Advertisement

ತಿಂಗಳಾಡಿ, ಮಾಡಾವು: ವಿದ್ಯುತ್‌ ಕೈಕೊಟ್ಟರೆ ನೋ ಸಿಗ್ನಲ್‌!

11:02 AM Nov 11, 2018 | Team Udayavani |

ಕೆಯ್ಯೂರು: ಪುತ್ತೂರು ತಾಲೂಕಿನಾದ್ಯಂತ ಬಿಎಸ್ಸೆನ್ನೆಲ್‌ ಮೊಬೈಲ್‌ ನೆಟ್‌ವರ್ಕ್‌ ಸಂಪೂರ್ಣ ಹದಗೆಟ್ಟಿದೆ. ಸಮಸ್ಯೆಯನ್ನು ಸರಿಪಡಿಸಲು ನಿಗಮದ ಅಧಿಕಾರಿಗಳು ಸೋತಿದ್ದಾರೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಟವರ್‌ನಲ್ಲಿ ಸಮಸ್ಯೆಯಾದರೆ ಅಧಿಕಾರಿಗಳಿಗೆ ಆನ್‌ಲೈನ್‌ ಮೂಲಕವೇ ಸಂದೇಶ ಬರುವ ವ್ಯವಸ್ಥೆಯಿದೆ. ಆದರೂ ನೆಟ್‌ ವರ್ಕ್‌ ಸಮಸ್ಯೆ ಸರಿಪಡಿಸಿ ಎಂದು ಗ್ರಾಹಕರು ಎಷ್ಟು ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿದ್ರೆಯಲ್ಲಿರುವಂತಿದೆ.

Advertisement

ವಿದ್ಯುತ್‌ ಕೈಕೊಟ್ಟರೆ!
ಕೆದಂಬಾಡಿ ಗ್ರಾಮದ ತಿಂಗಳಾಡಿ ಮತ್ತು ಕೆಯ್ಯೂರು ಗ್ರಾಮದ ಮಾಡಾವು ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಬಿಎಸ್ಸೆನ್ನೆಲ್‌ ಸಿಮ್‌ ಬಳಕೆದಾರರು ಇದ್ದಾರೆ. ಮಾಡಾವಿನಲ್ಲಿ ಒಂದು ಟವರ್‌ ಇದೆ. ಇದು ಕೆಯ್ಯೂರು ಪ್ರದೇಶಕ್ಕೆ ನೆಟ್‌ ವರ್ಕ್‌ ಒದಗಿಸುತ್ತದೆ. ತಿಂಗಳಾಡಿಯಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದು ಒಂದೇ ಟವರ್‌. ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವ ಕಾರಣ ಈ ಟವರ್‌ ನಿಂದ ಒಂದು ಕಿ.ಮೀ.  ದೂರಕ್ಕೂ ನೆಟ್‌ವರ್ಕ್‌ ಸರಿಯಾಗಿ ಸಿಗುವುದಿಲ್ಲ. ಕಳೆದ ಕೆಲವು ತಿಂಗಳಿಂದ ಈ ಎರಡೂ ಟವರ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಇದೆ. ವಿದ್ಯುತ್‌ ಕೈಕೊಟ್ಟಾಗಲೆಲ್ಲ ಪೂರ್ತಿ ನೆಟ್‌ ವರ್ಕ್‌ ಆಫ್ ಆಗುತ್ತಿತ್ತು. ಈ ಕುರಿತು ಗ್ರಾಹಕರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ತಾತ್ಕಾಲಿಕವಾಗಿ ಸರಿಯಾಗಿತ್ತು. ಕೆಲವು ದಿನಗಳಿಂದ ಮತ್ತೆ ಅದೇ ಸಮಸ್ಯೆ ಕಾಡುತ್ತಿದೆ.

