ಬಾಳಪ್ಪನವರು ಬಾಳಿ ಬದುಕಿದ ಮನೆಯ ಮುಂದೆ ಹಾದುಹೋದಾಗ, ಆ ಮನೆ ಪಾಳುಬಿದ್ದಿರುವುದನ್ನು ನೋಡಿದಾಗ ಅಮ್ಮೆಂಬಳ ಬಾಳಪ್ಪನವರ ಮೇಲೆ ಅಭಿಮಾನ ಉಕ್ಕೇರುತ್ತದೆ, ಗೌರವ ಭಾವ ಮೂಡುತ್ತದೆ. ಜತೆಗೆ ಇವು ಯಾವುವೂ ನಮ್ಮ ಆಡಳಿತಕ್ಕೆ ಅರ್ಥವಾಗಿಲ್ಲವಲ್ಲ ಎಂಬ ಬೇಸರವೂ ಕೂಡ!
Advertisement
ಸುಮಾರು 40ರ ದಶಕವಿರಬಹುದು. ಮಂಗಳೂರಿನ ಮೈದಾನವೊಂದರ ಕಲ್ಲು ಬೆಂಚಿನ ಮೇಲೆ ಒಬ್ಬ ಬಾಲಕ ಮಲಗಿದ್ದ. ಮನೆಯವರು ಕ್ರೈಸ್ತ ಪಾದ್ರಿ ಆಗು ಎಂದು ಬೆಂಗಳೂರಿಗೆ ಕಳುಹಿಸಿದ್ದರೆ ಆ ಬಾಲಕ ಮಾತ್ರ ಅಲ್ಲಿನ ತಾರತಮ್ಯಕ್ಕೆ ಬೇಸತ್ತು ಅರ್ಧದಲ್ಲೇ ಅದನ್ನು ಬಿಟ್ಟು ಮಂಗಳೂರಿಗೆ ಮರಳಿದ್ದ! ತನ್ನ ವರ್ತನೆಯ ಬಗ್ಗೆ ಮನೆಮಂದಿಯ ಮೂದಲಿಕೆಯೂ ಸೇರಿದ್ದರಿಂದ ಬಾಲಕನಿಗೆ ಎಲ್ಲವನ್ನೂ ಕಳೆದುಕೊಂಡ ಅನಾಥ ಭಾವ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಒಬ್ಬ ಯುವಕ ಬಾಲಕನ ಬಳಿಗೆ ತೆರಳಿ ಅವನ ಬೆನ್ನು ತಟ್ಟಿ ಪ್ರೀತಿಯಿಂದ ಮಾತನಾಡಿಸಿದ. ಆ ಬಾಲಕನನ್ನು ಸಂತೆಸಿದ್ದೂ ಅಲ್ಲದೆ ಮುಂದೆ ತನ್ನ ಜತೆಗೆ ಸೇರಿಸಿಕೊಂಡು ತನ್ನ ರಾಜಕೀಯ ಚಟುವಟಿಕೆ, ಹೋರಾಟಗಳಲ್ಲಿ ನಿರಂತರ ಭಾಗಿಯಾಗುವಂತೆ ಮಾಡಿದ. ಆ ಯುವಕನ ಮಾರ್ಗದರ್ಶನದಿಂದ ಪ್ರಭಾವಿತಗೊಂಡ ಬಾಲಕ ಮುಂದೆ ಮುಂಬೈ ನಗರವನ್ನು ಸೇರಿ ಅಲ್ಲೂ ಬಡವರ ಧ್ವನಿಯಾಗಿ, ಕಾರ್ಮಿಕ ವರ್ಗದ ಶಕ್ತಿಯಾಗಿ ಹೋರಾಟದ ಬದುಕನ್ನೇ ಅಪ್ಪಿ ಮುಂದುವರೆದ. ಬಳಿಕದ ಹಾದಿಯಲ್ಲಿ ಮತ್ತಷ್ಟು ಬೆಳೆದು, ಸಮತಾವಾದವನ್ನು ಹಿಡಿದು ಈ ದೇಶದ ಓರ್ವ ಪ್ರಭಾವಿ ರಾಜಕಾರಣಿಯಾಗಿ ಮೂಡಿಬಂದ. ಮಾತ್ರವಲ್ಲದೆ ಮುಂದೊಂದು ದಿನ ಈ ದೇಶದ ಅತ್ಯುತ್ತಮ ರಕ್ಷಣಾ ಸಚಿವನಾಗಿಯೂ ಸೇವೆ ಸಲ್ಲಿಸಿದರು!
