Advertisement

ಆಮೆಗತಿಯಲ್ಲಿ ಆಗುಂಬೆ ಘಾಟಿ ದುರಸ್ಥಿ ಕಾಮಗಾರಿ

01:37 PM Apr 27, 2019 | Naveen |

ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಘಾಟಿಯ ತಿರುವಿನ ದುರಸ್ಥಿ ಹಾಗೂ ತಡೆಗೋಡೆಗಳ ಕಾಮಗಾರಿ ಏ.1ರಿಂದ ಆರಂಭಗೊಂಡಿದೆ. ಆದರೆ, ವನ್ಯಜೀವಿ ಸಂರಕ್ಷಣಾ ಇಲಾಖೆ, ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ದುರಸ್ಥಿ ಕಾರ್ಯ ಆಮೆ ನಡಿಗೆಯಲ್ಲಿ ಸಾಗುತ್ತಿದ್ದು, ಮಲೆನಾಡಿಗರಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

ಪ್ರತಿ ವರ್ಷ ಮಳೆಗಾಲದಲ್ಲಿ ಆಗುಂಬೆ ಘಾಟಿಯ ತಿರುವುಗಳಲ್ಲಿ ತಡೆಗೋಡೆಗಳ ಕುಸಿತ ಹಾಗೂ ಭೂ ಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಇಲಾಖೆ ಏ.1ರಿಂದ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಕಾಮಗಾರಿಯನ್ನು ನಡೆಸುತ್ತಿದೆ. ಕಳೆದೊಂದು ತಿಂಗಳಿನಿಂದ ಆಗುಂಬೆ ಭಾಗದಲ್ಲಿ ಯಾವುದೇ ಬಸ್‌ ಸೇರಿದಂತೆ ವಾಹನ ಸಂಚಾರವಿಲ್ಲದೇ ಆಗುಂಬೆ ಪಟ್ಟಣ ಮೌನವಹಿಸಿದೆ. ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದರಿಂದಾಗಿ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಸಹ ಕುಂಠಿತಗೊಂಡಿದೆ.

ಆಗುಂಬೆ ಘಾಟಿಯ 14 ತಿರುವುಗಳಲ್ಲಿ ತಲಾ 7 ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಗೆ ಸೇರಿದ್ದು, ವನ್ಯಜೀವಿ ವಿಭಾಗದವರು ಕಾನೂನಿನ ತೊಡಕನ್ನು ಮುಂದಿಟ್ಟು ಕಾಮಗಾರಿ ಮಂದಗತಿಯಲ್ಲಿ ಸಾಗಲು ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ. ಕೆಲವು ತಿರುವುಗಳು ಅಪಾಯದ ಅಂಚಿನಲ್ಲಿದ್ದು , ರಸ್ತೆ ಅಗಲೀಕರಣಗೊಳಿಸಲು ಮರ ಹಾಗೂ ಮಣ್ಣನ್ನು ತೆಗೆಯಬೇಕಿದೆ. ಪ್ರಮುಖವಾಗಿ ಹೆಬ್ರಿ ವಿಭಾಗಕ್ಕೆ ಸೇರಿದ ಆನೆಕಲ್ಲು ತಿರುವಿನಲ್ಲಿ ರಸ್ತೆಗೆ ಚಾಚಿಕೊಂಡಿರುವ ಬಂಡೆಯನ್ನು ಕೊಂಚ ಮಟ್ಟಿಗೆ ತೆಗೆದು ಕಾರ್ಯ ಆರಂಭಿಸಲಾಗಿದೆ. ಈ ಜಾಗದಲ್ಲಿ ಕಾಂಕ್ರೀಟ್ ರಸ್ತೆ ಮಾಡಬೇಕೆಂಬ ನಿಟ್ಟಿನಲ್ಲಿ ಅಂದಾಜು ತಯಾರಿಸಿ ಅನುಮೋದನೆ ಪಡೆಯಲಾಗಿತ್ತು. ಈಗ ಗುತ್ತಿಗೆದಾರರು ಕಾಂಕ್ರೀಟ್ ರಸ್ತೆ ಮಾಡಲು ಕಾಮಗಾರಿ ಆರಂಭಿಸಿದ್ದಾರೆ. ಆದರೆ ವನ್ಯಜೀವಿ ವಿಭಾಗವು ಈ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯ ಬದಲು ಡಾಂಬರು ರಸ್ತೆ ಮಾಡಬೇಕೆಂದು ಒತ್ತಾಯಿಸಿದ್ದಾರೆನ್ನಲಾಗಿದೆ.

