ಹುಬ್ಬಳ್ಳಿ: ವಿಕಾಸದ ಹಾದಿಯಲ್ಲಿ ಸಾಗಲು ಜೀವನಕ್ರಮದಲ್ಲಿ ಮಾಡಿಕೊಳ್ಳುವ ಬದಲಾವಣೆಯೇ ಸಂಸ್ಕಾರ ಎಂದು ವೇಣುಗಿರಿ ಸರಸ್ವತಿ ಪೀಠದ ಶ್ರೀ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು. ಮಹಾವೀರ ಗಲ್ಲಿಯ ಶಾಂತಿನಾಥ ಭವನದಲ್ಲಿ ಸೋಮವಾರ ನಡೆದ ವಿಶ್ವಬ್ರಾಹ್ಮಣ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬೀಜ ಮೊಳೆತು ಸಸಿಯಾದರೆ ಅದು ಸಂಸ್ಕಾರ. ಬೀಜ ಕೊಳೆತರೆ ಅದು ವಿಕಾರ. ಪ್ರತಿಯೊಬ್ಬರೂ ಸಂಸ್ಕಾರವಂತರಾಗಬೇಕು. ಸಂಸ್ಕೃತಿಯ ಪ್ರತಿನಿಧಿಗಳಾಗಬೇಕು. ಧಾರ್ಮಿಕ ತಳಹದಿ ಮೇಲೆ ಸಮಾಜ ಕಟ್ಟುವುದು ಅವಶ್ಯ ಎಂದರು.
ಶೋಡಷ ಸಂಸ್ಕಾರ ಪದ್ಧತಿ ಉಳಿಸಬೇಕು. ಸಂಸ್ಕಾರದಿಂದ ಮಾತ್ರ ಸಮಾಜ ಬೆಳೆಯಲು ಸಾಧ್ಯ. ವ್ಯಕ್ತಿ ಪರಿಪೂರ್ಣನಾಗಲು ಸಂಸ್ಕಾರ ಬೇಕು. ಸಮಾಜದ ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಸಾಮೂಹಿಕ ಉಪನಯನ ಹಮ್ಮಿಕೊಳ್ಳಲಾಗುತ್ತಿದೆ. ಸಾಮಾಜಿಕ, ಧಾರ್ಮಿಕ ಅಭಿವೃದ್ಧಿಯ ಚಿಂತನೆ ನಡೆಯಬೇಕು ಎಂದು ತಿಳಿಸಿದರು.
ಬೆಂಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್. ಬಡಿಗೇರ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಆಗ ಮಾತ್ರ ನಮ್ಮ ಪರಂಪರೆ ಉಳಿಯಲು ಸಾಧ್ಯವಾಗುತ್ತದೆ. ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲ ಸಮಾಜ ಸಂಘಟಿಸಬೇಕು ಎಂದರು. ಭೀಮಸೇನ ಬಡಿಗೇರ ಮಾತನಾಡಿ, ಸಾಹಿತ್ಯದಿಂದ ಮಾತ್ರ ಸಮಾಜ ಬೆಳೆಸಲು ಸಾಧ್ಯ. ಧರ್ಮ ಸಾಹಿತ್ಯವನ್ನು ಮಕ್ಕಳಿಗೆ ಓದಲು ಕೊಡಬೇಕು. ಯೋಜನೆ ಹಾಗೂ ಯೋಚನೆ ಸರಿಯಾಗಿದ್ದಾಗ ಮಾತ್ರ ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತದೆ. ವಿದ್ಯಾವಂತರು ಸಮಾಜ ಸಂಘಟನೆಯಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.
ಶಂಕರಾಚಾರ್ಯ ಕಡ್ಲಾಸ್ಕರ ಹಾಗೂ ವಿಶ್ವಬ್ರಾಹ್ಮಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಅಶೋಕ ಜತ್ತಿ ಮಾತನಾಡಿದರು. ನಾರಾಯಣ ವಿಶ್ವಕರ್ಮ ಇದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ 12 ವಟುಗಳ ಉಪನಯನ ನಡೆಯಿತು.
ನಮ್ಮ ಸಮಾಜದ ಮುಖಂಡರಾದ ಕೆ.ಪಿ. ನಂಜುಂಡಿ ವಿಧಾನ ಪರಿಷತ್ ಸದಸ್ಯರಾಗಿರುವುದು ಸಮಾಜ ಬಾಂಧವರಿಗೆ ಖುಷಿ ತಂದಿದೆ. ಅವರು ಮುಂದೆ ಖಂಡಿತವಾಗಿಯೂ ಸಚಿವರಾಗಲಿದ್ದಾರೆ.
ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