Advertisement

ಒಂಟಿ ವೃದ್ಧರ ಮೇಲಿನ ದೌರ್ಜನ್ಯ ತಡೆಗೆ ಚಿಂತನೆ

05:10 AM Feb 07, 2019 | Team Udayavani |

ಬೆಂಗಳೂರು: ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ತರುವ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಇಟ್ಟಿರುವ ನಗರ ಪೊಲೀಸರು ‘ಹಿರಿಯ ನಾಗರಿಕರು ಮತ್ತು ಪೋಷಕರನ್ನೊಳಗೊಂಡ ಸಮಿತಿ’ ರಚಿಸುವ ಮೂಲಕ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರ ಜತೆ ಉತ್ತಮ ಬಾಂಧವ್ಯ ಹೊಂದಲು ಮುಂದಾಗಿದ್ದಾರೆ.

Advertisement

ಈಗಾಗಲೇ ನಗರದ ಎಲ್ಲ ಎಂಟು ಕಾನೂನು ಸುವ್ಯವಸ್ಥೆ ವಲಯಗಳಲ್ಲಿ ಜಾರಿಯಲ್ಲಿರುವ ಗಸ್ತು ಪೊಲೀಸ್‌ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿರುವ 15-20 ಮಂದಿ ಹಿರಿಯ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ಆಯ್ಕೆ ಮಾಡಿ ಅವರೊಂದಿಗೆ ತಿಂಗಳಿಗೊಮ್ಮೆ ಸಭೆ ನಡೆಸಿ ಕೆಲ ಸಲಹೆ ಪಡೆಯಲು ಸೂಚಿಸಲಾಗಿದೆ. ಸಮಿತಿಗೆ ಆಯ್ಕೆಯಾದ ನಾಗರಿಕರಿಗೆ ಆಯಾ ವಲಯ ಪೊಲೀಸ್‌ ಠಾಣೆಯಿಂದ ಪ್ರತ್ಯೇಕ ಗುರುತಿನ ಚೀಟಿ ವಿತರಿಸಲಾಗುತ್ತದೆ. ಈ ಮೂಲಕ ಕಮ್ಯೂನಿಟಿ ಪೊಲೀಸಿಂಗ್‌ (ಸಮುದಾಯ ಪೊಲೀಸ್‌ ವ್ಯವಸ್ಥೆ) ಅನ್ನು ಇನ್ನಷ್ಟು ಗಟ್ಟಿ ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಅಷ್ಟೇ ಅಲ್ಲದೆ, ಗಸ್ತು ತಿರುಗುವ ಸಿಬ್ಬಂದಿ ಕಡ್ಡಾಯವಾಗಿ ಸಮಿತಿ ಸದಸ್ಯರ ಜತೆ ಸಮಾಲೋಚನೆ ನಡೆಸಿ, ಅವರಿಂದ ಸರಗಳ್ಳತನ ಹಾಗೂ ಇತರೆ ಕಾನೂನು ಬಾಹಿರ ಚಟು ವಟಿಕೆಗಳ ತಡೆಗೆ ಏನೆಲ್ಲ ಮುನ್ನೆಚ್ಚರಿಕಾ ಕ್ರಮವಹಿಸ‌ಬೇಕು ಎಂಬುದರ ಬಗ್ಗೆ ಸಲಹೆ ಪಡೆಯಬೇಕು. ಜತೆಗೆ ಪೊಲೀಸ್‌ ಇಲಾಖೆಯಿಂದ ಆಯೋಜಿಸುವ ಜಾಗೃತಿ ಕಾರ್ಯಕ್ರಮ, ಆಂದೋಲನಗಳಲ್ಲಿ ಸಮಿತಿಯ ಸದಸ್ಯರನ್ನು ಸೇರಿಸಿಕೊಂಡು ಸ್ಥಳೀಯವಾಗಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂಬುದು ಸಮಿತಿಯ ಮುಖ್ಯ ಉದ್ದೇಶ ಎಂದು ಅಧಿಕಾರಿಗಳು ವಿವರಿಸಿದರು.

