Advertisement

‌ತೂಕಡಿಕೆ: ನಿದ್ದೆಯ ಸಾಮ್ರಾಜ್ಯ

12:06 PM Nov 06, 2022 | Team Udayavani |

ನಿಮ್ಮ ನಿದ್ದೆಯ ಬಗ್ಗೆ ನಿಮಗೆ ತಿಳಿದಿದೆಯೇ? ನಿಮ್ಮ ನಿದ್ದೆಯ ಚಕ್ರದ ಬಗ್ಗೆ ನೀವು ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

Advertisement

ನಾವು ಅಂದರೆ ಮನುಷ್ಯರು ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಿದ್ದೆಯಲ್ಲಿಯೇ ಕಳೆಯುತ್ತೇವೆ. ನಿದ್ದೆ ಎಂಬುದನ್ನು ಎಚ್ಚರಕ್ಕೆ ತರಬಹುದಾದ ಕುಗ್ಗಿದ ಪ್ರತಿಸ್ಪಂದನೆ, ಕುಗ್ಗಿದ ಚಲನ ಕ್ರಿಯೆ ಮತ್ತು ಕುಗ್ಗಿದ ಚಯಾಪಚಯ ಕ್ರಿಯೆ ಎಂದು ವ್ಯಾಖ್ಯಾನಿಸಬಹುದಾಗಿದೆ.

ವ್ಯಕ್ತಿಯೊಬ್ಬ 7ರಿಂದ 8 ತಾಸು ನಿದ್ದೆ ಮಾಡಿದರೆ ಅದು ಒಳ್ಳೆಯ ನಿದ್ದೆ ಎಂದು ಹೇಳುತ್ತಾರೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಬಾಲಿವುಡ್‌ನ‌ ಕಿಂಗ್‌ ದಿನಕ್ಕೆ ನಾಲ್ಕು ತಾಸುಗಳಿಗಿಂತ ಕಡಿಮೆ ನಿದ್ರಿಸುತ್ತಾರಂತೆ. ಅದು ನಿಜವೇ.

ನಿದ್ದೆ ಎಷ್ಟು ಬೇಕು ಅನ್ನುವುದು ಎಚ್ಚರ ಸ್ಥಿತಿಯಲ್ಲಿ ಇರುವುದಕ್ಕೆ ಎಷ್ಟು ತಾಸು ನಿದ್ದೆಯ ಅವಧಿಯನ್ನು ವ್ಯಯಿಸುತ್ತೇವೆ ಎಂಬುದನ್ನು ಆಧರಿಸಿದೆ.

ದುರದೃಷ್ಟವಶಾತ್‌ ನಮ್ಮ ಸ್ಮಾರ್ಟ್‌ಫೋನ್‌ ಗಳನ್ನು ಬಿಟ್ಟು ನಮಗೆ ದೈನಿಕ ಬದುಕಿನ ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸಲು ಆಗುವುದಿಲ್ಲ ಎಂಬಷ್ಟರ ಮಟ್ಟಿಗೆ ಅವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟಿವೆ. ಸ್ಮಾರ್ಟ್‌ಫೋನ್‌ನಲ್ಲಿ ಎಲ್ಲವೂ ಒಂದು ಟ್ಯಾಪ್‌ ನಲ್ಲಿ ಲಭ್ಯವಿರುವುದರಿಂದ ನಾವು ನಮ್ಮನ್ನು ಆರೋಗ್ಯವಂತರು ಮತ್ತು ಸದೃಢರನ್ನಾಗಿ ಇರಿಸಿಕೊಳ್ಳುವುದನ್ನು ನಿಧಾನವಾಗಿ ಮರೆಯುತ್ತಿದ್ದೇವೆ. ಹೊಸ ಪೀಳಿಗೆಯವರು ರಾತ್ರಿ ಹೆಚ್ಚು ಹೆಚ್ಚು ಹೊತ್ತು ನಿದ್ದೆ ಬಿಟ್ಟು ಎಚ್ಚರವಾಗಿರುವುದು “ಕೂಲ್‌’ ಎಂಬುದಾಗಿ ತಿಳಿದುಕೊಂಡಿದ್ದಾರೆ. ಈ “ಕೂಲ್‌’ನ ಹೊಸ ಭ್ರಮೆಯು ನಮ್ಮ ಸರ್ಕೇಡಿಯನ್‌ ಲಯ (ನಿದ್ದೆ-ಎಚ್ಚರದ ಚಕ್ರ)ದ ಮೇಲೆ ಮತ್ತು ಸಹಜ ದೈನಿಕ ಕಾರ್ಯಚಟುಟಿಕೆಗಳ ಮೇಲೆ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಲ್ಲುದು.

