Advertisement

ಕಾಲುಗಳ ಊತ ನಿಮಗೆ ತಿಳಿಯದ ವಿಚಾರಗಳು

04:40 PM Jul 31, 2023 | Team Udayavani |

ಊತ ಅಥವಾ ಬಾವು ಒಂದು ಕಾಲಿನಲ್ಲಿ ಕಂಡುಬರಬಹುದು ಅಥವಾ ಎರಡೂ ಕಾಲುಗಳಲ್ಲಿ ಕಾಣಿಸಿಕೊಳ್ಳಬಹುದು. ಒಂದು ಕಾಲಿನ ಊತವು ಸಾಮಾನ್ಯವಾಗಿ ಸೆಲ್ಯುಲೈಟಿಸ್‌, ಬಾಧಿತ ಕಾಲಿನಲ್ಲಿ ರಕ್ತನಾಳದಲ್ಲಿ ಅಡಚಣೆ, ಆನೆಕಾಲು ಇತ್ಯಾದಿ ಸ್ಥಳೀಯ ಸಮಸ್ಯೆಗಳಿಂದ ಉಂಟಾಗಬಹುದು. ಎರಡೂ ಕಾಲುಗಳಲ್ಲಿ ಊತಕ್ಕೆ ಶಾರೀರಿಕ ಕ್ರಿಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾರಣವಾಗಿರುತ್ತವೆ. ಎರಡೂ ಕಾಲುಗಳ ಊತಕ್ಕೆ ಮೂರು ಪ್ರಧಾನ ಕಾರಣಗಳಿರುತ್ತವೆ: ಪಿತ್ಥಕೋಶ ಕಾಯಿಲೆ, ಹೃದ್ರೋಗಗಳು ಮತ್ತು ಮೂತ್ರಪಿಂಡ ಕಾಯಿಲೆಗಳು.

Advertisement

ನೊರೆಯಿಂದ ಕೂಡಿದ ಮೂತ್ರ, ಮೂತ್ರದಲ್ಲಿ ರಕ್ತದ ಅಂಶ, 35ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಅಧಿಕ ರಕ್ತದ ಒತ್ತಡ ಇತ್ಯಾದಿ ಸಹ ಸಮಸ್ಯೆಗಳು ಇದ್ದಲ್ಲಿ ಮೂತ್ರಪಿಂಡ ಕಾಯಿಲೆ ಉಂಟಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೇಹದಲ್ಲಿ ಉತ್ಪಾದನೆಯಾಗುವ ವಿಷಾಂಶಗಳ ವಿಸರ್ಜನೆ, ಚಯಾಪಚಯ ಕ್ರಿಯೆ ಮತ್ತು ದೇಹದಲ್ಲಿ ಆಮ್ಲ-ಪ್ರತ್ಯಾಮ್ಲ ಸಮತೋಲನ ಕಾಯ್ದುಕೊಳ್ಳುವ ಪ್ರಾಮುಖ್ಯ ಕೆಲಸಗಳನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ಆದ್ದರಿಂದ ಮೂತ್ರಪಿಂಡಗಳಿಗೆ ಆಗುವ ಯಾವುದೇ ಅಲ್ಪಕಾಲೀನ ಅಥವಾ ದೀರ್ಘ‌ಕಾಲೀನ ಹಾನಿಗಳ ಪರಿಣಾಮವಾಗಿ ಮೇಲೆ ಹೇಳಲಾದ ಚಟುವಟಿಕೆಗಳು ಬಾಧಿತವಾಗುತ್ತವೆ. ಮೂತ್ರಪಿಂಡ ಕಾಯಿಲೆಗಳಿದ್ದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಎರಡೂ ಕಾಲುಗಳ ಊತ.

ಎರಡೂ ಕಾಲುಗಳು ಹೀಗೆ ಊದಿಕೊಂಡಿದ್ದರೆ ಅನೇಕರು ಅದು ದೂರದ ಪ್ರಯಾಣ ಅಥವಾ ಹೆಚ್ಚು ಹೊತ್ತು ನಿಂತುಕೊಂಡದ್ದರ ಪರಿಣಾಮ ಎಂಬುದಾಗಿ ತಪ್ಪು ತಿಳಿದುಕೊಳ್ಳುತ್ತಾರೆ. ಮೂತ್ರಪಿಂಡದ ಕಾಯಿಲೆ ಇದ್ದಾಗ ಮೂತ್ರದ ಮೂಲಕ ಪ್ರೊಟೀನ್‌ ನಷ್ಟವಾಗುವುದು ಅಥವಾ ದೇಹದಲ್ಲಿ ಉಪ್ಪಿನಂಶ ಅಥವಾ ನೀರಿನಂಶ ಉಳಿದುಕೊಳ್ಳುವುದರಿಂದಾಗಿ ಕಾಲುಗಳ ಊತ ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣ ರಹಿತ ವ್ಯಕ್ತಿಯೊಬ್ಬನಲ್ಲಿ ಕಾಲುಗಳ ಊತ ಕಾಣಿಸಿಕೊಳ್ಳುವಷ್ಟು ವೇಳೆಗೆ ಮೂತ್ರಪಿಂಡಗಳಿಗೆ ಸಾಕಷ್ಟು ಹಾನಿ ಆಗಿರುತ್ತದೆ. ಈ ಚಿಹ್ನೆಯನ್ನು ಉಪೇಕ್ಷಿಸಿದರೆ ಅದರಿಂದ ಮೂತ್ರಪಿಂಡ ಕಾಯಿಲೆಯು ಉಲ್ಬಣಗೊಳ್ಳುತ್ತದೆ ಮತ್ತು ಕೊನೆಯದಾಗಿ ರೋಗಿಯು ಉಸಿರಾಟದ ತೊಂದರೆಯಿಂದಾಗಿ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಲಗಬೇಕಾಗುತ್ತದೆ ಮತ್ತು ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಯಾವುದೇ ರೀತಿಯಲ್ಲಿ ಕಾಲುಗಳ ಊತ ಕಾಣಿಸಿಕೊಂಡಿದ್ದರೂ ಮೊತ್ತಮೊದಲಿಗೆ ಮೂತ್ರಪಿಂಡಗಳಿಗೆ ತೊಂದರೆ ಉಂಟಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಮೂತ್ರಪಿಂಡ ಕಾಯಿಲೆಯನ್ನು ಶೀಘ್ರವಾಗಿ ಪತ್ತೆ ಹಚ್ಚಿದರೆ ಅದನ್ನು ನಿಯಂತ್ರಿಸಬಹುದು ಅಥವಾ ಗುಣಪಡಿಸಬಹುದು, ಅದು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಮೂತ್ರದ ಜತೆಗೆ ಪ್ರೊಟೀನ್‌ ನಷ್ಟವಾಗುತ್ತಿರುವ ಸಮಸ್ಯೆ ಇದ್ದರೆ ಅದನ್ನು ಬಹುತೇಕವಾಗಿ ಗುಣಪಡಿಸಬಹುದು ಮತ್ತು ರೋಗಿಯು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದಾಗಿದೆ.

-ಡಾ| ಭೂಷಣ್‌ ಸಿ. ಶೆಟ್ಟಿ
ಅಸಿಸ್ಟೆಂಟ್‌ ಪ್ರೊಫೆಸರ್‌, ನೆಫ್ರಾಲಜಿ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next