Advertisement

ಉದ್ದಿಮೆ ಪರವಾನಿಗೆ 5 ವರ್ಷಕ್ಕೇರಿಸಲು ಚಿಂತನೆ

12:41 AM Oct 10, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿಯನ್ನು ಐದು ವರ್ಷಕ್ಕೆ ವಿಸ್ತರಿಸುವ ಚಿಂತನೆ ಇದೆ ಎಂದು ಬಿಬಿಎಂಪಿ ಮೇಯರ್‌ ಎಂ. ಗೌತಮ್‌ ಕುಮಾರ್‌ ತಿಳಿಸಿದ್ದಾರೆ. ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಬುಧವಾರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿ, ನಗರದಲ್ಲಿರುವ ಪ್ರಮುಖ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಹುಡುಕುವ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ಕಡತಗಳ ವಿಲೇವಾರಿಯನ್ನು ಸರಳೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Advertisement

ಬಿಬಿಎಂಪಿ ಆಯುಕ್ತರಾದ ಬಿ.ಎಚ್‌. ಅನಿಲ್‌ ಕುಮಾರ್‌ ಮಾತನಾಡಿ, ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವಲಯವಾರು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ತೆರಿಗೆ ಸಂಗ್ರಹಕ್ಕೆ ನಿರ್ದಿಷ್ಟ ಗುರಿ ನೀಡಲಾಗಿದ್ದು, ಪ್ರತಿತಿಂಗಳು ಸಂಗ್ರಹಿಸಿರುವ ವರದಿ ನೀಡುವಂತೆ ಷರತ್ತು ವಿಧಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ವಸತಿ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಮಳಿಗೆಗಳಿಗೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಬೈಲಾದಲ್ಲಿ ತಿದ್ದುಪಡಿ ತರಿವ ಮೂಲಕ ಅನುಮತಿ ನೀಡಬೇಕಿದೆ ಎಂದು ಹೇಳಿದರು.

ಸಿಎಸ್‌ಆರ್‌ ಕಾರ್ಯಗಾರ: ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅನುದಾದಡಿ ಪಾಲಿಕೆ ವ್ಯಾಪ್ತಿಯ ಉದ್ಯಾನಗಳು, ಕೆರೆಗಳು ಹಾಗೂ ಆಸ್ಪತ್ರೆಗಳ ಅಭಿವೃದ್ಧಿ ಮಾಡಲು ಸಿಎಸ್‌ಆರ್‌ ಕಾರ್ಯಗಾರ ನಡೆಸಲು ವಿಶೇಷ ಆಯುಕ್ತರಿಗೆ ಮೇಯರ್‌ ಸೂಚನೆ ನೀಡಿದರು. ಅದೇ ರೀತಿ ನಗರದ ಅಭಿವೃದ್ಧಿಯ ಸದೃಷ್ಟಿಯಿಂದ ಕಾನ್ಫಿಡರೇಶನ್‌ ಆಫ್ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಅಸೋಸಿಯೇಷನ್ಸ್‌ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದ್ದಾರೆ.

ನಾಮಫ‌ಲಕಗಳಲ್ಲಿ ಕನ್ನಡ ಕಡ್ಡಾಯ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಹಾಗೂ ವಾಣಿಜ್ಯ ಕಟ್ಟಡಗಳ ನಾಮಫ‌ಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದಕ್ಕೆ ಬಿಬಿಎಂಪಿ ಮೇಯರ್‌ ಎಂ. ಗೌತಮ್‌ ಕುಮಾರ್‌ ಮುಂದಾಗಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ 1ರಿಂದ ಕನ್ನಡ ನಾಮಫ‌ಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಲು ನಿರ್ಧರಿಸಲಾಗಿದ್ದು,

ನೂತನ ಉದ್ಯಮ ಪ್ರಾರಂಭಿಸುವವರು ನಾಮಫ‌ಲಕಗಳಲ್ಲಿ ಕನ್ನಡ ಅಳವಡಿಸಿಕೊಂಡರೆ ಮಾತ್ರ ಪರವಾನಿಗೆ ನೀಡಲು ನಿರ್ಧರಿಸಲಾಗಿದೆ. ಬೋರ್ಡ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಕನ್ನಡದ ನಾಮಫ‌ಲಕವಿರಬೇಕು ಎಂದೂ ಸೂಚಿಸಲಾಗುವುದು ಎಂದರು. ಸ್ಪಷ್ಟವಾಗಿ ಕನ್ನಡದಲ್ಲಿ ನಾಮಫ‌ಲಕಗಳು ಇದ್ದರೆ ಮಾತ್ರ ಪಾಲಿಕೆ ಅಧಿಕಾರಿಗಳು ಪರವಾನಿಗೆ ನೀಡಬೇಕು. ನಾಮಫ‌ಲಕಕ್ಕೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ ಪಾಲಿಸದೇ ಇರುವವರ ಪರವಾನಗಿಯನ್ನು ರದ್ದು ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

Advertisement

ಬಿಬಿಎಂಪಿಯು 2017ರಲ್ಲೇ ನಾಮಫ‌ಲಕಗಳಲ್ಲಿ ಶೇ. 60ರಷ್ಟು ಕನ್ನಡವಿರಬೇಕು ಎಂದು ಆದೇಶಿಸಿ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದೇಶ ಪಾಲಿಸಲು ಯಾವುದೇ ರೀತಿಯ ಕಾನೂನುಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಕೆಲವು ಪಾಲಿಕೆಗಳಲ್ಲಿ ಸ್ಥಳೀಯ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಮಾದರಿ ಅನುಸರಿಸಲು ಮೇಯರ್‌ ಮುಂದಾಗಿದ್ದಾರೆ ಎನ್ನಲಾಗಿದೆ.

ಪಾಲಿಕೆಯಲ್ಲೂ ಚರ್ಚೆಯಾಗಿತ್ತು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಇರುವ ಬಗ್ಗೆ ಪಾಲಿಕೆಯ ಸಭೆಯಲ್ಲೂ ಚರ್ಚೆಯಾಗಿತ್ತು. ಕನ್ನಡಕ್ಕೆ ಆದ್ಯತೆ ನೀಡುವ ಬಗ್ಗೆ ಪಾಲಿಕೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸದಸ್ಯರಿಂದಲೇ ಒತ್ತಾಯ ಕೇಳಿಬಂದಿತ್ತು.

ಈಗಾಗಲೇ ಬಿಬಿಎಂಪಿ ಜಾಹೀರಾತು ಬೈಲಾದಲ್ಲಿ ಕನ್ನಡ ಕಡ್ಡಾಯ ಬಳಕೆ ಪ್ರಸ್ತಾವನೆ ಇದೆ. ಇದನ್ನು ಜಾರಿಗೆ ತರಲಾಗುತ್ತಿದೆ. ನ.1ರಿಂದ ನಾಮಫ‌ಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯವಾಗಿರುವುಂತೆ ಜಾರಿ ಮಾಡಲಾಗುವುದು.
-ಬಿ.ಎಚ್‌. ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next