ಹಿರಿಯ ನಾಗರಿಕರ ಬಗ್ಗೆ ಮಾಹಿತಿ: ಇತ್ತೀಚೆಗೆ ನಗರದಲ್ಲಿ ಒಂಟಿ ವೃದ್ಧರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಹಿರಿಯ ನಾಗರಿಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖಾ ಹಂತ ಮತ್ತು ಪ್ರಗತಿ, ಜರುಗಿಸಲಾದ ಕಾನೂನು ಕ್ರಮಗಳು ಹಾಗೂ ಇಂತಹ ಪ್ರಕರಣಗಳು ಮತ್ತೆ ನಡೆಯದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರತಿ ತಿಂಗಳ 20ನೇ ತಾರೀಖೀನೊಳಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಮಾಹಿತಿಯನ್ನು ಎಲ್ಲ ಉಪ ಪೊಲೀಸ್‌ ಆಯುಕ್ತರು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮೊದಲ ಬಾರಿಗೆ ವೃದ್ಧರ ಮಾಹಿತಿ ಸಂಗ್ರಹ
ಇದೇ ಮೊದಲ ಬಾರಿಗೆ ನಗರ ಪೊಲೀಸ್‌ ಕಮಿಷನರೆಟ್ ವ್ಯಾಪ್ತಿಯಲ್ಲಿ ಪ್ರತಿ ಠಾಣೆಗಳ ಗಸ್ತು ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿರುವ ಹಿರಿಯ ನಾಗರಿಕರು, ಪ್ರಮುಖವಾಗಿ ಆರೈಕೆ ಮಾಡುವವರಿಲ್ಲದೆ ಒಂಟಿಯಾಗಿ ವಾಸವಾಗಿರುವ ವೃದ್ಧರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಪ್ರತಿ ಮನೆಗೆ ಭೇಟಿ ನೀಡಿ, 60 ವರ್ಷ ಮೇಲ್ಪಟ್ಟ ವೃದ್ಧರ ವಯಸ್ಸು, ವಿಳಾಸ, ಭಾವಚಿತ್ರ ಹಾಗೂ ಸಂಪರ್ಕ ಸಂಖ್ಯೆಯನ್ನು ಪಡೆಯುತ್ತಿದ್ದಾರೆ. ಜತೆಗೆ ಸರಗಳ್ಳರ ಬಗ್ಗೆ ಎಚ್ಚರದಿಂದಿರಲು, ಮನೆಯಿಂದ ಹೊರಗಡೆ ಹೋಗುವಾಗ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕರಪತ್ರದಲ್ಲಿ ಗಸ್ತು ಸಿಬ್ಬಂದಿಯ ಸಂಪರ್ಕ ಸಂಖ್ಯೆಯನ್ನು ನಮೂದಿಸಲಾಗಿದ್ದು, ಒಂದು ವೇಳೆ ಅಪರಿಚಿತರಿಂದ ಮಾತ್ರವಲ್ಲದೆ, ಬೇರೆ ಯಾವುದೇ ರೀತಿಯ ತೊಂದರೆಯಾದಲ್ಲಿ ಕೂಡಲೇ ಸಿಬ್ಬಂದಿ ಸಂಪರ್ಕಿಸಬಹುದು. ನಂತರ ಆ ಪೊಲೀಸ್‌ ಸಿಬ್ಬಂದಿ ಕೆಲ ಕ್ಷಣಗಳಲ್ಲೇ ವೃದ್ಧರ ಸಮಸ್ಯೆಗೆ ನೆರವಾಗಲಿದ್ದಾರೆ. ಒಂಟಿಯಾಗಿ ವಾಸ ಮಾಡುವ ವೃದ್ಧರ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುವುದು ಎಂದು ಅಧಿಕಾರಿ ಹೇಳಿದರು.

Advertisement

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next