ತೀರ್ಥಹಳ್ಳಿ: ನೂರಾರು ವೈವಿಧ್ಯಮಯ ಭತ್ತದ ತಳಿಗಳ ಅಭಿವೃದ್ಧಿ ಮತ್ತು ಬಳಕೆ ಇಂದಿನ ಅಗತ್ಯವಾಗಿದೆ. ಖಾಯಿಲೆಗಳನ್ನು ತಡೆಗಟ್ಟುವ ಉತ್ತಮ ಆರೋಗ್ಯವನ್ನು ನೀಡುವ ಶಕ್ತಿ ಈ ಭತ್ತದ ತಳಿಗಳಿಗಿವೆ. ಬೀಜ ರಕ್ಷಕರು ಮತ್ತು ಬೀಜ ಸಂಗ್ರಾಹಕರು ದೇಶದ ಬಹು ದೊಡ್ಡ ಆಸ್ತಿ ಎಂದು ಆಹಾರ ತಜ್ಞ, ಅಂಕಣಕಾರ ಕೆ.ಸಿ. ರಘು ಹೇಳಿದರು.
ಪಟ್ಟಣದ ಕುರುವಳ್ಳಿಯ ಪುರುಷೋತ್ತಮ ಸಾವಯವ ಕೃಷಿ ಪರಿವಾರ, ಹೇಮಾದ್ರಿ ಸೌಹಾರ್ದ ಸಹಕಾರಿ, ಶ್ರೀ ರಾಮೇಶ್ವರ ಸೌಹಾರ್ದ ಸಹಕಾರಿ, ಸರಸ್ವತಿ ಸೌಹಾರ್ದ ಸಹಕಾರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅರಿಯೋಣ ನಮ್ಮನ್ನ-ನಮ್ಮ ಅನ್ನ ಭತ್ತ ಉಳಿಸಿ ಬೆಳೆಸಿ ಅಭಿಯಾನ, ಕೃಷಿ ಗ್ರಾಹಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನಕ್ಕೆ ಗೊತ್ತಿಲ್ಲದೇ ಇರುವ ಭತ್ತದ ವೈವಿಧ್ಯಮಯ ತಳಿಗಳು ನಮ್ಮಲಿವೆ. ಇಂತಹ ಭತ್ತದ ತಳಿಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮಲಿದೆ. ಪ್ರಸ್ತುತ ಬಹಳಷ್ಟು ಭತ್ತದ ತಳಿಗಳು ನಮ್ಮಿಂದ ಮರೆಯಾಗಿವೆ. ಆಹಾರದಲ್ಲಿನ ಶೀಘ್ರ ಜೀರ್ಣಕ್ರಿಯೆಗೆ ಹಾಗೂ ಆರೋಗ್ಯ ಕೆಡಲು ಸಹ ಈ ತಳಿಗಳು ಕಾರಣವಾಗುತ್ತದೆ. ಆಹಾರದಿಂದ ಪೌಷ್ಟಿಕಾಂಶವೇ ವಿನಹ ಪೌಷ್ಟಿಕಾಂಶದಿಂದ ಆಹಾರವಲ್ಲ. ಆಹಾರವನ್ನು ವೈದ್ಯಕೀಯಗೊಳಿಸಬಾರದು. ಆಹಾರವೆಂದಾಗ ವೈದ್ಯರು, ದಾದಿಯರು ನೆನಪಾಗುವುದು ದುರಾದೃಷ್ಟಕರ ಎಂದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ ತಳಿ ವಿಜ್ಞಾನಿ ಡಾ| ದುಶ್ಯತ್ ಕುಮಾರ್ ಮಾತನಾಡಿ, ಭತ್ತದ ಸ್ಥಳೀಯ ತಳಿಗಳಲ್ಲಿ ಹೆಚ್ಚಿನ ಜೀವಸತ್ವ ಅಡಗಿದೆ. ತಳಿರಕ್ಷಣೆ ಇಂದು ಅಗತ್ಯವಾಗಿದ್ದು, ತಳಿ ಸಂರಕ್ಷಣೆಗೆ ಶಿವಮೊಗ್ಗದಲ್ಲಿ ಕೇಂದ್ರವೊಂದನ್ನು ತೆರೆಯಲಾಗಿದೆ. ರೈತರು ನೀಡುವ ಭತ್ತದ ತಳಿಯನ್ನು ಅವರ ಹೆಸರಿನಲ್ಲಿ ನಮೂದು ಮಾಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 6 ಬಗೆಯ ತಾಯಿ ಬೀಜವನ್ನು ಸಂರಕ್ಷಿಸಲಾಗಿದೆ. ಭತ್ತ ಬೆಳೆದ ರೈತರ ಆರ್ಥಿಕ ಚೈತನ್ಯ ವೃದ್ಧಿಯಾಗಲು ಭತ್ತಕ್ಕೆ ಬ್ರಾಂಡ್ ಮಾದರಿಯ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್, ನಶಿಸಿ ಹೋಗುತ್ತಿರುವ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡುವ ಬಗ್ಗೆ ವಿಶ್ವವಿದ್ಯಾಲಯಗಳು ಹೆಚ್ಚು ಆಸಕ್ತಿ ವಹಿಸಬೇಕು. ಭತ್ತದ ತಳಿಗಳು ನಮ್ಮಿಂದ ದೂರ ಹೋದಂತೆ ನಮ್ಮಲ್ಲಿನ ಆಹಾರ ಪದ್ಧತಿಯೂ ಬದಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಕೃಷಿ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್. ಸುಬ್ಬರಾವ್ ವಹಿಸಿದ್ದರು. ಕೃಷಿ ಪ್ರಯೋಗ ಪರಿವಾರದ ವಿಶ್ವಸ್ಥ ಆನಂದ್, ತಳಿ ಸಂರಕ್ಷಕರಾದ ಶ್ರೀಧರ್ ಆಶ್ರಮ, ಬಿ.ಕೆ. ದೇವರಾವ್, ಆಂಜನೇಯ, ಆರ್.ಜಿ. ಭಟ್, ಭೋರೇಗೌಡ, ಶೇಣಿಕರಾಜ್, ಹೂವಪ್ಪ ಇದ್ದರು. ಕೃಷಿ ಪರಿವಾರದ ಅರುಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.