Advertisement

ಜನಸಾಮಾನ್ಯರು ನಿದ್ದೆಯ ಸಮಸ್ಯೆಯನ್ನು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಾದ ಒಂದು ಅನಾರೋಗ್ಯ ಎಂಬುದಾಗಿ ಭಾವಿಸುವುದಿಲ್ಲ. ನಿದ್ದೆಗೆ ಸಂಬಂಧಿಸಿದ ತೊಂದರೆಗಳನ್ನು ವಯಸ್ಸಾಗುವಿಕೆ ಅಥವಾ ಒತ್ತಡದ ಜೀವನಶೈಲಿಯ ಪರಿಣಾಮ ಎಂಬುದಾಗಿ ತಿಳಿದುಕೊಳ್ಳುತ್ತಾರೆ. ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ನಾವು ಯಾಕೆ ನಿದ್ದೆ ಮಾಡಬೇಕು?

ಮಿದುಳು ಸಕ್ರಿಯವಾಗಿ ಕೆಲಸ ಮಾಡಲು ಮತ್ತು ದೇಹಾರೋಗ್ಯದ ಸಹಜ ದೈಹಿಕ ಕಾರ್ಯಚಟುವಟಿಕೆಗಳು ನಡೆಯಲು ನಿದ್ದೆ ಅತ್ಯಗತ್ಯ. ಸಹಜವಾಗಿ ಎಷ್ಟು ಬೇಕೋ ಅಷ್ಟು ನಿದ್ದೆ ಮಾಡುವುದು ಉತ್ತಮ ರೋಗ ನಿರೋಧಕ ಶಕ್ತಿ ಹೊಂದಲು ಸಹಾಯ ಮಾಡುತ್ತದೆ, ಏಕಾಗ್ರತೆಯನ್ನು ವೃದ್ಧಿಸುತ್ತದೆ, ಹೃದಯದ ತೊಂದರೆಗಳು ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಹಾರ್ಮೋನ್‌ಗಳ ಸಮತೋಲನವನ್ನು ಕಾಪಾಡುತ್ತದೆ.

ಕೆಲವು ಪ್ರಯೋಜನಗಳನ್ನು ಪಟ್ಟಿ ಮಾಡುವುದಾದರೆ:

  1. ದೇಹವು ನಿದ್ರಾಸ್ಥಿತಿಯಲ್ಲಿ ತನ್ನೊಳಗೆ ಕೆಲವು ದುರಸ್ತಿಗಳನ್ನು ನಡೆಸಲು ಮತ್ತು ಪುನಶ್ಚೇತನಗೊಳ್ಳಲು ನಿದ್ದೆಯು ಸಹಾಯ ಮಾಡುತ್ತದೆ. ವ್ಯಕ್ತಿಯೊಬ್ಬ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಬೆಳಗ್ಗೆ ಎದ್ದಾಗ ನವಚೈತನ್ಯವನ್ನು, ಉಲ್ಲಾಸವನ್ನು ಅನುಭವಿಸುತ್ತಾನೆ.
  2. ನಿದ್ದೆ ಮಾಡುತ್ತಿರುವಾಗ ಬೆಳವಣಿಗೆಯ ಹಾರ್ಮೋನ್‌ ಆಗಿರುವ ಸೆಕ್ರೆಟಿನ್‌ನ ಸ್ರಾವ ಅತ್ಯುಚ್ಚ ಮಟ್ಟದಲ್ಲಿರುತ್ತದೆ; ಇದು ರಾತ್ರಿಯ ವೇಳೆ ಸ್ನಾಯು ಬೆಳವಣಿಗೆ ಮತ್ತು ಜೀವಕೋಶಗಳ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ.
  3. ರಾತ್ರಿಯ ವೇಳೆ ನಿದ್ದೆ ಕಡಿಮೆಯಾದರೆ ಅದರಿಂದ ಹಗಲಿನ ವೇಳೆ ಕಾರ್ಯಚಟುವಟಿಕೆಗಳಲ್ಲಿ ದಕ್ಷತೆ, ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ, ಹಗಲು ನಿದ್ದೆ ತೂಗುತ್ತದೆ, ದಣಿವು ಉಂಟಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.
  4. ನಿದ್ದೆಯ ಕೊರತೆಯು ಅರಿವು ಕಾರ್ಯಚಟುವಟಿಕೆ ಮತ್ತು ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ.

