ಯಲಬುರ್ಗ: ರಾಜ್ಯ ಸರಕಾರ ತಾಲೂಕು ಪಂಚಾಯಿತಿಗಳನ್ನು ರದ್ದುಪಡಿಸುವ ಚಿಂತನೆ ಕೈ ಬಿಟ್ಟು ಬಲವರ್ಧನೆಗೆ ಮುಂದಾಗಬೇಕು. ಹಳ್ಳಿ ಗಳಲ್ಲಿ ಅಗಸಿ ಬಾಗಿಲು ಜತೆಗೆ ಊರಿಗೊಂದು ಹನುಮಂತನ ದೇವಸ್ಥಾನ ಇರುತ್ತವೆಯೋ ಅದೇ ರೀತಿ ತಾಲೂಕಿಗೊಂದು ತಾಪಂ ಆಡಳಿತ ಮಂಡಳಿ ಇದ್ದರೇ ಚೆಂದ. ತಾಪಂ ರದ್ದು ಮಾಡುವುದು ಒಳ್ಳೆಯದಲ್ಲ. ಇದು ಯಲಬುರ್ಗಾ ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಅಭಿಪ್ರಾಯ.
ಪಕ್ಷದ ಕಾರ್ಯಕರ್ತರಿಗೆ ವೇದಿಕೆ ಕಲ್ಪಿಸಿಕೊಡಲು ತಾಪಂಗಳು ಇವೆ ಎಂಬ ಮಾತು ಸತ್ಯ. ಅದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿ ಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಮೂರು ಹಂತದ ಪಂಚಾಯತ್ ರಾಜ್ಯ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಸ್ತುತ ತಾಪಂಗಳಿಗೆ ತನ್ನದೇ ಆದ ಅಧಿಕಾರವಿದೆ. ಆದರೆ ಅನುದಾನ ಕೊರತೆ ಕಾಡುತ್ತದೆ.
ಸರಕಾರ ತಾಪಂ ರದ್ದುಪಡಿಸುವ ಬದಲು ಹೆಚ್ಚು ಅನುದಾನ ನೀಡಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ತಾಪಂಅಧ್ಯಕ್ಷರಿಗೆ, ತಾಪಂ ತ್ತೈಮಾಸಿಕ ಕೆಡಿಪಿ ಸಭೆ, ಸಾಮಾನ್ಯ ಸಭೆಗಳನ್ನು ನಡೆಸುವ ಅಧಿ ಕಾರವಿದೆ. ಸಭೆಯಲ್ಲಿ ತಾಪಂ ಇಒ ಸೇರಿದಂತೆ ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಪಾಲ್ಗೊಂಡಿರುತ್ತಾರೆ. ಅಲ್ಲಿ ಗ್ರಾಮಗಳ ಸಮಸ್ಯೆ ಹಾಗೂ ಜನರಿಗೆ ಅವಶ್ಯವಾಗಿ ಬೇಕಿರುವ ಮೂಲಸೌಕರ್ಯಗಳ ಕುರಿತು ಚರ್ಚಿಸಲು ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ. ಗ್ರಾಮೀಣ ಭಾಗಗಳ ಜನತೆ ನೇರವಾಗಿ ಜಿಪಂ ಸದಸ್ಯರನ್ನು ಭೇಟಿಯಾಗಲು ಸಾಧ್ಯವಾಗಲ್ಲ ಎಂಬುದು ಲಕ್ಷ್ಮೀ ಗೌಡ್ರ ಅಭಿಪ್ರಾಯ.
ತಾಪಂ ಅಧ್ಯಕ್ಷರಾಗಿ ನಾನು ಮಾಡಿದ ಅಭಿವೃದ್ದಿ ಕಾರ್ಯಗಳು ನನಗೆ ತೃಪ್ತಿ ತಂದಿವೆ. ಪ್ರಮುಖವಾಗಿ ನೀರಿನ ತೊಟ್ಟಿ, ಪೈಪ್‌ಲೈನ್, ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣ ಬಳೆಯುವುದು, ಅಂಗನವಾಡಿ ದುರಸ್ತಿ, ಸೋಲಾರ್ ಅಳವಡಿಕೆ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲಭ್ಯ ಇರುವ ಅನುದಾನದಲ್ಲಿ ಮಾಡಿದ್ದೇನೆ. ತಾಪಂಗಳಿಗೆ 14 ಹಾಗೂ 15ನೇ ಹಣಕಾಸು ಯೋಜನೆಯಡಿ ಪ್ರತಿವರ್ಷವೂ ಅನುದಾನ ಬರುತ್ತದೆ.
