. ನಾರಾಯಣ ರಾವ್‌, ಮುಖಂಡರಾದ ಪಟ್ಟಮಕ್ಕಿ ಮಹಾಬಲೇಶ್‌, ಬಾಳೇಹಳ್ಳಿ ಪ್ರಭಾಕರ್‌, ಎಚ್‌. ಪದ್ಮನಾಭ, ಎಪಿಎಂಸಿ ಸದಸ್ಯರಾದ ಹಸಿರುಮನೆ ಮಹಾಬಲೇಶ್‌, ಕೇಳೂರು ಮಿತ್ರ, ಕೆಳಕೆರೆ ದಿವಾಕರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಕೆಳಕೆರೆ ಪ್ರದೀಪ್‌, ಧರಣೇಶ್‌, ಪಡುವಳ್ಳಿ ಹರ್ಷೇನ್ದ್ರ ಕುಮಾರ್‌, ಜಯಪ್ರಕಾಶ್‌ ಶೆಟ್ಟಿ, ಅಮ್ರಪಾಲಿ ಸುರೇಶ್‌, ಬಂಡಿ ರಾಮಚಂದ್ರ, ಮಹಿಳಾ ಮುಖಂಡರಾದ ಪ್ರಭಾವತಿ ಶಾಮಣ್ಣ, ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ, ಭಾರತಿ ಪ್ರಭಾಕರ್‌, ಶ್ವೇತಾ ಬಂಡಿ, ನವಮಣಿ ರವಿಕುಮಾರ್‌,
ವೀಣಾ ಗಿರೀಶ್‌, ಶೃತಿ ವೆಂಕಟೇಶ್‌, ನಯನ ಶೆಟ್ಟಿ, ಸುಶೀಲ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next