ನಾವು ನಮ್ಮ ನಿದ್ದೆಯ ಚಕ್ರವನ್ನು ಪೂರೈಸಿದ್ದೇವೆ ಎಂಬುದು ತಿಳಿಯುವುದು ಹೇಗೆ?

ಸಹಜ ಆರೋಗ್ಯವಂತ ವ್ಯಕ್ತಿಯೊಬ್ಬ ಎರಡು ನಿದ್ದೆಯ ಹಂತಗಳನ್ನು ಹಾದುಹೋಗಬೇಕು: ಕ್ಷಿಪ್ರ ನೇತ್ರ ಚಲನೆಯಿಲ್ಲದ ಹಂತ (ಎನ್‌ಆರ್‌ಇಎಂ) ಮತ್ತು ಕ್ಷಿಪ್ರ ನೇತ್ರ ಚಲನೆಯ ಹಂತ (ಆರ್‌ಇಎಂ).

ಎನ್‌ಇಆರ್‌ಎಂ ಹಂತ ಎನ್‌ಇಆರ್‌ಎಂ ಎಂಬುದು ನಿದ್ದೆಯ ಪ್ರಥಮ ಹಂತ. ಇದನ್ನು ಇನ್ನೂ ಮೂರು ಹಂತಗಳಾಗಿ ವಿಭಾಗಿಸಲಾಗಿದ್ದು, ಇಲ್ಲಿ ಪ್ರತೀ ಹಂತದಲ್ಲಿಯೂ ನಿದ್ದೆ ಹೆಚ್ಚುತ್ತ ಹೋಗುತ್ತದೆ. ಈ ಹಂತದಲ್ಲಿ ವ್ಯಕ್ತಿಯನ್ನು ನಿದ್ದೆಯಿಂದ ಎಬ್ಬಿಸುವುದು ಇತರ ಹಂತಗಳಿಗಿಂತ ಸುಲಭ. ಎನ್‌ಇಆರ್‌ಎಂ ಹಂತವು ಎನ್‌1, ಎನ್‌2, ಎನ್‌3 ಎಂಬ ಮೂರು ಉಪ ಹಂತಗಳನ್ನು ಹೊಂದಿದೆ.

ಹಂತ ಎನ್‌1 ಇದು ಎಚ್ಚರದ ಸ್ಥಿತಿಯಿಂದ ನಿದ್ರಾ ಸ್ಥಿತಿಗೆ ಪರಿವರ್ತನೆಗೊಳ್ಳುವ ಹಂತ. ಈ ಹಂತದಲ್ಲಿ ನಮ್ಮ ಕಣ್ಣುಗುಡ್ಡೆಗಳು ನಿಧಾನವಾಗಿ, ಕೆಳಗಿನಿಂದ ಮೇಲಕ್ಕೆ ಚಲಿಸುತ್ತಿರುತ್ತವೆ. ಇದು ನಿದ್ದೆಯ ಮೊದಲ ಹಂತವಾಗಿದ್ದು, ಈ ಹಂತದಲ್ಲಿ ನಿದ್ರಿಸುತ್ತಿರುವ ವ್ಯಕ್ತಿಯು ತಾನು ನಿದ್ರಿಸುತ್ತಿದ್ದೇನೆ ಎಂಬ ನಿಜವಾದ ಅರಿವನ್ನು ಹೊಂದಿರುವುದಿಲ್ಲ ಮತ್ತು ಸುಲಭವಾಗಿ ಎಚ್ಚರಿಸಬಹುದಾಗಿರುತ್ತದೆ.

