ಸಿಂಧನೂರು: ಮಳೆ ನೀರು ಮನೆಗೆ ನುಗ್ಗುತ್ತದೆ ಎಂಬ ಭೀತಿಯಿಂದ ಇಲ್ಲೊಬ್ಬರು ತಮ್ಮ ಮೂರಂತಸ್ತಿನ ಮನೆಯನ್ನೇ ಮೂರಡಿ ಎತ್ತರಿಸಿದ್ದು, ಮೊದಲ ಬಾರಿ ನಡೆದ ಇಂತಹ ಪ್ರಯೋಗ ಬಹುತೇಕರಿಗೆ ಆಕರ್ಷಣೆಯಾಗಿದೆ. ನಗರದ ಆದರ್ಶ ಕಾಲೋನಿಯಲ್ಲಿ ರಸ್ತೆಗಿಂತಲೂ ಕೆಳಮಟ್ಟದಲ್ಲಿದ್ದ ಮನೆಯನ್ನು 3.5 ಅಡಿ ಎತ್ತರಿಸಿಕೊಳ್ಳುವ ಮೂಲಕ ಮಳೆ ನೀರು ನುಗ್ಗದಂತೆ ಮನೆ ಮಾಲೀಕ ನೋಡಿಕೊಂಡಿದ್ದಾರೆ.
ಮನೆಯನ್ನು ಬುಡದಿಂದಲೇ ಎತ್ತರಿಸಿಕೊಳ್ಳುವ ಈ ಪ್ರಯತ್ನ ದೊಡ್ಡ ಸಾಹಸವೆಂಬಂತೆ ಬಿಂಬಿತವಾಗಿದೆ. ಅಕ್ಕಪಕ್ಕದವರೇ ಭೀತಿಗೊಳಗಾಗುವ ಈ ಪ್ರಯೋಗವನ್ನು ಯಶಸ್ವಿಯಾಗಿ ನಿಭಾಯಿಸಿ ತೋರಿಸಲಾಗಿದೆ. ಮನೆ ಎತ್ತರಕ್ಕೆ ಹೋಗುವುದು ಹೇಗೆ?: ಮನೆಯನ್ನು 3 ಅಡಿ ಏರಿಸಿರುವುದು ಅಚ್ಚರಿಯ ವಿಷಯವಾಗಿದ್ದು, ಆದರ್ಶ ಕಾಲೋನಿಯ ಶ್ರೀನಿವಾಸ್ ಅವರು ಅದನ್ನು ಕಾರ್ಯಗತಗೊಳಿಸಿದ್ದಾರೆ. 1995ರಲ್ಲಿ ನಿರ್ಮಾಣ ವಾಗಿದ್ದ ಮನೆ ಪಕ್ಕದ ರಸ್ತೆ ದಿನ ಕಳೆದಂತೆ ದುರಸ್ತಿ ಕಂಡು ಎತ್ತರವಾಗಿತ್ತು. ರಸ್ತೆ ಎತ್ತರವಾದ ಮೇಲೆ ಮಳೆ ಹಾಗೂ ಚರಂಡಿ ನೀರೆಲ್ಲ ರಸ್ತೆಗೆ ಬಂದು ನೇರವಾಗಿ ಮನೆಗೆ ನುಗ್ಗುತ್ತಿತ್ತು.
ತಗ್ಗಿನಲ್ಲಿದ್ದ ಮನೆಯನ್ನು ಎತ್ತರಕ್ಕೆ ತರುವುದೇ ಸವಾಲು ಎಂಬ ಸನ್ನಿವೇಶದಲ್ಲಿದ್ದಾಗ ವಿಜಯವಾಡದ ತಂತ್ರಜ್ಞರನ್ನು ಸಂಪರ್ಕಿಸಿ ಬೇಡಿಕೆ ಇಟ್ಟಿದ್ದರು. ಈಗಾಗಲೇ ಮನೆಗಳನ್ನು ಎತ್ತರಿಸುವ ಪ್ರಯೋಗದಲ್ಲಿ ಪಳಗಿದ್ದ ಜೆಜೆ ಮತ್ತು ಒಲಿಂಪಿಕ್ ಬುಲ್ಡಿಂಗ್, ಲಿಪ್ಟಿಂಗ್ ಸಂಸ್ಥೆಯವರು ನೆರವಿಗೆ ಧಾವಿಸಿ ಆ ಕೆಲಸ ನೆರವೇರಿಸಿದ್ದಾರೆ. ಮನೆ ಮಾಲೀಕ ವಿಕಲಚೇತನರಾದ ಹಿನ್ನೆಲೆಯಲ್ಲಿ ಅವರು ಸಾಮಗ್ರಿ ವೆಚ್ಚವನ್ನು ಮಾತ್ರ ಪಡೆದಿದ್ದಾರೆಂಬುದು ಗಮನಾರ್ಹ.
ಆಂಧ್ರ ಕ್ಯಾಂಪ್‌ಗ್ಳಲ್ಲಿ ಪ್ರಚಲಿತ: ಮನೆಗಳನ್ನು ಬುನಾದಿಯಿಂದ ಲಿಫ್ಟ್ ಮಾಡುವ ಪ್ರಯೋಗ ಈಗಾಗಲೇ ಆಂಧ್ರಪ್ರದೇಶದಲ್ಲಿ ಯಶಸ್ವಿಗೊಂಡಿದೆ. ಅಲ್ಲಿನ ಕಂಪನಿಗಳೇ ಕಲ್ಯಾಣ ಕರ್ನಾಟಕದತ್ತ ಚಿತ್ತ ಹರಿಸಿ ಹೊಸ ರೀತಿಯ ಕೆಲಸ ಆರಂಭಿಸಿವೆ. ಸಿಂಧನೂರಿನಲ್ಲಿ ಮೂರಂತಸ್ತಿನ ಮನೆ ಎತ್ತರಿಸುವ ಕೆಲಸ ಮುಗಿಸಿದ ಕೆಲಸಗಾರರು, ತಾಲೂಕಿನ ಭೀಮರಾಜ್ ಕ್ಯಾಂಪ್, ಹಂಚಿನಾಳ ಕ್ಯಾಂಪಿನಲ್ಲೂ ಮನೆಗಳನ್ನು ಗುತ್ತಿಗೆ ಪಡೆದು ಜಾಕ್ ಹಚ್ಚಿದ್ದಾರೆ. ಈ ಮನೆಯನ್ನು ಗಮನಿಸಿದ 20ಕ್ಕೂ ಹೆಚ್ಚು ಜನರು ಬೇಡಿಕೆ ಸಲ್ಲಿಸಿದ್ದಾರೆ.