ವಿಧಾನಪರಿಷತ್ತು: ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಾಯಕಲ್ಪ ನೀಡಲು ಸರ್ಕಾರ ಸಿದ್ಧವಿದ್ದು, ವಿವಿಧ ನೇಮಕಾತಿಗಳ ಪರೀಕ್ಷಾ ಪದ್ದತಿಗಳಲ್ಲಿ ಬದಲಾವಣೆ ತರುವ ಚಿಂತನೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಪ್ರದೀಪ್ ಶೆಟ್ಟರ್ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸ್ವಾಯತ್ತ ಸಂಸ್ಥೆ, ಇದರ ಸ್ಥಾಪನೆಯ ಉದ್ದೇಶ ಒಳ್ಳೆಯದು. ಆದರೆ, ಕಾರ್ಯವಿಧಾನ ಸರಿಯಿಲ್ಲ. ಈ ಸಂಸ್ಥೆ ಹಲವಾರು ವರ್ಷಗಳಿಂದ ತಪ್ಪು ವಿಷಯಕ್ಕೆ ಚರ್ಚೆಯಲ್ಲಿದೆ. ಯಾವುದೇ ಪರೀಕ್ಷೆ ನಡೆದರೂ ಅವ್ಯವಹಾರ, ಅಕ್ರಮ ಕೇಳಿ ಬರುತ್ತದೆ. ಇದು ಬೇಸರದ ಸಂಗತಿ. ಆದರೆ, ಇದಕ್ಕೆ ಕಾಯಕಲ್ಪ ನೀಡಬೇಕಿದೆ ಎಂದರು.
ಅದಕ್ಕಾಗಿ ಪರೀಕ್ಷೆ ಮತ್ತು ಆಯ್ಕೆಯ ವಿಧಾನದಲ್ಲಿ ಬದಲಾವಣೆ ತರುವ ಬಗ್ಗೆ ಮರು ಚಿಂತನೆ ಮಾಡಬೇಕಿದೆ. ಯಾವುದೇ ನೇಮಕಾತಿಗೆ ಪ್ರಕ್ರಿಯೆ ನಡೆದಾಗ ಪ್ರಾಥಮಿಕವಾಗಿ ಆನ್‌ಲೈನ್ ಟೆಸ್ಟ್ ನಡೆಸಬೇಕಾ? ಅಭ್ಯರ್ಥಿಗಳ ಅಂಕಗಳನ್ನು ಪರಿಗಣಸಬೇಕಾ? ಅಥವಾ ಮೌಖೀಕ ಸಂದರ್ಶನದ ಅಂಕಗಳನ್ನು ಕಡಿಮೆ ಮಾಡಬೇಕಾ ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರುವ ಬಗ್ಗೆ ಆಲೋಚಿಸಬೇಕಾಗಿದೆ ಎಂದರು.
ಇದನ್ನೂ ಓದಿ :ಲೈಂಗಿಕ ದೌರ್ಜನ್ಯ: ಅಪರಾಧಿಗೆ 26 ದಿನಗಳಲ್ಲಿ ಮರಣದಂಡನೆ ವಿಧಿಸಿದ ನ್ಯಾಯಾಲಯ
ಕೆಪಿಎಸ್‌ಸಿ ಮುಚ್ಚಿಬಿಡಿ: ಇದಕ್ಕೂ ಮೊದಲು ಪ್ರಶ್ನೆ ಕೇಳಿ ಮಾತನಾಡಿದ ಪ್ರದೀಪ್ ಶೆಟ್ಟರ್ ಕೆಪಿಎಸ್‌ಸಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವುದನ್ನು ನಿಲ್ಲಿಸಿ ಬಿಡಿ. ಅಲ್ಲಿ ಏನೂ ನಡೆಯುವುದಿಲ್ಲ. ಬರೀ ದುಡ್ಡಿನ ವ್ಯವಹಾರ ನಡೆಯುತ್ತಿದೆ.
ಮೌಖೀಕ ಸಂದರ್ಶನ ಮತ್ತು ಅಂಕುಗಳು ಸದಸ್ಯರಿಗೆ ಪ್ರಮುಖ ಅಸ್ತ್ರ. ಇದರಿಂದ ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಯಾವ ಪರೀಕ್ಷೆ ನಡೆದರೂ ಅವ್ಯವಹಾರ, ಅಕ್ರಮ ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚಿಬಿಡಿ ಎಂದು ಆಗ್ರಹಿಸಿದರು.