ಹಂತ ಎನ್‌2 ಇದು ಸಹಜ ಆರೋಗ್ಯವಂತ ವ್ಯಕ್ತಿಯ ಒಟ್ಟು ನಿದ್ದೆಯ ಅತೀ ಹೆಚ್ಚು ಶೇಕಡಾವಾರು ಭಾಗವನ್ನು ಒಳಗೊಳ್ಳುತ್ತದೆ. ಇದು ನಿದ್ದೆಯ ಅವಧಿಯ ಶೇ. 45ರಿಂದ 55ನ್ನು ಒಳಗೊಳ್ಳುತ್ತದೆ. ಇದು ಸಾಮಾನ್ಯವಾಗಿ ರಾತ್ರಿಯ ಮೊದಲ ಅರ್ಧಭಾಗದಲ್ಲಿ, ನಿರ್ದಿಷ್ಟವಾಗಿ ನಿದ್ದೆಯ ಚಕ್ರದ ಆರಂಭದಲ್ಲಿ ಉಂಟಾಗುತ್ತದೆ. ಎನ್‌3 ಹಂತದಲ್ಲಿ ನಿದ್ರಿಸುತ್ತಿರುವ ವ್ಯಕ್ತಿಯನ್ನು ಎಚ್ಚರಿಸುವುದು ಹೆಚ್ಚು ಕಷ್ಟಕರ. ಪ್ಯಾರಾಸೋಮ್ನಿಯಾ ಸಾಮಾನ್ಯವಾಗಿ ಈ ಹಂತದಲ್ಲಿ ಉಂಟಾಗುತ್ತದೆ.

ಆರ್‌ಇಎಂ ಹಂತ

ನಿದ್ದೆಯ ಆರ್‌ಇಎಂ ಹಂತವನ್ನು ಆರ್‌ ಎಂಬುದಾಗಿಯೂ ಹೇಳುತ್ತಾರೆ. ನಿದ್ದೆಯ ಈ ಹಂತದಲ್ಲಿ ಮಿದುಳಿನ ಚಟುವಟಿಕೆಯು ಬಹುತೇಕ ಎಚ್ಚರದ ಸ್ಥಿತಿಯಂತೆಯೇ ಇರುತ್ತದೆ. ಕನಸು ಮತ್ತು ಬೆಚ್ಚಿಬೀಳುವಿಕೆಗಳು ಈ ಹಂತದಲ್ಲಿ ಉಂಟಾಗುತ್ತವೆ.

ಆರ್‌ಇಎಂ ಹಂತದ ನಿದ್ದೆಯಲ್ಲಿ ಎರಡು ಸ್ತರಗಳಿರುತ್ತವೆ. ಫೇಸಿಕ್‌ ಆರ್‌ಇಎಂನಲ್ಲಿ ನೇತ್ರಗಳ ಚಲನೆಯು ಕ್ಷಿಪ್ರವಾಗಿದ್ದರೆ, ಟೋನಿಕ್‌ ಆರ್‌ ಇಎಂ ನಿದ್ದೆಯು ಚಲನೆಯ ಚಟುವಟಿಕೆಗಳಿಗೆ ಸೀಮಿತವಾಗಿದ್ದು, ನೇತ್ರಗಳ ಚಲನೆಯು ಸ್ವಲ್ಪವೇ ಇರುತ್ತದೆ. ಆರ್‌ ಹಂತದ ನಿದ್ದೆಯಲ್ಲಿ ವೈವಿಧ್ಯಮಯ ಕನಸುಗಳು ಬೀಳುತಿದ್ದು, ವ್ಯಕ್ತಿಯು ಸುಲಭವಾಗಿ ಎಚ್ಚರಗೊಳ್ಳಬಹುದಾಗಿರುತ್ತದೆ. ಈ ಹಂತವು ನಿದ್ದೆಯ ಶೇ. 18ರಿಂದ 30ರಷ್ಟನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ಸ್ಮರಣೆಯ ಬಲವರ್ಧನೆ ನಡೆಯುತ್ತಿದ್ದು, ಪ್ರಮುಖ ನೆನಪುಗಳನ್ನು ಇರಿಸಿಕೊಂಡು ಕಡಿಮೆ ಪ್ರಾಮುಖ್ಯವಾದ ನ್ಯೂರಲ್‌ ಸಂಪರ್ಕಗಳನ್ನು ಕಡಿತಗೊಳಿಸಿಕೊಳ್ಳಲಾಗುತ್ತದೆ. ನಿದ್ದೆಯ ಆರ್‌ಇಎಂ ಹಂತದಲ್ಲಿರುವ ವ್ಯಕ್ತಿ ಸಮುದ್ರದಂತೆ ಶಾಂತವಾಗಿರುತ್ತಾನೆ, ಆದರೆ ಕಣ್ಣುಗಳ ಕ್ಷಿಪ್ರ ಚಲನೆಯನ್ನು ಗಮನಿಸಬಹುದು.

ಮಧ್ಯರಾತ್ರಿಯ ಭಯಂಕರಗಳು!

