Advertisement
‘ಇವತ್ತು ನಿನ್ನ ಗಳಿಕೆ ಹೆಚ್ಚಿದೆ. ಮುಂದೆಯೂ ಇಷ್ಟೇ ಇರುತ್ತಾ? ಇಲ್ಲಿ ಬಾ, ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೆ ಇಂಟ್ರಸ್ಟ್ ಸಿಗುತ್ತೆ. ಅಲ್ಲಿ ಎಲ್ಲ ಬ್ಯಾಂಕುಗಳಿಗಿಂತಲೂ ಹೆಚ್ಚು ಬಡ್ಡಿ ದೊರೆಯುತ್ತೆ.’ಪರಿಚಯದ ಒಬ್ಬರು ಹೀಗೆ ಹೇಳುತ್ತಾರೆ. ಜಾಸ್ತಿ ಬಡ್ಡಿ ಸಿಗುತ್ತದೆ ಎಂಬ ಮಾತನ್ನಷ್ಟೇ ಕೇಳಿಸಿಕೊಳ್ಳುವ ಜನ, ಹಿಂದೆ ಮುಂದೆ ನೋಡದೆ, ಹಣ ಹೂಡುತ್ತಾರೆ. ಬಡ್ಡಿ, ಲಾಭ, ಗಳಿಕೆ ಲೆಕ್ಕಾಚಾರಕ್ಕೆ ಕೊಡುವ ಮಹತ್ವವನ್ನು ಸ್ವಲ್ಪವಾದರೂ ಹೂಡಿಕೆ ಮಾಡಲಿರುವ ಕಂಪನಿ ಅಥವಾ ಸಂಘಗಳ ಇತಿಹಾಸ, ತಿಳಿಯಲು ಕೊಟ್ಟರೆ, ನಾವು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುತ್ತಿದ್ದೇವೆಯೇ ಎಂಬ ಅರಿವು ನಮಗಾಗುತ್ತದೆ.
ಹೂಡಿಕೆ ಮಾಡುವ ಮುನ್ನ ನಾವು ಹೂಡಿಕೆ ಮಾಡಲಿರುವ ಕಂಪನಿ ಅಥವಾ ಬ್ಯಾಂಕ್‌ನ ಇತಿಹಾಸ, ಅದು ಹೊಂದಿರುವ ಷೇರುಗಳ ಮೌಲ್ಯ, ಈಗಾಗಲೇ ಆ ಕಂಪನಿಯು ಗಳಿಸಿರುವ ಆರ್ಥಿಕ ಸುಸ್ಥಿರತೆ, ಆ ಕಂಪನಿಯ ಒಡನಾಡಿ ಕಂಪನಿಗಳು, ಕಂಪನಿ ಮಾಲೀಕ, ಸರ್ಕಾರದೊಂದಿಗೆ ಅವನಿಗೆ ಇರುವ ಬಾಂಧವ್ಯ.. ಇಂಥ ಮಾಹಿತಿ ಕಲೆ ಹಾಕಿ.
Related Articles
ಹೂಡಲಿರುವ ಕಂಪನಿಯ ರಾಷ್ಟ್ರೀಕೃತ ಕಂಪನಿಯೇ ಅಥವಾ ಆರ್ಥಿಕ ಮಾನ್ಯತೆ ಪಡೆದಿದೆಯೇ ಗೊತ್ತುಮಾಡಿಕೊಳ್ಳಿ.ನಮ್ಮ ಹೂಡಿಕೆಗೆ ಇದು ಸರಿಯಾದ ಸಮಯವೆ? ನೀವು ತಲುಪಲಿರುವ ಗುರಿಯ ಸಮಯ ಎಷ್ಟು ವರ್ಷ, ಅದಕ್ಕಾಗಿ ತೆಗೆದುಕೊಳ್ಳಬೇಕಾದ ರಿಸ್ಕ್ ಬಗ್ಗೆ ಗಮನವಿರಲಿ.
