Advertisement
ಹೂಡಿಕೆ ಮಾಡುವಾಗ ಎಷ್ಟು ಲೆಕ್ಕಾಚಾರ ಹಾಕುತ್ತೀರೋ ಅಷ್ಟೇ ಜಾಗ್ರತೆಯನ್ನು ಸಾಲ ತೆಗೆದುಕೊಳ್ಳುವಾಗಲೂ ವಹಿಸಬೇಕು. ಇಲ್ಲವಾದರೆ ಸಾಲದ ಶೂಲದಲ್ಲಿ ಸಿಲುಕಿ ಒದ್ದಾಡಬೇಕಾಗುತ್ತದೆ. ಹಾಗಾದರೆ ಸಾಲ ಮಾಡುವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
“ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು’ ಎಂದು ಹಿರಿಯರು ಹೇಳಿದ್ದಾರೆ. ಈ ಮಾತನ್ನು ಖರ್ಚು ಮಾಡುವಾಗ ಮಾತ್ರವಲ್ಲ, ಸಾಲ ಮಾಡುವಾಗಲೂ ನೆನಪಿಟ್ಟುಕೊಳ್ಳಬೇಕು. ಸುಖಾಸುಮ್ಮನೆ ಸಾಲ ಮಾಡಲು ಹೋಗಬೇಡಿ. ಸಾಲ ಕೊಡಲು ಬ್ಯಾಂಕ್, ಹಣಕಾಸು ಸಂಸ್ಥೆಗಳು ತುದಿಗಾಲಲ್ಲಿ ನಿಂತಿರುತ್ತವೆ. ಹಾಗೆಂದು ಅವರು ಕೊಡುತ್ತಾರೆ, ನಾನು ತೆಗೆದುಕೊಳ್ಳುತ್ತೇನೆ ಎಂಬ ಮನಃಸ್ಥಿತಿ ಬೇಡ. ಆದರೆ ಜಮೀನು, ಮನೆ, ವಾಹನ ಖರೀದಿಯಂಥ ಸಂದರ್ಭಗಳಲ್ಲಿ ಸಾಲವನ್ನು ಹೊರೆಯಾಗದಂತೆ ನಿರ್ವಹಿಸಲು ಯೋಜನೆ ಹಾಕಿಕೊಳ್ಳುವುದು ಅಗತ್ಯ. ಸಾಲ ಮಾಡುವಾಗ ಮಾಸಿಕ ಇಎಂಐ ನಿಮ್ಮ ಮಾಸಿಕ ಆದಾಯದ ಶೇ.40ಕ್ಕಿಂತ ಹೆಚ್ಚಿರದಂತೆ ಎಚ್ಚರ ವಹಿಸಿ. ಒಂದು ವೇಳೆ ಇಎಂಐ ಮೊತ್ತ ಆದಾಯದ ಶೇ.50-70ರಷ್ಟಿದ್ದರೆ, ಭವಿಷ್ಯಕ್ಕೆ ಒಂದಿಷ್ಟು ಹಣ ಕೂಡಿಡುವುದು ನಿಮಗೆ ಕಷ್ಟವಾಗುತ್ತದೆ. ಹೂಡಿಕೆಗಾಗಿ ಸಾಲ ಮಾಡುವ ಮುನ್ನ ಯೋಚಿಸಿ: ಕೆಲವರು ಮೈ ತುಂಬಾ ಸಾಲ ಮಾಡಿಕೊಂಡು ಹೊಸ ಉದ್ಯಮ ಪ್ರಾರಂಭಿಸುತ್ತಾರೆ. ಈ ರೀತಿ ಸಾಲ ಮಾಡಿ ಬಂಡವಾಳ ಹೂಡಿದರೆ ಆಮೇಲೆ ಲಾಭ ಬರುತ್ತದೆ. ಕೈ ತುಂಬಾ ಹಣ ಸಿಗುತ್ತದೆ ಎಂಬ ಲೆಕ್ಕಾಚಾರ ಅವರದಾಗಿರುತ್ತದೆ. ಆದರೆ ಹೊಸ ಉದ್ಯಮದಲ್ಲಿ ಸಾಕಷ್ಟು ಆಪಾಯಗಳು ಇದ್ದೇ ಇರುತ್ತವೆ. ಹೀಗಾಗಿ ಹೂಡಿಕೆ ಮಾಡುವ ಉದ್ದೇಶದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ಮಾಡುವುದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಇನ್ನು ಕೆಲವರು ಮದುವೆ, ಪ್ರವಾಸ, ಐಷಾರಾಮಿ ಬದುಕು..ಮತ್ತಿತರ ಕಾರಣಗಳಿಗಾಗಿ ಸಾಲ ಮಾಡುತ್ತಾರೆ. ಇಂಥ ಸಾಲಗಳು ಹೊರೆಯಾಗುವ ಸಾಧ್ಯತೆ ಹೆಚ್ಚು.
Related Articles
Advertisement
ಅವಧಿಗೂ ಮುನ್ನ ತೀರಿಸಲು ಪ್ರಯತ್ನಿಸಿ: ಕೆಲವರು ಸಾಲದ ಅವಧಿ ಇನ್ನೂ ಅನೇಕ ವರ್ಷಗಳಿವೆ. ಅವಧಿಗೂ ಮುನ್ನವೇ ಸಾಲ ತೀರಿಸುವುದು ಯಾಕೆ ಎಂದು ಸುಮ್ಮನಿದ್ದು ಬಿಡುತ್ತಾರೆ. ಅಲ್ಲದೆ ಗೃಹ ಸಾಲ ಸೇರಿದಂತೆ ಕೆಲವು ವಿಧದ ಸಾಲಗಳಿಗೆ ತೆರಿಗೆ ವಿನಾಯಿತಿ ಇರುವ ಕಾರಣ ಸಾಲವನ್ನು ಮರುಪಾವತಿಸುವಷ್ಟು ಹಣವಿದ್ದರೂ ಕಟ್ಟುವುದಿಲ್ಲ. ಆದರೆ ಇದು ತಪ್ಪು. ತೆರಿಗೆ ವಿನಾಯಿತಿ ಪಡೆಯಲು ಇನ್ನೂ ಅನೇಕ ಅವಕಾಶಗಳಿವೆ.ಆ ಕಾರಣಕ್ಕೆ ಸುಮ್ಮನೆ ಬಡ್ಡಿ ಕಟ್ಟುವುದು ನಿಮ್ಮ ಜೇಬಿಗೇ ಹೊರೆ.