Advertisement

ತೃತೀಯ ಬಾರಿ ಸಂಸತ್‌ ಪ್ರವೇಶ

03:19 AM May 24, 2019 | Team Udayavani |

ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ ರಾಜಕಾರಣದಲ್ಲಿಯೇ ಗಮನ ಸೆಳೆದಿದ್ದಾರೆ.

Advertisement

ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ ಸೈಂಟ್‌ ಫಿಲೋಮಿನಾ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದ ನಳಿನ್‌ ಆ ಕಾಲದಲ್ಲಿಯೇ ಆರ್‌ಎಸ್‌ಎಸ್‌ನತ್ತ ಆಕರ್ಷಿತರಾಗಿ 18ನೇ ವಯಸ್ಸಿನಲ್ಲಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು.

12 ವರ್ಷಗಳ ಕಾಲ ಆರ್‌ಎಸ್‌ಎಸ್‌ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಧರ್ಮ ಜಾಗರಣಾ ವೇದಿಕೆ, ಕಿನ್ನಿಗೋಳಿ ಕೃಷಿಕರ ಕ್ಷೇಮಾಭಿವೃದ್ಧಿ ಸಂಘ, ಪರಿಸರ ಸಮಿತಿ, ಮಾತೃಭೂಮಿ ಸೊಸೈಟಿ, ಸಿದ್ಧಿವಿನಾಯಕ ಸೇವಾ ಸಮಿತಿ ಸಹಿತ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಕಟೀಲು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಪಾವಂಜೆಯಲ್ಲಿ ನಡೆದ ಸೌತ್ರಮಣಿ ಗವಾಮಯನ ಯಾಗದ ಸಾರರ್ಥ್ಯ, 20ಕ್ಕೂ ಅಧಿಕ ದೇವಾಲಯಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಸೇವೆ ಸಲ್ಲಿಸಿದ್ದರು.

ಕೇರಳದಲ್ಲೂ ಜವಾಬ್ದಾರಿ
2004ರಲ್ಲಿ ಜಿಲ್ಲಾ ಬಿಜೆಪಿಯ ಸಂಘಟನ ಕಾರ್ಯ ದರ್ಶಿಯಾಗಿ ಆಯ್ಕೆಯಾದ್ದ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ
ಸಂಸತ್ತು ಪ್ರವೇಶಿಸಿದ್ದರು. 2014ರಲ್ಲಿ ಪುನರಾಯ್ಕೆ ಯಾದರು. ಬಳಿಕ ಕೇಂದ್ರ ಸರಕಾರದ ಕೃಷಿ ಸ್ಥಾಯೀ ಸಮಿತಿ, ತೆಂಗು ಅಭಿವೃದ್ಧಿ ಮಂಡಳಿ, ನೆಹರೂ ಯುವ ಕೇಂದ್ರ, ಯೋಜನಾ ಸಮಿತಿ, ರಬ್ಬರ್‌ ಮಂಡಳಿ, ಬಂದರು ಮಂಡಳಿ ಸಹಿತ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದ ನಳಿನ್‌ ಅವರು ಕೇರಳ ರಾಜ್ಯದ ಬಿಜೆಪಿಯ ಸಹಪ್ರಭಾರಿಯೂ ಹೌದು.

Advertisement

ಸಂಸದರಾಗಿ ನಳಿನ್‌ ಹ್ಯಾಟ್ರಿಕ್‌ ಗೆಲುವು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರಂತರ ವಾಗಿ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗು ವುದರೊಂದಿಗೆ ನಳಿನ್‌ ಕುಮಾರ್‌ ಕಟೀಲು ಹ್ಯಾಟ್ರಿಕ್‌ ಹೀರೋ ಎನಿಸಿಕೊಂಡಿದ್ದಾರೆ.

ನಳಿನ್‌ ಕುಮಾರ್‌ 2009ರ ಚುನಾವಣೆಯಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿ ಜನಾರ್ದನ ಪೂಜಾರಿ ವಿರುದ್ಧ ಮೊದಲ ಗೆಲುವು ದಾಖಲಿಸಿದ್ದರು. 2014ರ ಚುನಾವಣೆಯಲ್ಲಿಯೂ ಪೂಜಾರಿ ಅವರನ್ನು 1.40 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿ ಗಮನ ಸೆಳೆದಿದ್ದರು. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ, ಅದರಲ್ಲಿಯೂ ಹೊಸಮುಖ ಮತ್ತು ಯುವ ನಾಯಕ ಮಿಥುನ್‌ ರೈ ವಿರುದ್ಧ ಮತ್ತೆ ದಾಖಲೆಯ ಅಂತರದ ಮತಗಳಿಂದ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಜತೆಗೆ 2004ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ರೂಪುಗೊಂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಮೊದಲ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next