ನೀವು ಇವುಗಳಲ್ಲಿ ಯಾವುದನ್ನಾದರೂ ಅನುಭವಿಸಿದ್ದೀರಾ? ನಿಮ್ಮನ್ನು ನೀವು ತಿಳಿಯಿರಿ.

1. ಎನುರೆಸಿಸ್‌: 5ಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಲ್ಲಿ ಉದ್ದೇಶಪೂರ್ವಕವಲ್ಲದ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ. ಬಹುತೇಕ ಮಕ್ಕಳು 3 ವರ್ಷ ವಯಸ್ಸಿಗೆ ರಾತ್ರಿ ಮೂತ್ರ ವಿಸರ್ಜನೆಯ ಮೇಲೆ ಹಿಡಿತವನ್ನು ಹೊಂದುತ್ತಾರೆ. ಎನುರೆಸಿಸ್‌ನ ಕೌಟುಂಬಿಕ ಇತಿಹಾಸ ಅಥವಾ ಮಗು ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಸಾಧಿಸದ್ದರಿಂದ ಉಂಟಾಗಬಹುದು.

2. ನಿದ್ದೆಗೆ ಸಂಬಂಧಿಸಿದ ಆಹಾರ ಸೇವನೆಯ ಸಮಸ್ಯೆ: ಪದೇಪದೆ ನಿದ್ದೆಯಿಂದ ಎಚ್ಚರ ಹೊಂದಿ ತಿನ್ನುವುದು, ಕುಡಿಯುವುದಕ್ಕೆ ಇದು ಸಂಬಂಧಿಸಿದೆ. ಈ ಎಚ್ಚರಗೊಳ್ಳುವಿಕೆಯು ತಿಳಿವಳಿಕೆಯುಳ್ಳ ನಡವಳಿಕೆಯಾಗಿರುತ್ತದೆ ಮತ್ತು ನಿಜವಾದ ಬಾಯಾರಿಕೆ ಅಥವಾ ಹಸಿವಿನಿಂದ ಆಗಿರುವುದಿಲ್ಲ.

3. ನಿದ್ರಾವರ್ತನೆಯ ಸಮಸ್ಯೆ: ಆರ್‌ಇಎಂ ಹಂತದ ನಿದ್ದೆಯಲ್ಲಿ ವ್ಯಕ್ತಿಯು ಅಹಿತಕರವಾದ ಕನಸುಗಳ ವೈವಿಧ್ಯಮಯ ದೈಹಿಕ ಚಟುವಟಿಕೆಗಳನ್ನು, ಉಗ್ರ ಕೈ ಮತ್ತು ಕಾಲುಗಳ ಚಲನೆಯನ್ನು ಪ್ರದರ್ಶಿಸುತ್ತಾನೆ.

4. ದುಃಸ್ವಪ್ನಗಳು: ಇವು ಆರ್‌ಇಎಂ ಹಂತದಲ್ಲಿ ಉಂಟಾಗುವ ಭಯಾನಕ ಮತ್ತು ಅಹಿತಕರವಾದ‌ ಕನಸುಗಳು. ಇವು ಸಾಮಾನ್ಯವಾಗಿ ಆರ್‌ಇಎಂ ಹಂತ ಇರುವ ರಾತ್ರಿಯ ಅರ್ಧಭಾಗದಲ್ಲಿ ಉಂಟಾಗುತ್ತವೆ. ಈ ಕನಸುಗಳಲ್ಲಿ ಭಯ ಉಂಟು ಮಾಡುವ ಮತ್ತು ವ್ಯಕ್ತಿಗೆ ದೈಹಿಕ ಅಪಾಯಗಳನ್ನು ಉಂಟುಮಾಡುವ ದೃಶ್ಯಗಳಿರುತ್ತವೆ. ವ್ಯಕ್ತಿಯು ಸಾಮಾನ್ಯವಾಗಿ ಎಚ್ಚರಗೊಂಡ ಬಳಿಕ ದುಃಸ್ವಪ್ನದ ಅಂಶ, ವಿವರಗಳನ್ನು ವರ್ಣಿಸುತ್ತಾನೆ. ಪದೇಪದೇ ದುಃಸ್ವಪ್ನಗಳು ಮರುಕಳಿಸುವುದರಿಂದ ನಿದ್ದೆಯ ಕೊರತೆ, ನಿದ್ದೆ ಹೋಗುವ ಭಯದಿಂದ ನಿದ್ದೆಯನ್ನು ಬಯಸದಿರುವುದು ಮತ್ತು ಹಗಲು ಹೆಚ್ಚು ನಿದ್ದೆ ತೂಗುವುದು ಉಂಟಾಗಬಹುದು.

