ಹುಬ್ಬಳ್ಳಿ: ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಮಹಾರಾಷ್ಟ್ರ ಹಾಗೂ ನಮ್ಮ ರಾಜ್ಯದ ಸಂಬಂಧಿಸಿದ ಜಿಲ್ಲೆಗಳ ಡಿಸಿಗಳು ನಿರಂತರ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿಗಳ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡಲು ಚಿಂತನೆ ನಡೆದಿದೆ. ನೀರಿನ ಪ್ರಮಾಣಕ್ಕೆ ತಕ್ಕಂತೆ ಬಳಕೆಗೆ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಈಗಾಗಲೇ ಎಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಿ ನೆರೆಪೀಡಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಗ್ರಾಮೀಣ ಪ್ರದೇಶಗಳಲ್ಲಿ ಸಹ ನಿಗಾವಹಿಸಲು ಟಾಸ್ಕ್ ಫೋರ್ಸ್ ರಚಿಸಲು ಯೋಜಿಸಲಾಗಿದೆ ಎಂದರು.
ಇದನ್ನೂ ಓದಿ:ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಸೇರಿ ದೇಶದ ಹಲವೆಡೆ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ
ತಗ್ಗು ಪ್ರದೇಶಗಳಲ್ಲಿ ಜಲಾವೃತಗೊಳ್ಳುವ ಮನೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ತಾಂತ್ರಿಕ ದೋಷದಿಂದ ಎರಡೂವರೆ ಲಕ್ಷ ಮನೆ ಮಂಜೂರಾತಿ ವಿಳಂಬವಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಕಚ್ಚಾ ಮನೆಗಳನ್ನು ಪಕ್ಕಾ ಮಾಡಲು ಚಿಂತನೆ ನಡೆದಿದೆ ಎಂದರು.