Advertisement

ವಲಯವಾರು ಕೃಷಿ ನೀತಿಗೆ ಜಾರಿಗೆ ಚಿಂತನೆ: ಎನ್‌.ಎಚ್‌.ಶಿವಶಂಕರರೆಡ್ಡಿ

06:00 AM Sep 23, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಭೌಗೋಳಿಕ ವೈವಿಧ್ಯತೆ ಹಾಗೂ ಆಗಾಗ ಉಂಟಾಗುತ್ತಿರುವ ಹವಾಮಾನ ವೈಪರಿತ್ಯವನ್ನು ಆಧರಿಸಿ “ವಲಯವಾರು ಕೃಷಿ ನೀತಿ’ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರ ರೆಡ್ಡಿ ಹೇಳಿದ್ದಾರೆ.

Advertisement

ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಬ್ಯಾಂಕ್‌ ನೆರವಿನ ಸುಜಲ-3 ಯೋಜನೆಯಡಿ “ಭೂ ಸಂಪನ್ಮೂಲ ಮಾಹಿತಿ (ಎಲ್‌ಆರ್‌ಐ) ಪಾಲುದಾರರ’ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈಗಗಾಲೇ ರಾಜ್ಯ ಮಟ್ಟದಲ್ಲಿ ಕೃಷಿ ನೀತಿ ಜಾರಿಯಲ್ಲಿದೆ. ಆದರೆ, ಈಗ ಅದರ ಮುಂದುವರಿದ ಭಾಗವಾಗಿ ರಾಜ್ಯದ 10 ಕೃಷಿ ವಲಯಗಳ ಪೈಕಿ ಆಯಾ ವಲಯಗಳ ಹವಾಮಾನ, ಸರಾಸರಿ ಮಳೆ ಪ್ರಮಾಣ, ಮಳೆ ಅವಧಿ, ಹವಾಗುಣ, ಭೌಗೋಳಿಕ ವೈವಿಧ್ಯತೆ, ಮಣ್ಣಿನ ಫ‌ಲವತ್ತತೆ, ಸಾಂಪ್ರದಾಯಿಕ ಬೆಳೆಗಳು, ಇಳುವರಿ ಇವೆಲ್ಲವುಗಳನ್ನು ಆಧರಿಸಿ ವಲಯವಾರು ಕೃಷಿ ನೀತಿ ಜಾರಿಗೆ ಚಿಂತನೆ ನಡೆದಿದೆ. ಸಮಗ್ರ ಕೃಷಿಯ ಬೆಳವಣಿಗೆ ಹಾಗೂ ರೈತನ ಬದುಕು ಸ್ವಾವಲಂಬಿಯನ್ನಾಗಿ ಮಾಡಬೇಕು ಅನ್ನುವುದು ಇದರ ಉದ್ದೇಶ ಎಂದು  ತಿಳಿಸಿದರು.

“ಸುಜಲ’ ವಿಸ್ತರಣೆಗೆ ಮನವಿ: ಸದ್ಯ ರಾಜ್ಯದ ಬೀದರ್‌, ಕಲಬುರಗಿ, ಯಾದಗಿರಿ, ಕೊಪ್ಪಳ, ಗದಗ, ದಾವಣಗೆರೆ, ಚಾಮರಾಜನಗರ, ವಿಜಯಪುರ, ತುಮಕೂರು, ಚಿಕ್ಕಮಗಳೂರು ಹಾಗೂ ರಾಯಚೂರು ಸೇರಿ 11 ಜಿಲ್ಲೆಗಳಲ್ಲಿ ವಿಶ್ವ ಬ್ಯಾಂಕಿನ ಆರ್ಥಿಕ ನೆರವಿನಿಂದ ಸುಜಲ-3 ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ರಾಜ್ಯದ ಇನ್ನೂ ಕೆಲವು ಜಿಲ್ಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವಂತೆ ಈ ವೇಳೆ ವಿಶ್ವ ಬ್ಯಾಂಕ್‌ ಪ್ರತಿನಿಧಿಗಳಿಗೆ ಮನವಿ ಮಾಡಿದ ಕೃಷಿ ಸಚಿವರು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮುಂದಿನ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

ಭೂ ಸಂಪನ್ಮೂಲ ಮಾಹಿತಿ ಯೋಜನೆ ಕುರಿತು ಪ್ರಾತ್ಯಾಕ್ಷಿಕೆ ನೀಡಿದ ಯೋಜನಾ ನಿರ್ದೇಶಕ ಪ್ರಭಾಷ್‌ಚಂದ್ರ ರೇ, ರಾಜ್ಯದ 11 ಜಿಲ್ಲೆಗಳಲ್ಲಿ 2013-14ನೇ ಸಾಲಿನಿಂದ ಸುಜಲ ಯೋಜನೆಯನ್ನು ಆಯ್ದ ಜಿಲ್ಲೆಗಳ 2,531 ಕಿರು ಜಲಾಶಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಜಲಾನಯನ ಪ್ರದೇಶಗಳಲ್ಲಿನ ಭೂ ಸಂಪನ್ಮೂಲಗಳ ಅಧ್ಯಯನ ಕೈಗೊಂಡು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯನ್ನು ವಿವಿಧ ಅಭಿವೃದ್ಧಿ ಇಲಾಖೆಗಳಿಗೆ, ಸಂಸ್ಥೆಗಳಿಗೆ ಹಾಗೂ ರೈತರಿಗೆ ದೊರೆಯುವಂತೆ ಡಿಜಿಟಲ್‌ ಗ್ರಂಥಾಲಯ, ನಿರ್ಣಯ ಬೆಂಬಲ ವ್ಯವಸ್ಥೆ (ಡಿಎಸ್‌ಎಸ್‌), ಭೂ ಸಂಪನ್ಮೂಲ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಗೆ ಈವರೆಗೆ 250 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರ್‌ರಾವ್‌  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next