5. ನಿದ್ದೆಯ ಪಕ್ಷವಾತ: ಇದು ನಿದ್ದೆ ಹೋಗಿರುವಾಗ ಅಥವಾ ನಿದ್ದೆಯಿಂದ ಎಚ್ಚರಗೊಂಡ ಬಳಿಕ ಸ್ವಯಂ ಚಲನೆಗಳನ್ನು ನಡೆಸುವ ಅಸಾಮರ್ಥ್ಯ. ತಲೆ, ದೇಹ ಮತ್ತು ಕೈಕಾಲುಗಳ ಸಾಮಾನ್ಯ ತಾತ್ಕಾಲಿಕ ಪಕ್ಷವಾತ ಇರುತ್ತದೆ. ವ್ಯಕ್ತಿಯ ಎಚ್ಚರಿಕೆಯ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ ಮತ್ತು ಕನಸಿನ ಚಿತ್ರಣಗಳು ಸ್ಮರಣೆಯಲ್ಲಿರುತ್ತವೆ. ನಿದ್ದೆಯ ಕೊರತೆ ಮತ್ತು ಕಳಪೆ ನಿದ್ದೆ ಇದಕ್ಕೆ ಪೂರ್ವನಿರ್ಧಾರಕ ಅಂಶವಾಗಿರುತ್ತವೆ.

6. ನಿದ್ದೆಯ ಭಯಗಳು: ಇವುಗಳನ್ನು ರಾತ್ರಿಯ ಭಯ ಎಂದೂ ಕರೆಯಲಾಗುತ್ತಿದ್ದು, ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅಳುವುದು ಅಥವಾ ಗಟ್ಟಿಯಾದ ಕಿರುಚುವಿಕೆ ಮತ್ತು ಸಾಮಾನ್ಯವಾದ ಭಯ ಇದರ ಲಕ್ಷಣಗಳು.

7. ನಿದ್ದೆಯಲ್ಲಿ ನಡಿಗೆ: ಸೊಮ್ನಾಂಬ್ಯುಲಿಸಂ ಎಂದರೆ ನಿದ್ದೆಯ ಸಮಯದಲ್ಲಿ ಚಲನೆ. ವ್ಯಕ್ತಿಯು ಸಾಮಾನ್ಯವಾಗಿ ಹಾಸಿಗೆಯಿಂದ ಎದ್ದು ಕುಳಿತುಕೊಳ್ಳುತ್ತಾನೆ ಬಳಿಕ ನಡೆಯುತ್ತಾನೆ ಅಥವಾ ಓಡುತ್ತಾನೆ. ನಿದ್ದೆಯಲ್ಲಿ ನಡೆಯುವ ವ್ಯಕ್ತಿ ಎಚ್ಚರಗೊಳ್ಳದೆಯೇ ಅಥವಾ ಇನ್ನೊಬ್ಬರನ್ನು ಎಚ್ಚರಗೊಳಿಸಿ ಹಾಸಿಗೆಗೆ ಹಿಂದಿರುಗಬಹುದು. ನಿದ್ದೆಯಲ್ಲಿ ನಡೆಯುವಾತನ ಕಣ್ಣುಗಳು ಅಗಲವಾಗಿ ತೆರೆದುಕೊಂಡಿರುತ್ತವೆ ಆದರೆ ಅವರ ಜತೆಗೆ ಸಂವಹನದ ಪ್ರಯತ್ನಗಳು ಸಾಮಾನ್ಯವಾಗಿ ಯಶಸ್ವಿಯಾಗುವುದಿಲ್ಲ.

8. ನಿದ್ದೆಯಲ್ಲಿ ನರಳಾಟ: ನಿದ್ದೆಯಲ್ಲಿ ವ್ಯಕ್ತಿಯು ಶ್ವಾಸ ತೆಗೆದುಕೊಳ್ಳುವಾಗ ನರಳುತ್ತಾನೆ. ಆತ/ ಆಕೆಗೆ ಈ ಬಗ್ಗೆ ಅರಿವಿರುವುದಿಲ್ಲ. ಆದರೆ, ಈ ಗಟ್ಟಿಯಾದ ನರಳಾಟದಿಂದ ಜತೆಗೆ ನಿದ್ದೆ ಮಾಡಿದವರು ತೊಂದರೆ ಅನುಭವಿಸುತ್ತಾರೆ.

