Advertisement

ಸಿಬ್ಬಂದಿ ಕಡಿತಕ್ಕೆ ಚಿಂತನೆ; ಬಹು ನಿರೀಕ್ಷಿತ ವೇತನ ಆಯೋಗ ಕಾರ್ಯಾರಂಭ

06:30 AM Jul 23, 2017 | |

ಬೆಂಗಳೂರು: ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರ ರಚಿಸಿರುವ ಆರನೇ ವೇತನ ಆಯೋಗ ನೌಕರರ ವೇತನ ವಿಚಾರದಲ್ಲಿ ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡುವತ್ತ ಗಮನಹರಿಸಿದೆ. ಆ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಖ್ಯೆ ಕಡಿತಗೊಳಿಸುವ ಮತ್ತು ಇಲಾಖೆಗಳ ಕೆಲವು ಸೇವೆಗಳನ್ನು ಹೊರಗುತ್ತಿಗೆ ನೀಡಲು ಸಾಧ್ಯವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

Advertisement

ವೇತನ ಪರಿಷ್ಕರಣೆ ಕುರಿತಂತೆ ತನ್ನ ಕೆಲಸ ಆರಂಭಿಸಿರುವ ಆರನೇ ವೇತನ ಆಯೋಗ ಈ ಸಂಬಂಧ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿದ್ದು, ಈ ಪೈಕಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗಾಗಿ ಸಿದ್ಧಪಡಿಸಿರುವ ಪ್ರಶ್ನೆಗಳಲ್ಲಿ ಸರ್ಕಾರಿ ನೌಕರರ ಹುದ್ದೆಗಳನ್ನು ಕಡಿಮೆ ಮಾಡುವುದು ಮತ್ತು ಇಲಾಖೆಯ ಕೆಲಸಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಕೊಡುವ ಬಗ್ಗೆ ಮಾಹಿತಿ ಕೇಳಲಾಗಿದೆ.

ನಿಮ್ಮ ಇಲಾಖೆಯಲ್ಲಿರುವ ವಿವಿಧ ವರ್ಗದ ಹುದ್ದೆಗಳನ್ನು ವಿಲೀನಗೊಳಿಸುವ ಅವಶ್ಯಕತೆಯಿದೆ ಎಂದು ತಾವು ಭಾವಿಸುವಿರಾ? ಹಾಗಿದ್ದಲ್ಲಿ, ಹುದ್ದೆಗಳ ಮತ್ತು ಅವುಗಳ ಕಾರ್ಯಸ್ವರೂಪದ ವಿವರಗಳೊಂದಿಗೆ ನಿಮ್ಮ ಅಭಿಪ್ರಾಯ ನೀಡಬೇಕು. ಅಲ್ಲದೆ, ನಿಮ್ಮ ದೃಷ್ಟಿಯಲ್ಲಿ ಇಲಾಖೆಯ ಕಾರ್ಯಕ್ಷಮತೆ ಮತ್ತು ಯೋಜನೆಗಳ ಅನುಷ್ಠಾನಗಳಿಗೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಬೀರದಂತೆ ವಿವಿಧ ಹಂತದ ಹುದ್ದೆಗಳಲ್ಲಿನ ಹಾಲಿ ಇರುವ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಲು ಸಾಧ್ಯವಿದೆಯೇ ಎಂಬ ಪ್ರಶ್ನೆಯನ್ನು ಅಧಿಕಾರಿಗಳಿಗೆ ಕೇಳಲಾಗಿದೆ.

ಜತೆಗೆ ಸೇವಾ ಗುತ್ತಿಗೆ ವಿಚಾರವನ್ನೂ ಪ್ರಸ್ತಾಪಿಸಲಾಗಿದ್ದು, ನಿಮ್ಮ ಇಲಾಖೆಯ ಯಾವ ಚಟುವಟಿಕೆಗಳನ್ನು ಸೇವಾ ಗುತ್ತಿಗೆ ಮುಂತಾದ ವಿಧಾನಗಳಿಂದ ನಿರ್ವಹಿಸಬಹುದು? ಇದರಿಂದ ಸಾಧಿಸಬಹುದಾದ ಉಳಿತಾಯದ ಅಥವಾ ಇತರ ಅನುಕೂಲಗಳನ್ನು ವಿವರಿಸಬೇಕು ಎಂದು ಕೋರಲಾಗಿದೆ. ವೇತನ ಪರಿಷ್ಕಣೆಗೆ ಸಂಬಂಧಿಸಿದಂತೆ ಆಯೋಗವು ತನ್ನ ಶಿಫಾರಸುಗಳನ್ನು ಮಾಡುವಾಗ ರಾಜ್ಯದ ಸಂಪನ್ಮೂಲ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳ ಕುರಿತಾಗಿ ಸರ್ಕಾರಕ್ಕಿರುವ ಹೊಣೆಗಳು, ಶಾಸನಬದ್ಧ ಮತ್ತು ಕ್ರಮಬದ್ಧ ಕೆಲಸಗಳು, ಋಣಸೇವಾ ನಿರ್ವಹಣೆಗಳು, ಇತರೆ ಅಭಿವೃದ್ಧಿಯೇತರ ಕಾರ್ಯಗಳು, ವಿತ್ತೀಯ ಹೊಣೆಗಾರಿಕೆ ಅಧಿನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸರ್ಕಾರ ನಿಬಂಧನೆ ವಿಧಿಸಿದೆ. ಈ ರೀತಿಯ ನಿಬಂಧನೆ ಇರುವಾಗ ಹಾಲಿ ಇರುವ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಬೇಕಾದರೆ ಹುದ್ದೆಗಳ ಕಡಿತ ಅಥವಾ ಹೊರಗುತ್ತಿಗೆ ಪದ್ಧತಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಬಹುದು ಎಂಬ ಅನುಮಾನ ಕಾಡುತ್ತಿದೆ.

ವೇತನ ಆಯೋಗವು ವರದಿ ನೀಡುವಾಗ, ಸರ್ಕಾರಿ ನೌಕರರ ವೇತನ ಹೆಚ್ಚಳದ ಜತೆಗೆ ಆಡಳಿತ ಸುಧಾರಣೆ ಬಗ್ಗೆಯೂ ಶಿಫಾರಸುಗಳನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಗಮನಹರಿಸುತ್ತದೆ. ಆ ನಿಟ್ಟಿನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿರಬಹುದು. ಅಂತಿಮವಾಗಿ ಇಲಾಖಾ ಮುಖ್ಯಸ್ಥರು ನೀಡುವ ವರದಿ ಆಧರಿಸಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಹೀಗಾಗಿ ಹುದ್ದೆಗಳ ಕಡಿತ, ಹೊರಗುತ್ತಿಗೆ ವಿಚಾರದಲ್ಲಿ ಈಗ ಏನೂ ಹೇಳಲು ಸಾಧ್ಯವಿಲ್ಲ.
– ಬಿ.ಪಿ.ಮಂಜೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next