Advertisement

ತ್ರಿಪುರ ಚಿಟ್‌ ಕಂಪನಿಯ 250 ಕೋಟಿ ಚೀಟಿಂಗ್‌

06:00 AM Jul 19, 2018 | |

ಬೆಂಗಳೂರು: ಚಿಟ್‌ ಫ‌ಂಡ್‌ ಸಂಸ್ಥೆಗಳ ಮೋಸದ ಬಗ್ಗೆ ಬಯಲಾಗುತ್ತಿದ್ದರೂ, ಜನ ಮಾತ್ರ ಇವರಿಂದ ದೂರವಾಗುತ್ತಿಲ್ಲ!
ಇದೀಗ ಬೆಂಗಳೂರಿನಲ್ಲಿ ಮತ್ತೂಂದು ಚಿಟ್‌ ಫ‌ಂಡ್‌ ಕಂಪನಿಯ ಮೋಸ ಬಯಲಾಗಿದ್ದು ಇದರ ಮಾಲೀಕ 250 ಕೋಟಿ ರೂ. ಪಂಗನಾಮ ಹಾಕಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

Advertisement

ಮಲ್ಲೇಶ್ವರಂನಲ್ಲಿದ್ದ ತ್ರಿಪುರ ಚಿಟ್‌ ಫ‌ಂಡ್‌ ಕಂಪನಿಯ ಮುಖ್ಯಸ್ಥ ಕೃಷ್ಣಪ್ರಸಾದ್‌ ಮತ್ತು ಆತನ ಸಹೋದ್ಯೋಗಿ ವೇಣು ಎಂಬುವವರು ನಾಲ್ಕು ರಾಜ್ಯಗಳ 30 ಸಾವಿರ ಮಂದಿಗೆ ಮೋಸ ಮಾಡಿದ್ದಾರೆ.

18 ವರ್ಷಗಳ ಹಿಂದೆ ಆರೋಪಿ ಕೃಷ್ಣಪ್ರಸಾದ್‌ ತಮಿಳುನಾಡಿನಲ್ಲಿ ತ್ರಿಪುರ ಚಿಟ್‌ ಫ‌ಂಡ್‌ ಕಂಪನಿ ತೆರೆದಿದ್ದು, ಇದನ್ನು ಕರ್ನಾಟಕ, ಕೇರಳ, ಆಂಧ್ರಪ್ರದೇಶದಲ್ಲಿ ವಿಸ್ತರಿಸಿ ನೂರಾರು ಶಾಖೆಗಳು ಹಾಗೂ ಉಪ ಶಾಖೆಗಳನ್ನು ತೆರೆದು ಸಾವಿರಾರು  ಜನರನ್ನು ನೋಂದಾಯಿಸಿಕೊಂಡಿದ್ದರು. ಹೂಡಿಕೆ ಹೆಸರಿನಲ್ಲಿ ನಾಲ್ಕು ರಾಜ್ಯದ ಸುಮಾರು 30 ಸಾವಿರ ಮಂದಿಯಿಂದ ಏಜೆಂಟರ ಮೂಲಕ ನೂರಾರು ಕೋಟಿ ರೂ. ಸಂಗ್ರಹಿಸಿದ್ದ. ಕರ್ನಾಟಕದಲ್ಲೇ 85 ಕೋಟಿ ರೂ. ವಂಚನೆ ಮಾಡಿದ್ದಾನೆ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಆರಂಭದಲ್ಲಿ ನಿಗದಿತ ಸಮಯಕ್ಕೆ  ಹಣ ಹಿಂದಿರುಗಿಸುತ್ತಿದ್ದ ಕೃಷ್ಣಪ್ರಸಾದ್‌ ಕಳೆದ ಅಕ್ಟೋಬರ್‌ನಿಂದ ಹಣ ವಾಪಸ್‌ ನೀಡದೆ ತಲೆಮರೆಸಿಕೊಂಡಿದ್ದ. ಇತ್ತ  ಹೂಡಿಕೆ ಮಾಡಿದ್ದವರು ಕಂಪನಿಯ ಏಜೆಂಟರಿಗೆ ಹಣ ವಾಪಸ್‌ ಮಾಡುವಂತೆ ಒತ್ತಡ ಹೇರುತ್ತಿದ್ದಂತೆ ಎಲ್ಲ ಶಾಖೆಗಳ ನಿರ್ದೇಶಕರು ನಾಪತ್ತೆಯಾಗಿದ್ದರು.  ಈ ಸಂಬಂಧ ಹಣ ಕಳೆದುಕೊಂಡವರು ಸ್ಥಳೀಯ ಠಾಣೆಗಳಿಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದರು. ಅಲ್ಲದೆ, ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.