9. ನಿದ್ದೆಗೆ ಸಂಬಂಧಿಸಿದ ಭ್ರಾಂತಿ: ಎಚ್ಚರ-ನಿದ್ದೆಯ ಪರಿವರ್ತನೆಯ ಸಂದರ್ಭದಲ್ಲಿ – ನಿದ್ದೆಯ ಆರಂಭಿಕ ಹಂತದಲ್ಲಿ ಅಥವಾ ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವಾಗ ಭ್ರಾಂತಿಗಳು ಉಂಟಾಗಬಹುದು. ಈ ಭ್ರಾಂತಿಗಳು ದೃಶ್ಯ, ಶ್ರಾವ್ಯ ಅಥವಾ ಸ್ಪರ್ಶಶೀಲ ಗುಣದ್ದಾಗಿರಬಹುದು.

10. ತಲೆ ಸ್ಫೋಟಗೊಳ್ಳುವ ಸಿಂಡ್ರೋಮ್‌: ಎಚ್ಚರದ ಸ್ಥಿತಿ ಮತ್ತು ನಿದ್ದೆಯ ನಡುವಣ ಪರಿವರ್ತನೆಯ ಸಮಯದಲ್ಲಿ ತಲೆಯಲ್ಲಿ ಕಲ್ಪಿತ ಹಠಾತ್‌, ಭಾರೀ ಸದ್ದು ಅಥವಾ ಸ್ಫೋಟ. ಇದರಲ್ಲಿ ವ್ಯಕ್ತಿಯು ಮಿಂಚಿನಂತಹ ಬೆಳಕು, ಹೆದರಿಕೆಯನ್ನು ಅನುಭವಿಸಬಹುದು.

ನಿದ್ದೆಯ ಕೊರತೆ

ಇದು ನಿದ್ದೆಯ ಸಮಯದಲ್ಲಿ ಕೊರತೆ, ಛಿದ್ರಗೊಂಡ ಅಥವಾ ತೊಂದರೆಗೊಳಗಾದ ನಿದ್ದೆ ಅಥವಾ ಈ ಎರಡೂ ಸೇರಿದ್ದರಿಂದ ಉಂಟಾಗುತ್ತದೆ. ನಿದ್ದೆಯ ಜಗತ್ತನ್ನು ಕೊಂಡಾಡುವುದಕ್ಕೆ ಇನ್ನೂ ಹೆಚ್ಚು ಕಾರಣಗಳಿವೆ. ನಿದ್ದೆ ಮತ್ತು ಎಚ್ಚರದ ಸ್ಥಿತಿಯ ನಡುವಣ ಸಮತೋಲನವನ್ನು ಬಾಧಿಸುವ ನರಶಾಸ್ತ್ರೀಯ-ಜೀವಶಾಸ್ತ್ರೀಯ ಅಂಶಗಳನ್ನು ಬಗೆಹರಿಸುವುದಕ್ಕೆ ನಮ್ಮ ನಿದ್ದೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯ. ಪ್ರಸ್ತುತ ನಿದ್ದೆಯ ಆರೋಗ್ಯದ ಕೊರತೆ, ನಿದ್ದೆಯ ಬಗ್ಗೆ ತಿಳಿವಳಿಕೆ ಮತ್ತು ಪತ್ತೆಯಾಗದ ನಿದ್ದೆಯ ಸಮಸ್ಯೆಗಳು ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖ ಅಂಶಗಳಾಗಿದ್ದು, ಇದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಅನೇಕ ವ್ಯಕ್ತಿಗಳು ತಾವು ಹೊಂದಿರುವ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳ ಪತ್ತೆ ಮತ್ತು ಚಿಕಿತ್ಸೆಗೆ ಮುನ್ನ ಹಲವಾರು ವರ್ಷಗಳ ಕಾಲ ಅವುಗಳಿಂದ ಬಳಲಿರುತ್ತಾರೆ. ನಿಮ್ಮ ನಿದ್ದೆ, ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ.

ಉತ್ತಮ ನಿದ್ದೆಯ ಆರೋಗ್ಯಕ್ಕೆ ಸಲಹೆಗಳು

„ಪ್ರತೀ ದಿನ ಬೆಳಗ್ಗೆ 9ರಿಂದ 11ರ ನಡುವೆ 30ರಿಂದ 40 ನಿಮಿಷಗಳ ಕಾಲ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಿ.