ಆಧುನಿಕ ದಿನಗಳಲ್ಲಿ ಪ್ರತಿಯೊಂದು ವ್ಯವಹಾರವೂ ಮೊಬೈಲ್‌ ಮೂಲಕವೇ ಆಗುತ್ತಿದೆ. ಹಣ ಕಳುಹಿಸುವಲ್ಲಿಂದ ಹಿಡಿದು ದಾಖಲೆಗಳನ್ನು ಸರಿಪಡಿಸುವವರೆಗೆ ಎಲ್ಲದಕ್ಕೂ ಮೊಬೈಲ್‌ ಅವಲಂಬನೆ ಇದೆ. ತಿಂಗಳಾಡಿಯಲ್ಲಿರುವ ಮೊಬೈಲ್‌ ಟವರ್‌ 3ಜಿ ನೆಟ್‌ವರ್ಕ್‌ ಹೊಂದಿದ್ದು, ಗ್ರಾಮೀಣ ಜನರಿಗೆ ಪ್ರಯೋಜನಕಾರಿಯೂ ಆಗಿದೆ. ಆದರೆ, ಎರಡು ತಿಂಗಳಿಂದ ನೆಟ್‌ವರ್ಕ್‌ ಸರಿಯಾಗಿ ಸಿಗದೆ ಹಾಗೂ ವಿದ್ಯುತ್ತಿಲ್ಲದೇ ಇರುವಾಗ ಪೂರ್ತಿಯಾಗಿ ಕೈಕೊಟ್ಟು ತೊಂದರೆಯಾಗುತ್ತಿದೆ.

ಜನರೇಟರ್‌ ಹಾಕುವವರೇ ಇಲ್ಲ!
ಪ್ರತಿಯೊಂದು ಟವರ್‌ಗೂ ಜನರೇಟರ್‌ ವ್ಯವಸ್ಥೆ ಇದೆ. ತಿಂಗಳಾಡಿ, ಮಾಡಾವು ಟವರ್‌ಗೂ ಜನರೇಟರ್‌ ಇದೆ. ಆದರೆ ವಿದ್ಯುತ್‌ ಹೋದಾಗ ಜನರೇಟರ್‌ ಚಾಲೂ ಮಾಡುವವರೇ ಇಲ್ಲ. ತಿಂಗಳಾಡಿ ಟವರ್‌ನಿಂದ 100 ಮೀಟರ್‌ ದೂರದಲ್ಲಿ, ಮಾಡಾವು ಟವರ್‌ನಿಂದ 500 ಮೀಟರ್‌ ದೂರದಲ್ಲಿ ಬಿಎಸ್ಸೆನ್ನೆಲ್‌ ಎಕ್ಸ್‌ಚೇಂಜ್‌ ಕೇಂದ್ರವಿದ್ದರೂ ಅಲ್ಲಿನ ಸಿಬಂದಿಗೆ ಟವರ್‌ನ ಬಗ್ಗೆ ಕಾಳಜಿಯೇ ಇಲ್ಲ ಎನ್ನುವುದು ಗ್ರಾಹಕರ ಆರೋಪ. ಕರೆಂಟ್‌ ಇದ್ದರೆ ನೆಟ್‌ವರ್ಕ್‌, ಇಲ್ಲದಿದ್ದರೆ ಇಲ್ಲ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ. ಹೀಗಾಗಿ, ಗ್ರಾಹಕರು ಅನ್ಯ ಕಂಪೆ‌ನಿಗಳಿಗೆ ಪೋರ್ಟ್‌ ಆಗಲು ಮುಂದಾಗಿದ್ದಾರೆ.

ಸರಿಪಡಿಸುತ್ತಿಲ್ಲ
ವಿದ್ಯುತ್‌ ಕೈಕೊಟ್ಟರೆ ಸಿಗ್ನಲ್‌ ಕೂಡ ಆಫ್ ಆಗುವ ಸಮಸ್ಯೆ ಹಿಂದೊಮ್ಮೆ ಇತ್ತು. ಈಗ ಒಂದು ತಿಂಗಳಿಂದ ಮತ್ತೆ ಸಮಸ್ಯೆಯಾಗುತ್ತಿದೆ. ಟವರ್‌ನಲ್ಲಿರುವ ದೋಷದ ಕುರಿತು ಅಧಿಕಾರಿಗಳಿಗೆ ನಾವು ಹೇಳಬೇಕಾಗಿಲ್ಲ. ಅವರಿಗೆ ತಾನಾಗಿಯೇ ತಿಳಿಯುತ್ತದೆ. ಆದರೂ ಸರಿಪಡಿಸುತ್ತಿಲ್ಲ.
– ರಫೀಕ್‌ ನಂಜೆ
ವ್ಯಾಪಾರಿ

Advertisement

ಗೋಪಾಲಕೃಷ್ಣ ಸಂತೋಷ್‌ನಗರ 

Advertisement

Udayavani is now on Telegram. Click here to join our channel and stay updated with the latest news.

Next