ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ಆಜಾದ್ ಮುಖ್ಯ ರಸ್ತೆ ಸ್ಮಾರ್ಟ್‌ಸಿಟಿಯಾಗಿ ರೂಪುಗೊಂಡು ಮಲೆನಾಡಿಗರ, ಹೊರ ಊರುಗಳಿಂದ ಬರುವ ಪ್ರವಾಸಿಗರ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸೌಂದರ್ಯ ತುಂಬಿದ ರಸ್ತೆ ರಾಜ್ಯಕ್ಕೆ ಮಾದರಿ ರಸ್ತೆಯಾಗಿ ಕಣ್ಮನ ಸೆಳೆಯುವಂತಾಗಿದೆ.
ಈ ಆಜಾದ್ ಮುಖ್ಯ ರಸ್ತೆ ಪಟ್ಟಣದ ಕೊಪ್ಪ ಸರ್ಕಲ್‌ನಿಂದ ಆಗುಂಬೆ ರಸ್ತೆಯ ಎಪಿಎಂಸಿ ತನಕ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಕಾಮಗಾರಿಯೊಂದಿಗೆ ಕೆಲಸ ಮುಗಿಸಿದೆ. ಪರಿಹಾರ ಧನ ಸೇರಿದಂತೆ ಕಾಮಗಾರಿಯ ಒಟ್ಟು 35ಕೋಟಿ ವೆಚ್ಚವಾಗಿದ್ದು, ರಾಜ್ಯಕ್ಕೆ ಮಾದರಿ ರಸ್ತೆಯಾಗಿ ಪ್ರಖ್ಯಾತಿಗೊಂಡಿದೆ.
2011ರಲ್ಲಿ ಮುಖ್ಯರಸ್ತೆ ವಿಸ್ತರಣೆಯ ಕಾಮಗಾರಿ ಪ್ರಸ್ತಾವವನ್ನು ಅಂದಿನ ಹಾಗೂ ಇಂದಿನ ಶಾಸಕರಾದ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವರ್ತಕರು ಹಾಗೂ ಸಾರ್ವಜನಿಕರ ಸಭೆಯಲ್ಲಿ ರೂಪುರೇಷೆಗೊಂಡಿತು. ಅಂದು ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಅವರ ನಿರ್ಧಾರ ಹಾಗೂ ಸ್ಪಂದನೆ ರಸ್ತೆ ಕಾಮಗಾರಿ ಚಾಲನೆಗೆ ಹೆಚ್ಚು ಒತ್ತು ಬರುವಂತಾಯಿತು. ಈ ತನಕ 154 ಆಸ್ತಿಗೆ 15ಕೋಟಿ ಪರಿಹಾರ ಧನ ಪಾವತಿಸಲಾಗಿದೆ. 32 ಆಸ್ತಿಗೆ ಪರಿಹಾರ ಧನ ವಿತರಣೆ ಬಾಕಿ ಇದೆ. ಆಜಾದ್ ರಸ್ತೆಯ 2 ಭಾಗಗಳಲ್ಲಿ ಆಕರ್ಷಕವಾದ ಕಟ್ಟಡಗಳು ತಲೆಎತ್ತಿ ನಿಂತಿದ್ದು, ಗುಣಮಟ್ಟದ ಕಾಮಗಾರಿಯಿಂದ ರಸ್ತೆಯ ವೈಭವ ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಈ ಮುಖ್ಯ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಈ ಭಾಗದ ಜನಪ್ರತಿನಿಧಿ ಗಳು ಸಾರ್ವಜನಿಕರು, ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಕಾಳಜಿಯಿಂದ ಕಾಮಗಾರಿ ಯಶಸ್ಸಿನ ಹಾದಿಯಲ್ಲಿ ಸಾಗುವಂತಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಶಿವಮೊಗ್ಗದ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಬಾಲಕೃಷ್ಣ ಹೇಳಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆಜಾದ್ ಮುಖ್ಯ ರಸ್ತೆಯ ಕಾಮಗಾರಿಯ ಕುರಿತು ರಾಜ್ಯ ಲೋಕೋಪಯೋಗಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅತ್ಯುತ್ತಮ ರಸ್ತೆ ವಿಸ್ತೀರ್ಣ ಕಾಮಗಾರಿ ಮಾದರಿಯಾಗಿ ಅಳವಡಿಸಿಕೊಂಡು ರಾಜ್ಯದ ಹಲವಡೆ ರೂಪಿಸಬಹುದು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮಲೆನಾಡಿನ ಹೆಬ್ಟಾಗಿಲು ಎಂದೇ ಹೆಸರಾದ ತೀರ್ಥಹಳ್ಳಿ ಪಟ್ಟಣ ಸ್ಮಾರ್ಟ್‌ಸಿಟಿಯಾಗಿ ರೂಪುಗೊಂಡು
ರಾಜ್ಯಕ್ಕೆ ಮಾದರಿ ಪಟ್ಟಣವಾಗಿ ಹೆಸರು ಮಾಡಿರುವುದು ಮಲೆನಾಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.