Advertisement
ನಂಬಲರ್ಹ ಹೂಡಿಕೆರೆಕ್ಯೂರಿಂಗ್ ಡೆಪಾಸಿಟ್ಸ್, ಫಿಕ್ಸೆಡ್ ಡೆಪಾಸಿಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್), ಮೂಚ್ಯುವಲ್ ಫಂಡ್, ಈಕ್ವಿಟಿ ಷೇರ್, ರಿಯಲ್ ಎಸ್ಟೇಟ್, ಗೋಲ್ಡ್, ಪೋಸ್ಟ್ ಆಫೀಸ್ ಮಾಸಿಕ ಆದಾಯ ಸ್ಕೀಮ್, ಇನುÏರೆನ್ಸ್ ಪ್ಲಾನ್ಸ್, ಬಾಂಡ್ಸ್, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್, ನ್ಯಾಷನಲ್ ಪೆನ್ಶನ್ ಸ್ಕೀಮ್ ಇವೆಲ್ಲವೂ ಆರ್ಥಿಕ ಭದ್ರತೆ ಮತ್ತು ಹೂಡಿಕೆಗೆ ನಂಬಲರ್ಹ ಮಾರ್ಗಗಳು. ಹಲವೆಡೆ ಹೂಡಿಕೆ ಮಾಡಿ
ಒಂದೇ ಕಡೆ ಅಥವಾ ಒಂದೇ ಕಂಪನಿಯಲ್ಲಿ ಪೂರ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡುವ ಬದಲು ಲಾಭ ಸ್ವಲ್ಪ ಕಡಿಮೆಯಾದರೂ ವಿವಿಧ ಕಂಪನಿ ಅಥವಾ ಬ್ಯಾಂಕು, ಸಂಘಗಳಲ್ಲಿ ಹೂಡಿಕೆ ಮಾಡುವುದು ಒಳಿತು. ಏಕೆಂದರೆ ಕಂಪನಿಗಳಲ್ಲಿ ಹೆಚ್ಚು ಲಾಭದ ಜತೆಗೆ ಅಸ್ಥಿರತೆಯ ಭಯವೂ ಇರುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಆಗುವ ತಲ್ಲಣಗಳು ಏನು ಬೇಕಾದರೂ ಮಾಡಬಹುದು. ಈ ಹಿನ್ನೆಲೆಯಲ್ಲಿ, ಒಂದು ಕಂಪನಿ ಮುಳುಗಿದರೂ ಮತ್ತೂಂದು ಕಂಪನಿಯಲ್ಲಿ ಹೂಡಿಕೆ ಮಾಡಿದ ಹಣ ನಮ್ಮ ಕೈಹಿಡಿಯುವಂತೆ ಎಚ್ಚರ ವಹಿಸುವುದು ಜಾಣತನ. ಲಾಭವೂ ಹೂಡಿಕೆಯಾಗಲಿ
ನಾವು ಯಾವಾಗಲೂ ಗಳಿಸಿದ ಆದಾಯವನ್ನು ನೇರವಾಗಿ ಖರ್ಚು ಮಾಡಲು ತೊಡಗುತ್ತವೆ. ತಜ್ಞರು ಹೇಳುವಂತೆ, ಆದಾಯವನ್ನು ನೇರವಾಗಿ ಖರ್ಚು ಮಾಡುವುದು ಒಳಿತಲ್ಲ. ಆದಾಯವನ್ನು ಒಂದೆಡೆ ತೊಡಗಿಸಿ ಅದರ ಲಾಭವನ್ನು ಖರ್ಚಿಗೆ ಬಳಸುವುದು ಒಳಿತು. ಆದರೆ, ಶ್ರೀಸಾಮಾನ್ಯನ ಜೀವನದ ಗಳಿಕೆ ಮನೆ ನಿರ್ವಹಣೆಗೆ ಸರಿಯಾಗುತ್ತದೆ. ಹಾಗಾಗಿಯೇ, ಉಳಿಕೆಯಾಗುವ ಸ್ಪಲ್ಪ ಹಣವನ್ನಾದರೂ ಹೂಡಿಕೆಯಲ್ಲಿ ತೊಡಗಿಸುವ ಮನಸು ಮಾಡುತ್ತಾರೆ. ಅದರ ಜತೆಗೆ ಸ್ಪಲ್ಪ ರಿಸ್ಕ್ ತೆಗೆದುಕೊಂಡು ಹೂಡಿಕೆಯಾದ ಹಣದ ಲಾಭಾಂಶವನ್ನು ಮತ್ತೂಂದು ಸಣ್ಣ ಹೂಡಿಕೆಯನ್ನಾಗಿಸಿದರೆ ಹೆಚ್ಚುವ ಲಾಭ ದೊಡ್ಡದು ಎನ್ನುವುದು ತಜ್ಞರ ಅಭಿಮತ. ಇಲ್ಲೊಂದು ಸಣ್ಣ ಲೆಕ್ಕಾಚಾರ ಮಾಡೋಣ- ಒಬ್ಬ ಸಾಮಾನ್ಯ ನೌಕರನ ಮಾಸಿಕ ಆದಾಯ 25 ಸಾವಿರ ರೂ. ಇದೆ ಎಂದುಕೊಳ್ಳಿ. ಆತ ತನ್ನ ಕುಟುಂಬದ ನಿರ್ವಹಣೆ ಬಳಿಕ 6 ಸಾವಿರ ಉಳಿಕೆ ಮಾಡಬಲ್ಲ ಎಂದಾದರೆ, ಮೂರು ಸಾವಿರ ಮತ್ತು 2 ಸಾವಿರ ರೂ.ಗಳ ಒಂದು ವರ್ಷದ 2 ಆರ್.ಡಿಯನ್ನು ಬೇರೆ ಬೇರೆ ಕಂಪನಿ ಅಥವಾ ಬ್ಯಾಂಕ್‌ನಲ್ಲಿ ಮಾಡಿಸುವುದು ಒಳ್ಳೆಯದು. ಜತೆಗೆ 1 ಸಾವಿರ ರೂ.ಗೆ ವಿಮೆ ಮಾಡಿಸಿದರೆ ಒಳಿತು. ಆರ್.ಡಿಯಲ್ಲಿ ವರ್ಷಕ್ಕೆ ಬರುವ ಒಟ್ಟು ಹಣವನ್ನು ಮತ್ತೂಂದೆಡೆ ಎಫ್.ಡಿ ಮಾಡಿಸಲಿ. ಅದರಿಂದ ಬರುವ ಪ್ರತಿ ತಿಂಗಳ ಲಾಭಾಂಶವನ್ನು ಚಿನ್ನಕ್ಕೆ ಹೂಡಿಕೆ ಮಾಡಬಹುದು. ಪ್ರತಿವರ್ಷದ ಆರ್.ಡಿಯನ್ನು ಎಫ್.ಡಿಯಾಗಿಸಿದರೆ 5 ವರ್ಷದ ಹೊತ್ತಿಗೆ ಇಡಿಗಂಟಾಗುತ್ತದೆ. ಇದನ್ನು ಮತ್ತೂಂದೆಡೆ ಹೂಡಲು ಅನುಕೂಲವಾಗುತ್ತದೆ. ಎಚ್ಚರಿಕೆ ಅಗತ್ಯ
ಹೆಚ್ಚು ಲಾಭಾಂಶ ತಂದು ಕೊಡುತ್ತದೆ ಎಂದು ಗೊತ್ತಿಲ್ಲದ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗದಿರಿ.ಚೈನ್ ಲಿಂಕ್ ಮಾದರಿಯಲ್ಲಿ ಹಣ ಹೂಡಿಕೆ ಮಾಡಿ ಮತ್ತಷ್ಟು ಜನರನ್ನು ಸೇರಿಸಿದರೆ ನಿಮಗೆ ಶೇಕಡಾವಾರು ಲೆಕ್ಕದಲ್ಲಿ ಹಣ ನೀಡುತ್ತಾರೆ ಎಂದು ಹೇಳುವ ಕಂಪನಿಗಳನ್ನು ನಂಬದಿರಿ. ಇಲ್ಲಿ ಹಣದೊಂದಿಗೆ, ನಂಬಿದವರ ವಿಶ್ವಾಸವೂ ಹಾಳಾಗುತ್ತದೆ. ನಂಬಲರ್ಹ ಚಿಟ್ಸ್ (ಚೀಟಿ)ಗಳಲ್ಲಿ ಮಾತ್ರ ಹೂಡಿಕೆ ಮಾಡಿ, ದೀಪಾವಳಿ, ಯುಗಾದಿ, ಸಂಕ್ರಾಂತಿ ಚೀಟಿಗಳಿಗೆ ಮಾರುಹೋಗದಿರಿ. ಇಲ್ಲಿ, ನೀವು ಕಟ್ಟುವ ಹಣಕ್ಕೆ ಒಂದಷ್ಟು ಕಳಪೆ ಸಾಮಗ್ರಿಗಳನ್ನು ನೀಡಿ ಮೋಸಗೊಳಿಸುವ ಸಾಧ್ಯತೆಗಳಿವೆ.
ಸಾಲ ಮಾಡಿ ಹೂಡಿಕೆ ಮಾಡುವುದು ಜಾಣತನವಲ್ಲ. ಸಾಲದ ಬಡ್ಡಿ ಹೆಚ್ಚುತ್ತಿದ್ದರೆ, ಹೂಡಿಕೆಯಿಂದ ಬರುವ ಲಾಭ ನಿಧಾನವಾದಾಗ ಕಷ್ಟ ಅನುಭಸಬೇಕಾಗುತ್ತದೆ. ಬ್ಲೇಡ್ ಕಂಪನಿಗಳಿಂದ ದೂರವಿರಿ
ಕೇವಲ ಲಾಭಾಂಶವನ್ನೇ ನೋಡಿ ಹೂಡಿಕೆ ಮಾಡಿದ ಕಾರಣಕ್ಕೆ ವಿನ್‌ವಿಂಕ್, ಅಗ್ರಿಗೋಲ್ಡ್, ಪ್ರಸ್ತುತ ಐಎಂಎ ಕಂಪನಿಗಳಿಂದ ಅನೇಕ ಮಂದಿ ಮೋಸ ಹೋಗಿ ಕಣ್ಣೀರು ಹಾಕುತ್ತಿದ್ದಾರೆ. ವಿನ್‌ವಿಂಕ್‌ನಲ್ಲಿ ಹೂಡಿಕೆ ಮಾಡಿದ ಎಷ್ಟೋ ಮಂದಿಗೆ ಹಣವೇ ದೊರೆತಿಲ್ಲ. ಇನ್ನು, ಅಗ್ರಿಗೋಲ್ಡ್ ನಲ್ಲಿ ಹೂಡಿಕೆ ಮಾಡಿ ದೋಖಾ ಅನುಭವಿಸಿದವರು ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಇದೇ ವೇಳೆಯಲ್ಲಿ, ಐಎಂಎ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದವರು ನಮ್ಮ ನಷ್ಟದ ಲೆಕ್ಕವನ್ನು ಪೊಲೀಸರಿಗೆ ನೀಡಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಹೂಡಿಕೆ ಮಾಡುವ ಮುನ್ನ ಯೋಚಿಸಬೇಕಾಗಿತ್ತು. ಅವರಿವರ ಮಾತು ಕೇಳಿ ಹಾಳಾದೆವು ಎಂದು ಪರಿತಪಿಸುತ್ತಿದ್ದಾರೆ. -ಎನ್. ಅನಂತನಾಗ್