„ ನಿಯಮಿತವಾದ ನಿದ್ದೆ ಹೋಗುವ ಸಮಯವನ್ನು ಅನುಸರಿಸಿ.

„ ನಿದ್ದೆ ಹೋಗುವುದಕ್ಕೆ 2 ತಾಸು ಮುನ್ನವೇ ಊಟ ಉಪಾಹಾರವನ್ನು ಪೂರೈಸಿಕೊಳ್ಳಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸಿ.

„ ಎಣ್ಣೆಭರಿತ, ಮಸಾಲೆಯುಕ್ತ ಮತ್ತು ಉಪ್ಪಿನಂಶ ಹೆಚ್ಚಿರುವ ಆಹಾರಗಳು ನಿದ್ದೆಗೆ ಮುನ್ನ ಬೇಡ.

„ ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಕುಳಿತಿರುವಾಗ ಕೂಡ ಕೈಕಾಲುಗಳಿಗೆ ಚಲನೆ ನೀಡಿ.

„ ಹಾಸಿಗೆಯಲ್ಲಿ ಮಲಗಿ 30 ನಿಮಿಷಗಳ ಬಳಿಕವೂ ನಿದ್ದೆ ಬಾರದೆ ಇದ್ದರೆ ಹಾಸಿಗೆಯಿಂದ ಎದ್ದೇಳಿ, ಪುಸ್ತಕ ಓದಿ, ಸಂಗೀತ ಕೇಳಿ ಅಥವಾ ಸುಮ್ಮನೆ ಕುಳಿತುಕೊಳ್ಳಿ. ಮತ್ತೆ ನಿದ್ದೆ ಬರುವಾಗ ಮಲಗಿ.

„ ನಿದ್ದೆ ಮಾಡುವುದಕ್ಕೆ ಮುನ್ನ ಮನಸ್ಸನ್ನು ಕೆರಳಿಸುವಂತಹ ಅಥವಾ ಕಿರಿಕಿರಿ ಉಂಟು ಮಾಡುವಂತಹ ವಿಚಾರಗಳಲ್ಲಿ ತೊಡಗಿಕೊಳ್ಳಬೇಡಿ.

„ ಸಂಜೆ 5ರ ಬಳಿಕ ಕಾಫಿ ಅಥವಾ ಚಹಾ ಸೇವನೆ ಬೇಡ.

„ ಮಲಗುವ ಕೋಣೆಯಲ್ಲಿ ಹಿತಕರ ಉಷ್ಣತೆಯಿರಲಿ.

„ ರಾತ್ರಿಯ ವೇಳೆ ಮಲಗುವ ಕೊಠಡಿಯಲ್ಲಿ ಕತ್ತಲಿರಲಿ, ಹಾಸಿಗೆ-ಹೊದಿಕೆ, ತಲೆದಿಂಬು ಇತ್ಯಾದಿಗಳು ಹಿತಕರವಾಗಿರಲಿ.

„ ನಿದ್ದೆಗೆ ಮುನ್ನ ಪ್ರಾರ್ಥನೆ ಮಾಡಿ.

„ ನಿದ್ದೆಗೆ ಮುನ್ನ ಕೌಟುಂಬಿಕ ಸಮಸ್ಯೆಗಳು, ಆರೋಗ್ಯ ಸ್ಥಿತಿಗತಿ ಅಥವಾ ಭವಿಷ್ಯ – ಇತ್ಯಾದಿಗಳ ಬಗ್ಗೆ ಯೋಚಿಸಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಚೆನ್ನಾಗಿ ನಿದ್ದೆ ಮಾಡಿ ಮತ್ತು ಆರೋಗ್ಯವಾಗಿ, ಸಂತುಷ್ಟರಾಗಿ ಇರಿ.

-ಸಮೃದ್ಧ ಎಸ್‌. ಪ್ರಭು, ಅಸಿಸ್ಟೆಂಟ್‌ ಪ್ರೊಫೆಸರ್‌

ಮಧುರಾ ರೆಡ್ಡಿ, ಅಸಿಸ್ಟೆಂಟ್‌ ಪ್ರೊಫೆಸರ್‌, ರಿಸ್ಪಿರೇಟರಿ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರಿಸ್ಪಿರೇಟರಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ)

Advertisement

Udayavani is now on Telegram. Click here to join our channel and stay updated with the latest news.

Next