ತೀರ್ಥಹಳ್ಳಿ: ಮಲೆನಾಡಿನ ಹೆಸರಾಂತ ಸೌಹಾದರ್ ಧಾರ್ಮಿಕ ಕೇಂದ್ರವಾದ ಹಣಗೆರೆಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಈ ಕೇಂದ್ರಕ್ಕೆ ಬರುವ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಮುಂದಿನ ದಿನಗಳಲ್ಲಿ ಆತಂಕ ಉಂಟಾಗುವ ಸಾಧ್ಯತೆ ಇದೆ.
ತಾಲೂಕಿನ ಮಂಡಗದ್ದೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದಲ್ಲಿ ಬಿಸಿಲಿನ ಝಳ ಹೆಚ್ಚಾಗಿ ನೀರಿನ ಸಮಸ್ಯೆ ತಲೆದೋರಿದೆ. ಪ್ರತಿ ನಿತ್ಯ ಈ ಕೇಂದ್ರಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಆದರೆ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ಕೇಳಿ ಬರುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಇಲ್ಲಿ ನಡೆದ ಹೆಸರಾಂತ ಉರೂಸ್ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ.
ಸರ್ಕಾರಕ್ಕೆ ಈ ಧಾರ್ಮಿಕ ಕೇಂದ್ರದಿಂದ ವರ್ಷಕ್ಕೆ 2 ಕೋಟಿಗೂ ಹೆಚ್ಚು ಆದಾಯವಿದೆ. ಶೆಟ್ಟಿಹಳ್ಳಿ ವನ್ಯಜೀವಿ ಆಭಯಾರಣ್ಯ ವ್ಯಾಪ್ತಿಗೆ ಸೇರಿದ ಹಣಗೆರೆ ಕಟ್ಟೆ ಪ್ರದೇಶಕ್ಕೆ ನೈಸರ್ಗಿಕವಾಗಿ ಕುಡಿಯುವ ನೀರು ಒದಗಿಸುವ ಅನೇಕ ಮೂಲಗಳಿವೆ. ಆದರೆ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸೇರಿದ ಈ ಕೇಂದ್ರದ ಸಮಸ್ಯೆ ನಿವಾರಣೆ ವಿಷಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ.
ಗ್ರಾಪಂ ವತಿಯಿಂದ ನೀರು ಒದಗಿಸುವ ಯೋಜನೆ ಮಾಡುವ ಬಗ್ಗೆ ಜನಪ್ರತಿನಿಧಿಗಳು ಚಿಂತಿಸಿಲ್ಲ. ಕೊಳವೆ ಬಾವಿ ಹಾಗೂ ನೀರಿನ ಟ್ಯಾಂಕ್ ಮೂಲಕ ಈ ಬೇಸಿಗೆ ಸಂದರ್ಭದಲ್ಲಿ ನೀರು ಒದಗಿಸಬಹುದು. ಜೊತೆಗೆ ಈ ಕೇಂದ್ರದಲ್ಲಿನ ಸ್ವಚ್ಛತೆ ಕಾಪಾಡುವ ಬಗ್ಗೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ತಾಲೂಕು ಆಡಳಿತ ಗಮನ ಹರಿಸಬೇಕು. ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಮಳೆ ಬಾರದೆ ನೀರಿನ ಸಮಸ್ಯೆ ಇನ್ನೂ ಉಲ್ಬಣಗೊಂಡಿದೆ.
ಹಣಗೆರೆ ಕಟ್ಟೆಯ ಕುಡಿಯುವ ನೀರಿನ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕುಡಿಯುವ ನೀರಿನ ವಿಚಾರದಲ್ಲಿ ವಿಶೇಷ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
•
ಕೆ. ಶ್ರೀನಿವಾಸ್, ಜಿಪಂ ಸದಸ್ಯ
ಕ್ಷೇತ್ರದಿಂದ ಸರ್ಕಾರಕ್ಕೆ ಕೋಟಿ ರೂ. ಆದಾಯವಿದೆ. ಆದರೂ ಕುಡಿಯುವ ನೀರಿನ ಸಮಸ್ಯೆ ವಿಚಾರದಲ್ಲಿ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಆಡಳಿತ ವ್ಯವಸ್ಥೆ ಏನು ಮಾಡುತ್ತಿದೆ.
•ಮಹಮ್ಮದ್ ಖಾಸಿಮ್, ವ್ಯಾಪಾರಿ, ಹಣಗೆರಿಕಟ್ಟೆ