ಚೆನ್ನೈನಲ್ಲಿ ಬಂಧನ: ಕಂಪನಿಯ ಏಜೆಂಟರು  ಸಹ ಏ.21ರಂದು ಮಲ್ಲೇಶ್ವರಂ ಠಾಣೆಗೆ ದೂರು ನೀಡಿ ಕೃಷ್ಣಪ್ರಸಾದ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಆರೋಪಿ ಪತ್ತೆಗಾಗಿ ನಗರ ಪೊಲೀಸರ ವಿಶೇಷ ತಂಡ ತಮಿಳುನಾಡಿನಲ್ಲಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲೇ  ಚೆನ್ನೈ ಪೊಲೀಸರು ವಂಚನೆ ಪ್ರಕರಣದಲ್ಲಿ ಕೃಷ್ಣಪ್ರಸಾದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಮಾಹಿತಿ ಸಂಗ್ರಹಿಸಿದ ಮಲ್ಲೇಶ್ವರಂ ಪೊಲೀಸರು ಕೋರ್ಟ್‌ ಅನುಮತಿ ಮೇರೆಗೆ ಐದು ದಿನಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಅಮಾನ್ಯದಿಂದ ಹೊಡೆತ: 2016ರ ನವೆಂಬರ್‌ನಲ್ಲಿ 1000 ಮತ್ತು 500ರ ನೋಟುಗಳು ಅಮಾನ್ಯಗೊಂಡಿದ್ದು ಹಾಗೂ ಒಂದೆರಡು ಬಾರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಕಂಪನಿಗೆ ಕೋಟ್ಯಂತರ ರೂ. ನಷ್ಟವಾಗಿತ್ತು.  ಹೀಗಾಗಿ ಹಣ ಹಿಂದಿರುಗಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಲಾಭಗಳಿಸಿದ ಹಣದ ಪೈಕಿ 40 ಕೋಟಿ ರೂ. ಮೌಲ್ಯದಲ್ಲಿ ಚೆನ್ನೈ ಮತ್ತು ಮುಂಬೈನಲ್ಲಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳನ್ನು ನಿರ್ಮಿಸಿದ್ದೇನೆ. ಆದಷ್ಟು ಬೇಗ ಎಲ್ಲ ಗ್ರಾಹಕರ ಹಣ ಹಿಂದಿರುಗಿಸುತ್ತೇನೆ ಎಂದು ಕೃಷ್ಣಪ್ರಸಾದ್‌ ಹೇಳಿಕೆ ದಾಖಲಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 85 ಕೋಟಿ ರೂ. ವಂಚನೆ
ಆರೋಪಿಯು  ಕರ್ನಾಟಕದಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ 85 ಕೋಟಿ ರೂ. ವಂಚಿಸಿದ್ದಾನೆ. ಈತನ ವಿರುದ್ಧ ಮಲ್ಲೇಶ್ವರಂ ಠಾಣೆವೊಂದರಲ್ಲಿಯೇ 40 ವಂಚನೆ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನಗರದ ಇತರೆ 11 ಠಾಣೆಗಳಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರಂ ಕಚೇರಿ ಎದುರು ಪ್ರತಿಭಟನೆ
ಆರೋಪಿಯ ಬಂಧನದ ವಿಚಾರ ತಿಳಿಯುತ್ತಿದ್ದಂತೆ ನೂರಾರು ಮಂದಿ ಗ್ರಾಹಕರು ಬುಧವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ತ್ರಿಪುರ ಚಿಟ್‌ಫ‌ಂಡ್‌ ಕಂಪನಿ ಎದುರು ಜಮಾಯಿಸಿ ಆರೋಪಿಯಿಂದ ಹಣ ಕೊಡಿಸುವಂತೆ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗ್ರಾಹಕರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next