ಬೆಂಗಳೂರು : ಮಾಜಿ ಸಚಿವ ಜೆಡಿಎಸ್ ಶಾಸಕರಾಗಿದ್ದ ಗುಬ್ಬಿ ಶ್ರೀನಿವಾಸ್ ಅವರು ಗುರುವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅಪಾರ ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಬಿಜೆಪಿ ಮುಖಂಡರಾದ ಮೂಡಿಗೆರೆಯ ಹಾಲಪ್ಪ, ಸತ್ಯಾನಂದ ಅವರು ಕಾಂಗ್ರೆಸ್ ಸೇರ್ಪಡೆಯಾದರು. ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಸಚಿವರಾದ ಟಿ.ಬಿ ಜಯಚಂದ್ರ, ಮೋಟಮ್ಮ ಉಪಸ್ಥಿತರಿದ್ದರು.
ಆತ್ಮೀಯ ಗುಬ್ಬಿಯ ನನ್ನ ಸಹೋದರ ಸಹೋದರಿಯರೇ, 23 ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನನ್ನ ತಂದೆ ದಿ| ಶ್ರೀ ಎಸ್.ಸಿ. ರಾಮೇಗೌಡರ ಆಶಯದಂತೆ, ನನ್ನ ಕಾರ್ಯಕರ್ತರ ಸೂಚನೆ ಮೇರೆಗೆ, ಪವಿತ್ರ ‘ರಾಮ ನವಮಿ’ಯ ದಿನವಾದ ಇಂದು ನನಗೆ ರಾಜಕೀಯವಾಗಿ ಜನ್ಮ ನೀಡಿದ ನನ್ನ ಮಾತೃ ಪಕ್ಷ ಕಾಂಗ್ರೆಸ್ ಗೆ ಮರಳಿ ಸೇರ್ಪಡೆಯಾಗಿದ್ದೇನೆ” ಎಂದು ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ನಾಲ್ಕು ಬಾರಿ ಶಾಸಕ, ಮಾಜಿ ಸಚಿವ ಶ್ರೀನಿವಾಸ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ”ನಾನು ವಾಸು (ಶ್ರೀನಿವಾಸ್) ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದೆ, ಆದರೆ ಈಗ ಅವರ ಮನಸ್ಥಿತಿಯನ್ನು ನೋಡುತ್ತಿದ್ದೇನೆ. ಅವರು ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ… ಅವರ ಸೇರ್ಪಡೆಯಿಂದ ತುಮಕೂರಿನಲ್ಲಿ ಮಾತ್ರವಲ್ಲದೆ ಇಡೀ ಹಳೇ ಮೈಸೂರು ಪ್ರದೇಶದಲ್ಲಿ ಪಕ್ಷ ಬಲಗೊಳ್ಳುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಸಂಬಂಧ ಹೊಂದಿದ್ದ ಸುಮಾರು 37 ನಾಯಕರು ಇದುವರೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಇಬ್ಬರು ಎಂಎಲ್‌ಸಿಗಳಾದ ಪುಟ್ಟಣ್ಣ ಮತ್ತು ಬಾಬುರಾವ್ ಚಿಂಚನಸೂರ್ ಸೇರಿದಂತೆ ಇನ್ನೂ ಅನೇಕ ಜನರ ದೊಡ್ಡ ಪಟ್ಟಿ ಇದೆ. ಕಾಂಗ್ರೆಸ್‌ಗೆ ಸೇರಲು ಇಚ್ಛಿಸಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಿಳಿಸಲಾಗುವುದು” ಎಂದರು.