ಹಲವು ತಿರುವುಗಳಲ್ಲಿನ ತಡೆಗೋಡೆಗಳ ಕಾಮಗಾರಿ ಶೇ.20ರಷ್ಟು ಮಾತ್ರ ಮುಗಿದಿದ್ದು, ಉಳಿದ ಕಾಮಗಾರಿ ಮುಗಿಯಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗುತ್ತದೆ. ಆದರೆ, ಇಲಾಖೆಗಳ ಸಮನ್ವಯದ ಕೊರತೆ, ಕಾನೂನಿನ ತೊಡಕಿನಿಂದಾಗಿ ಗುತ್ತಿಗೆದಾರರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆನ್ನಲಾಗಿದೆ. ಜೊತೆಗೆ ಅರಣ್ಯ ಇಲಾಖೆಯವರು ಕೂಡ ಕೆಲವು ತಿರುವುಗಳಲ್ಲಿ ಅಪಾಯದ ಅಂಚಿನಲ್ಲಿರುವ ಸ್ಥಳಗಳಲ್ಲಿನ ಮರಗಳನ್ನು ತೆರವುಗೊಳಿಸಲು ಅವಕಾಶ ನೀಡುತ್ತಿಲ್ಲ. ಪ್ರಗತಿಯ ವಿಚಾರದಲ್ಲಿ ಅರಣ್ಯ ಇಲಾಖೆಯವರು ಸ್ಪಂದಿಸಬೇಕು. ಆಗುಂಬೆ ಘಾಟಿ ರಸ್ತೆಯು ಸಾರ್ವಜನಿಕರ ಸಂಚಾರದ ದೃಷ್ಟಿಯಲ್ಲಿ ಸದುಪಯೋಗವಾಗಬೇಕು ಎಂಬ ಸಾರ್ವಜನಿಕರ ಅಭಿಪ್ರಾಯ ಕೇಳಿ ಬರುತ್ತಿದೆ.

ಕಳೆದ 25 ದಿನಗಳಿಂದ ಈ ಭಾಗದಲ್ಲಿ ಸಂಚರಿಸುವ ಶಿವಮೊಗ್ಗ – ಮಂಗಳೂರು ಮಾರ್ಗದ ವಾಹನಗಳು ಹುಲಿಕಲ್ ಹಾಗೂ ಶೃಂಗೇರಿ – ಕೆರೆಕಟ್ಟೆ ಮಾರ್ಗದಲ್ಲಿ ಸಂಚರಿಸುತ್ತಿದ್ದು , ಪ್ರಯಾಣದ ಸಮಯ ಹೆಚ್ಚಾಗುತ್ತಿದೆ. ಜೊತೆಗೆ ಮಣಿಪಾಲ ಆಸ್ಪತ್ರೆಗೆ ತೆರಳುವ ಆ್ಯಂಬುಲೆನ್ಸ್‌ಗಳು ಕೂಡ ಇದೇ ಮಾರ್ಗವನ್ನು ಬಳಸಬೇಕಾಗಿದ್ದು, ರೋಗಿಗಳು ಹಾಗೂ ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ ಕೆಲವು ಪರಿಸರವಾದಿಗಳು ಹಾಗೂ ಪ್ರಗತಿಪರರು ಪ್ರಗತಿಯ ವಿಚಾರದಲ್ಲಿ ವಿರೋಧಿಸುತ್ತಿದ್ದಾರೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Advertisement

ಆಗುಂಬೆ ಘಾಟಿ ದುರಸ್ಥಿ ಕಾಮಗಾರಿ ಜೂನ್‌ ಮೊದಲ ವಾರದೊಳಗೆ ಪೂರ್ಣಗೊಳ್ಳದಿದ್ದಲ್ಲಿ ಬರುವ ಮಳೆಗಾಲದಲ್ಲಿ ಮತ್ತೆ ಘಾಟಿಯಲ್ಲಿ ಅನಾಹುತಗಳು ಸಂಭವಿಸಿದರೆ ಆಶ್ಚರ್ಯಪಡಬೇಕಿಲ್ಲ. ಇನ್ನಾದರೂ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಆಗುಂಬೆ ಘಾಟಿ ಕಾಮಗಾರಿಗೆ ಕಾಯಕಲ್ಪ ನೀಡುವಂತಾಗಲಿ.

ಈಗಾಗಲೇ ಕಾಮಗಾರಿ ನಡೆಯುತ್ತಿದ್ದು , ವನ್ಯಜೀವಿ
ಇಲಾಖೆಯವರು ಕೆಲವು ಜಾಗಗಳ ಕಾಮಗಾರಿಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂಬಂಧ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುತ್ತೇವೆ.
ರವಿ, ಎಇಇ ,
ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಶೃಂಗೇರಿ.

ಒಂದು ತಿಂಗಳಿನಿಂದ ನಡೆಯುತ್ತಿರುವ ಕಾಮಗಾರಿಯು ಮಂದಗತಿಯಲ್ಲಿ ಸಾಗಿದೆ. ಇದಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆಯವರ ವರ್ತನೆ ಖಂಡನೀಯ. ಜೊತೆಗೆ ಕಾರ್ಕಳದ ವನ್ಯಜೀವಿ ವಿಭಾಗವೂ ಕಾಮಗಾರಿಯ ಪ್ರಗತಿಗೆ ತಡೆಯೊಡ್ಡುತ್ತಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳದಿದ್ದಲ್ಲಿ ಮೂರೂ ಜಿಲ್ಲೆಗಳ ಶಾಸಕರಿಂದ ಕಾರ್ಕಳದ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಆರಗ ಜ್ಞಾನೇಂದ್ರ, ಶಾಸಕರು, ತೀರ್ಥಹಳ್ಳಿ.

ರಾಮಚಂದ್ರ ಕೊಪ್ಪಲು

Advertisement

Udayavani is now on Telegram. Click here to join our channel and stay updated with the latest news.

Next