ಕಳೆದ ವರ್ಷದಿಂದ 1.50 ಕೋಟಿ ಅನುದಾನ ಬರುತ್ತಿದ್ದು, ಅದೇಅನುದಾನದಲ್ಲಿ ತಾಲೂಕಿನ ಎಲ್ಲ ಕ್ಷೇತ್ರಗ ಅಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುತ್ತದೆ. ವಿವಿಧ ಗ್ರಾಮಗಳಲ್ಲಿ ನಡೆಯುವ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಜನರ ಸಮಸ್ಯೆಗಳನ್ನರಿತು ಅವುಗಳಿಗೆ ಪರಿಹಾರ ಕಲ್ಪಿಸಿಕೊಡಲು ತಾಪಂ ಉತ್ತಮ ವ್ಯವಸ್ಥೆಯಾಗಿದೆ ಎನ್ನುವುದು ಅವರ ಅನಿಸಿಕೆ.
ಮೂರು ಹಂತದ ವ್ಯವಸ್ಥೆ ಉತ್ತಮ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಗ್ರಾಪಂ, ತಾಪಂ, ಜಿಪಂ ಮೂರು ಹಂತದ ವ್ಯವಸ್ಥೆ ಇದ್ದರೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ. ಮೂರು ಹಂತಗಳ ಮೂಲಕ ಅನುದಾನ ಗ್ರಾಮಗಳಿಗೆ ತಲುಪಲಿದೆ. ಒಟ್ಟಾರೆಯಾಗಿ ತಾಪಂ ರದ್ದತಿ ವಿಚಾರ ಕೈ ಬಿಟ್ಟು ಇನ್ನಷ್ಟು ಬಲರ್ವಧನೆಗೊಳಿಸುವ ನಿಟ್ಟಿನಲ್ಲಿ ವಿನೂತನ ಚಿಂತನೆ ನಡೆಸಬೇಕು ಎಂಬುದು ಲಕ್ಷ್ಮೀ ಗೌಡ್ರ ಅಭಿಪ್ರಾಯ
ಇದನ್ನೂ ಓದಿ:ರೈತರ ಟ್ರಾಕ್ಟರ್ ರ‍್ಯಾಲಿಗೆ ಮಾರ್ಗಗಳನ್ನು ಸೂಚಿಸಿದ ದೆಹಲಿ ಪೊಲೀಸರು
ತಾಪಂ ರದ್ದುಗೊಳಿಸುವುದು ಉತ್ತಮ ನಿರ್ಧಾರ. ಬರೀ ಅಧಿ ಕಾರದಿಂದ ಏನೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹೆಚ್ಚು ಅನುದಾನ ಇದ್ದರೆ ಸೂಕ್ತ. ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರದ ಅನುದಾನ ಜತೆ ವೈಯಕ್ತಿಕವಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬಂಡಿ ತಾಪಂ ಕ್ಷೇತ್ರ ದೊಡ್ಡದಿದೆ. 9 ಹಳ್ಳಿಗಳು ಬರುತ್ತವೆ. ಇದ್ದ ಅನುದಾನದಲ್ಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ವೈಯಕ್ತಿಕ ಹಣದಿಂದ ಅಭಿವೃದ್ಧಿಕಾರ್ಯ ಮಾಡಿದ್ದೇನೆ. ಶಾಲೆಗಳ ಅಭಿವೃದ್ಧಿಗೆ, ಸಿಸಿ ರಸ್ತೆಗಳಿಗೆ ಅನುದಾನ ಬಳಕೆ ಮಾಡಿಕೊಂಡಿದ್ದೇನೆ.
ಶರಣಪ್ಪ ಈಳಿಗೇರ, ತಾಪಂ ಸದಸ್ಯ ಬಂಡಿ ಕ್ಷೇತ್ರ
ಮಲ್ಲಪ್ಪ ಮಾಟರಂಗಿ