Related Articles
Advertisement
ಬಾಳಪ್ಪನವರು ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು. ತನ್ನ ಜೀವನದಲ್ಲಿ ಗಾಂಧೀ ತತ್ವಗಳನ್ನು ಅಳವಡಿಸಿಕೊಂಡದ್ದು ಮಾತ್ರವಲ್ಲದೆ ಇತರರಿಗೂ ಅದನ್ನೇ ಬೋಧಿಸುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಅವರ ಸ್ವಭಾವ ಅದೆಂಥವರಿಗೂ ಅವರ ಮೇಲೆ ಅಭಿಮಾನ ಮೂಡಿಸುವಂತೆ ಇತ್ತು. ಸರಳ ಸಜ್ಜನಿಕೆಯ ಬಾಳಪ್ಪನವರು ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ತನ್ನ ಮನೆಯ ಪಕ್ಕದಲ್ಲೇ ಇದ್ದ ನವಜೀವನ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯ, ಗೌರವಾಧ್ಯಕ್ಷನಾಗಿ ಕೆಲಸ ಮಾಡಿದ್ದರು. ಇಷ್ಟು ಮಾತ್ರವಲ್ಲದೆ ಅದೇ ವ್ಯಾಯಾಮ ಶಾಲೆಗೆ ಸ್ಥಳ ದಾನವನ್ನೂ ನೀಡಿ ಊರಿನ ಜನತೆಗೆ ಪ್ರಾತಃಸ್ಮರಣೀಯರೆನಿಸಿಕೊಂಡಿದ್ದಾರೆ. ಬಡವರ ಬಗೆಗೂ ಅವರಿಗಿದ್ದ ಕಾಳಜಿ ಅಷ್ಟಿಷ್ಟಲ್ಲ. ಬಂಟ್ವಾಳ ಭೂನ್ಯಾಯ ಮಂಡಳಿಯಲ್ಲಿ ಮೂರು ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಅವರಿಂದ ಪ್ರಯೋಜನ ಪಡೆದ ಬಡವರು ಅದೆಷ್ಟೋ ಮಂದಿ. ಬಡ ರೈತರ ಅರ್ಜಿಗಳನ್ನು ಬರೆಯಲು ಕಚೇರಿ ಸಿಬ್ಬಂದಿ ಅಧಿಕ ಹಣ ಪಡೆಯುತ್ತಾರೆ ಎಂದರಿವಾದಾಗ ಸ್ವತಃ ತಾನೇ ಉಚಿತವಾಗಿ ಅರ್ಜಿ ಬರೆದುಕೊಟ್ಟು ಬಡವರ ಸೇವೆಗೆ ನಿಂತವರು ಅವರು! ದೇಶ ಸೇವೆಯೇ ತನ್ನ ಪರಮ ಗುರಿಯೆಂದು ಅರಿತಿದ್ದ ಬಾಳಪ್ಪ ಆಜನ್ಮ ಬ್ರಹ್ಮಚಾರಿಯಾಗಿದ್ದರು.
ಮನಸ್ಸು ಮಾಡಿದ್ದರೆ ಆ ಕಾಲಕ್ಕೇ ದೊಡ್ಡ ರಾಜಕಾರಣಿಯಾಗಿ ಮೆರೆಯಬಹುದಿತ್ತು. 1989ರಲ್ಲಿ ಜನತಾದಳ (ಎಸ್) ಬಾಳಪ್ಪನವರಿಗೆ ವಿಧಾನಸಭೆಯ ಸೀಟನ್ನು ನೀಡಿತ್ತು. ಆದರೆ ಅದಕ್ಕೆ ಅವರು ಸಮ್ಮತಿಸಲಿಲ್ಲ. ಸಮತಾ ಪಕ್ಷಕ್ಕೆ ಬರುವುದಾದರೆ ಉನ್ನತ ಹುದ್ದೆಯನ್ನು ನೀಡುವುದಾಗಿ ಜಾರ್ಜ್ ಹೇಳಿದಾಗಲೂ ಬಾಳಪ್ಪರದ್ದು ನಿರಾಕರಣೆಯೇ ಉತ್ತರವಾಗಿತ್ತು. ಸ್ವಾರ್ಥರಹಿತ ಬಡವರ ಸೇವೆಯೇ ಅವರ ಮುಂದಿದ್ದ ಗುರಿಯಾದ್ದರಿಂದ ಕೊನೆ ತನಕವೂ ಜನರೊಡನೇ ಬಾಳಿ ಬದುಕಿದರು. ಸಮಾಜದ ಆಗು ಹೋಗುಗಳನ್ನು ಜನತೆಗೆ ಮತ್ತಷ್ಟು ಪ್ರಖರವಾಗಿ ಮುಟ್ಟಿಸಬೇಕೆಂಬ ನಿಟ್ಟಿನಲ್ಲಿ 1970ರಲ್ಲಿ ತುಳು ಭಾಷೆಯಲ್ಲಿ ಮೊತ್ತ ಮೊದಲ “ಸಿರಿ’ ಎಂಬ ಪತ್ರಿಕೆಯನ್ನೂ ಪ್ರಕಟಿಸಿದ್ದರು. “ಮಿತ್ರ’ ಎನ್ನುವ ಕನ್ನಡ ಪತ್ರಿಕೆಯನ್ನೂ ಹೊರತಂದು ಪತ್ರಿಕಾ ರಂಗದಲ್ಲೊಂದು ಕ್ರಾಂತಿ ಮಾಡಿದ್ದರು. ಇವಿಷ್ಟೇ ಅಲ್ಲದೆ 1980ರಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕೊಂದನ್ನು ರಚಿಸಿ ಹಲವಾರು ಮಂದಿಗೆ ಉದ್ಯೋಗವನ್ನು ದೊರಕಿಸಿಕೊಟ್ಟ ಪುಣ್ಯಾತ್ಮರಿವರು.ನಿಸ್ವಾರ್ಥ ಸೇವೆಯ ಡಾ| ಬಾಳಪ್ಪನವರ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯದ ವಿಚಾರವೇ ಸರಿ. ಅಜಾತಶತ್ರು ಎನಿಸಿದ್ದ ಬಾಳಪ್ಪನವರು 2014ರ ಮೇ 15ರಂದು ಇಹದ ಬದುಕನ್ನು ಮುಗಿಸಿದರು. ಓರ್ವ ಅಪ್ರತಿಮ ನಾಯಕ, ತನ್ನ ರಾಜಕೀಯ ಗುರು ಎಂದು ಜಾರ್ಜ್ ಫರ್ನಾಂಡಿಸ್ ಅವರಿಂದಲೇ ಕರೆಸಿಕೊಂಡಿದ್ದ ಬಾಳಪ್ಪನವರು ಕರ್ನಾಟಕದವರು, ನಮ್ಮ ದಕ್ಷಿಣಕನ್ನಡದವರು ಎಂಬುದೇ ನಮಗೆ ಹೆಮ್ಮೆ. ಆದರೆ ನಮ್ಮ ಆಡಳಿತ, ನಮ್ಮ ಸರಕಾರ ಬಾಳಪ್ಪರ ಸೇವೆಯನ್ನು ಅದೆಷ್ಟು ಗೌರವಿಸಿದೆ, ನೆನಪಿಸಿಕೊಂಡಿದೆ ಎಂದರೆ ಉತ್ತರಿಸುವುದು ತುಸು ಕಷ್ಟವೇ! ಯಾಕೆಂದರೆ ಬಾಳಪ್ಪರು ಬಾಳಿ ಬದುಕಿದ ಊರಿನಲ್ಲಿ ಇಂದು ಅವರನ್ನು ನೆನಪಿಸುವ ಯಾವ ಸ್ಮಾರಕಗಳೂ ಇಲ್ಲ! ಬಾಳಪ್ಪನವರ ಸೇವೆಯನ್ನು ಪರಿಗಣಿಸಿ ಅವರ ಪ್ರತಿಮೆಯನ್ನೋ ಅವರ ಸ್ಮಾರಕವನ್ನೋ ನಿರ್ಮಿಸಿ ಗೌರವಿಸಬೇಕಾಗಿದ್ದ ಆಡಳಿತ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬಾಳಪ್ಪನವರು ಬಾಳಿ ಬದುಕಿದ ಮನೆಯ ಮುಂದೆ ಹಾದುಹೋದಾಗ, ಆ ಮನೆ ಪಾಳುಬಿದ್ದಿರುವುದನ್ನು ನೋಡಿದಾಗ ಅಮ್ಮೆಂಬಳ ಬಾಳಪ್ಪನವರ ಮೇಲೆ ಅಭಿಮಾನ ಉಕ್ಕೇರುತ್ತದೆ, ಗೌರವ ಭಾವ ಮೂಡುತ್ತದೆ. ಜತೆಗೆ ಇವು ಯಾವುವೂ ನಮ್ಮ ಆಡಳಿತಕ್ಕೆ ಅರ್ಥವಾಗಿಲ್ಲವಲ್ಲ ಎಂಬ ಬೇಸರವೂ ಕೂಡ! – ಪ್ರಸಾದ್ ಕುಮಾರ್ ಮಾರ್ನಬೈಲ್