●ಬಿ. ರಂಗಸ್ವಾಮಿ
ತಿಪಟೂರು: ಕಳೆದೆರಡು ದಿನಗಳಿಂದ ಬಿಟ್ಟೂ ಬಿಡದೆ ಸುರಿದ ಮಳೆಯಿಂದ ನಗರದ ಎಲ್ಲಾ ವಾರ್ಡ್‌ಗಳ ಬಹುತೇಕ ರಸ್ತೆಗಳು ಕೆಸರುಗದ್ದೆಯಂತಾಗಿದೆ. ಎಲ್ಲಾ ಬಡಾವಣೆಗಳ ರಸ್ತೆಗಳು ಯುಜಿಡಿ, ಜಿಯೋ ಕೇಬಲ್ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಮಾಡಿರುವ ಕಾಮಗಾರಿಗಳಿಂದ ಗುಂಡಿಗಳು ಬಿದ್ದಿದ್ದು, ಮಳೆ ನೀರು ತುಂಬಿ ಗುಂಡಿಗಳು ಕಾಣಿಸ ದಂತಾಗಿದೆ.
ಪ್ರತಿನಿತ್ಯ ಒಂದಲ್ಲೊಂದು ಅಪಘಾತ, ಅವಘಡಗಳು ಸಂಭವಿಸುತ್ತಿದೆ. ವಾಹನ ಸವಾರ ರಂತೂ ಸರ್ಕಸ್ ಮಾಡಿಕೊಂಡು ಎದ್ದು ಬಿದ್ದು ಓಡಾಡುತ್ತಿದ್ದು, ನಿವಾಸಿ ಗಳು ಮನೆ ಯಿಂದ ಹೊರಬರಲು ಹೆದರುವಂತಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿ ಗಳಂತೂ ಕೆಸರಿನ ನಡುವೆಯೇ ಹೋಗುವಂತಾಗಿದೆ. ಈ ಬಗ್ಗೆ ತಾಲೂಕು ಆಡಳಿತ ವಾಗಲಿ, ನಗರಸಭೆ ಯಾಗಲಿ ಸಮಸ್ಯೆ ಸರಿಪಡಿಸದೆ, ಜಾಣ ಕುರುಡು ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅವೈಜ್ಞಾನಿಕ ಯುಜಿಡಿ ಕಾಮಗಾರಿ: ನಗರದಲ್ಲಿ ಕಳೆದೆರಡು ವರ್ಷದಿಂದ ಯುಜಿಡಿ ಕಾಮಗಾರಿ ನಡೆ ಯುತ್ತಿದ್ದು, ಕೆಲವೆಡೆ ಮುಗಿದಿದ್ದರೂ ರಸ್ತೆಗಳು ಕೊಚ್ಚೆ ಗುಂಡಿಯಾಗಿವೆ. ರಸ್ತೆ ಮಧ್ಯದಲ್ಲಿ ಪೈಪ್ ಹೂಳಲು ಮತ್ತು ಮ್ಯಾನ್ ಹೋಲ್ ಮಾಡಲು ರಸ್ತೆ ಅಗೆದು ಹಾಳು ಮಾಡಲಾಗಿದೆ. ರಸ್ತೆ ಸಮತಟ್ಟು ಇಲ್ಲದಿರುವ ಕಾರಣ ಮಳೆ ನೀರು ನಿಂತು ರಸ್ತೆ ಯಾವುದು ಗುಂಡಿ ಯಾವುದು ಎಂದು ಹುಡುಕು ವಂತಾಗಿದೆ. ಅಮಾಯ ಕರು ಗುಂಡಿ ಯೊಳಗೆ ಬಿದ್ದು ಕೈಕಾಲು ಮುರಿದು ಕೊಂಡಿದ್ದೂ ಇದೆ. ನಗರದ ಹಾಲ್ಕುರಿಕೆ ರಸ್ತೆ, ವಿದ್ಯಾ ನಗರ, ಕಂಚಾ ಘಟ್ಟ, ಬಸವೇಶ್ವರ ನಗರ, ಸ್ಟೆಲ್ಲಾ ಮೇರೀಸ್ ರಸ್ತೆ, ಹೈಟೆಂಕ್ಷನ್‌ಲೈನ್ ರಸ್ತೆ, ಗೋವಿನಪುರ, ಹಾಸನ ಸರ್ಕಲ್ ರಸ್ತೆ, ಷಡಕ್ಷರಿ ಮಠದ ರಸ್ತೆ, ಹಳೇ ಪಾಳ್ಯ, ಗಾಂಧೀನಗರ, ಪೊಲೀಸ್ ಕ್ವಾರ್ಟರ್ಸ್ ರಸ್ತೆ, ಎಪಿಎಂಸಿ ರಸ್ತೆ, ಚಾಮುಂಡೇಶ್ವರಿ ಬಡಾವಣೆ ಸೇರಿ ನಗರದ ಎಲ್ಲಾ ಬಡವಾಣೆಗಳಲ್ಲಿಯೂ ಇದೇ ಗೋಳಾಗಿದೆ.
ರಸ್ತೆಗಳು ಸಮತಟ್ಟಾಗಿಲ್ಲದ ಕಾರಣ ಹಗಲು ವೇಳೆಯಲ್ಲೇ ಓಡಾಡಲು ಸಾಧ್ಯವಾಗುತ್ತಿಲ್ಲ. ಇನ್ನು ರಾತ್ರಿ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಗೊತ್ತಾಗದಂತಾಗಿದೆ. ಇನ್ನು ಅಗೆದಿರುವ ಮಣ್ಣು ಒಂದು ರೀತಿಯ ಜೇಡಿಮಣ್ಣಿನಂತಿದ್ದು, ಸೋನೆ ಮಳೆ ಬಂದರೂ ವಾಹನಗಳ ಚಕ್ರಕ್ಕೆ ಸುತ್ತಿ ಕೊಂಡು ಜಾರು ತ್ತಿರುವುದರಿಂದ ಸಾಕಷ್ಟು ಜನರು ಕೈಕಾಲು ಕಳೆದುಕೊಂಡಿದ್ದಾರೆ. ನಡೆದುಕೊಂಡು ಹೋಗಲೂ ಕಷ್ಟವಾಗಿದೆ.
ವಯಸ್ಸಾದವರು, ಮಕ್ಕಳು ಹಾಗೂ ಮಹಿಳೆಯರು ಮನೆಯಿಂದ ಹೊರಬರುವುದು ಕಷ್ಟ ವಾಗಿದ್ದು, ನಿವಾಸಿಗಳ ಗೋಳು ಕೇಳುವ ವರಿಲ್ಲ ದಂತಾಗಿದೆ. ಒಟ್ಟಾರೆ ಸರ್ಕಾರ ರಸ್ತೆ ದುರಸ್ತಿಗಾಗಿ ನೂರಾರು ಕೋಟಿ ರೂ. ಬಿಡುಗಡೆ ಮಾಡಿದ್ದರೂ, ನಾಗರಿಕರು ಕೋಟ್ಯಂತರ ರೂ. ತೆರಿಗೆ ಕಟ್ಟಿದ್ದರೂ ನಗರದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 4-5 ವರ್ಷ ಗಳಿಂದಲೂ ಯುಜಿಡಿ ಕಾಮಗಾರಿಯಿಂದಾಗಿರುವ ರಸ್ತೆ ನಗರಸಭೆ, ತಾಲೂಕು ಆಡಳಿತ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೋ ಎಂಬುದು ಕಾಯಬೇಕಿದೆ.