ಕೆಯ್ಯೂರು: ಎಲ್ಲ ಸೇವೆಗಳೂ ಗ್ರಾಮೀಣ ಪ್ರದೇಶಕ್ಕೆ ಸಿಗಬೇಕೆಂಬ ದೃಷ್ಟಿಯಿಂದ ಸರಕಾರ ಗ್ರಾಮೀಣ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಕಚೇರಿ, ಸೇವಾ ಕೇಂದ್ರಗಳನ್ನು ತೆರೆಯುತ್ತದೆ. ಆದರೆ, ಕ್ರಮೇಣ ಅವು ಸರಿಯಾಗಿ ಕಾರ್ಯ ನಿರ್ವಹಿಸದೆ ಉದ್ದೇಶವೂ ಈಡೇರದೆ ಉಪಯೋಗ ಶೂನ್ಯವಾಗುತ್ತವೆ.
ಕೆದಂಬಾಡಿ ಗ್ರಾ.ಪಂ. ವ್ಯಾಪ್ತಿಯ ತಿಂಗಳಾಡಿಯಲ್ಲಿರುವ ಪಶುವೈದ್ಯ ಕೇಂದ್ರ ಇದಕ್ಕೆ ನಿದರ್ಶನ. ಹಲವು ತಿಂಗಳಿಂದ ಈ ಕೇಂದ್ರಕ್ಕೆ ಪಶುವೈದ್ಯರು ಬರುತ್ತಿಲ್ಲ. ಸಾಕುಪ್ರಾಣಿಗಳಿಗೆ ಆರೋಗ್ಯ ಸೇವೆ ಸಿಗದೆ ರೈತರೂ ಈ ಕಡೆಗೆ ಮುಖ ಮಾಡುತ್ತಿಲ್ಲ. ಹೀಗಾಗಿ, ಈ ಪಶುವೈದ್ಯ ಕೇಂದ್ರ ಈಗ ಬಾಗಿಲು ಮುಚ್ಚಿದೆ.
ಕುಂಬ್ರ, ಕೆಯ್ಯೂರು, ಮಾಡಾವು, ಕಟ್ಟತ್ತಾರು, ಪಾಲ್ತಾಡು, ಕಣಿಯಾರು, ಕೂಡುರಸ್ತೆ, ತೆಗ್ಗು, ಕೆದಂಬಾಡಿ, ಬಾಳಾಯ ಮೊದಲಾದ ಪ್ರದೇಶಗಳ ಸಾಕು ಪ್ರಾಣಿಗಳಿಗೆ ಅನಾರೋಗ್ಯ ಉಂಟಾದರೆ ಔಷಧ ಹಾಗೂ ಚಿಕಿತ್ಸೆಗೆ ಈ ಪಶು ಚಿಕಿತ್ಸಾ ಕೇಂದ್ರಕ್ಕೆ ಆಗಮಿಸುತ್ತಿದ್ದರು.
ಈಗ ಕೇಂದ್ರ ಮುಚ್ಚಿರುವುದರಿಂದ ಅವರು ಪುತ್ತೂರಿಗೆ ಹೋಗುವುದು ಅನಿವಾರ್ಯವಾಗಿದೆ. ಇದು ಸಮಯ, ಶ್ರಮ ಹಾಗೂ ಹಣ ವ್ಯಯಕ್ಕೆ ಕಾರಣವಾಗುತ್ತಿದೆ. ಹಸುಗಳಿಗೆ ಪ್ರಸವ ವೇದನೆ ಉಂಟಾದಲ್ಲಿ, ಜ್ವರ ಇತ್ಯಾದಿ ಕಾಯಿಲೆಗಳು ಬಂದಲ್ಲಿ ಪಶುವೈದ್ಯರ ಸೇವೆ ಅಗತ್ಯವಿರುತ್ತದೆ. ಸಮೀಪದಲ್ಲೇ ಇರುವ ಪಶು ವೈದ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ನೊಂದು ನುಡಿಯುತ್ತಿದ್ದಾರೆ.
ಪೆರ್ಲಂಪಾಡಿ ಹಾಗೂ ತಿಂಗಳಾಡಿ ಪಶು ವೈದ್ಯಕೇಂದ್ರಕ್ಕೆ ವಾರದಲ್ಲಿ ಮೂರು ದಿನ ಒಬ್ಬರು ಪಶು ವೈದ್ಯಾಧಿಕಾರಿ ಕರ್ತವ್ಯದಲ್ಲಿ ಇರುತ್ತಿದ್ದರು. ತುರ್ತು ಸಂದರ್ಭಗಳಲ್ಲಿ ರೈತರ ಸಂಪರ್ಕಕ್ಕೂ ಸಿಗುತ್ತಿದ್ದರು. ಆದರೆ, ಮೂರು ತಿಂಗಳಿಂದ ಈ ಪಶುವೈದ್ಯ ಕೇಂದ್ರ ಬೀಗ ಹಾಕಿದ್ದರಿಂದ ಹೈನುಗಾರರಿಗೆ ಸಮಸ್ಯೆಯಾಗಿದೆ. ವೈದ್ಯ ಕೇಂದ್ರಕ್ಕೆ ಕೂಡಲೇ ಪಶು ವೈದ್ಯಾಧಿಕಾರಿಯನ್ನು ನೇಮಿಸಿ. ಗ್ರಾಮೀಣ ಭಾಗಕ್ಕೂ ಪಶುಸಂಗೋಪನ ಇಲಾಖೆಯ ಸೇವೆ ದೊರಕುವಂತೆ ಸಂಬಂಧಪಟ್ಟವರು ಮಾಡಬೇಕಿದೆ ಎಂಬುದು ಗ್ರಾಮಸ್ಥರ ಆಶಯ
ವೈದ್ಯಾಧಿಕಾರಿ ನೇಮಿಸಲಿ
ಇಲಾಖೆ ಅದಷ್ಟು ಬೇಗ ಪಶು ವೈದ್ಯಾಧಿಕಾರಿಯನ್ನು ನೇಮಕ ಮಾಡಲಿ, ಇದರಿಂದ ಬಹು ಬೇಗನೆ ಜನರ ಸಮಸ್ಯೆ ನಿವರಣೆಯಾಗಬಹುದು. ನನ್ನಿಂದ ಆದಷ್ಟು ಪ್ರಯತ್ನ ಪಡುತ್ತೇನೆ.
–
ಪ್ರವೀಣ್ ಶೆಟ್ಟಿ,
ಕೆದಂಬಾಡಿ ಗ್ರಾ.ಪಂ.ಅಧ್ಯಕ್ಷ
ಎರಡೂ ಕಡೆ ಕಷ್ಟ
ಕೌಡಿಚ್ಚಾರ್ ಮತ್ತು ತಿಂಗಳಾಡಿ ಪಶು ವೈದ್ಯಕೀಯ ಕೇಂದ್ರಗಳಲ್ಲಿ ಎರಡೂ ಕಡೆ ಕಾರ್ಯ ನಿರ್ವಹಿಸುವುದು ಕಷ್ಟ. ಹೀಗಾಗಿ, ವಾರದಲ್ಲಿ ಎರಡು ದಿವಸ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಯಾವ ಸಮಯದಲ್ಲಿ ಕರೆ ಮಾಡಿದರೂ ಜನರ ಸಮಸ್ಯೆಗೆ ನೆರವಾಗುತ್ತೇನೆ. ಪಶು ಆರೋಗ್ಯಕ್ಕಾಗಿ ನಿರಂತರ ಶ್ರಮಿಸುತ್ತಿದ್ದೇವೆ.
– ವೀರಪ್ಪ, ಹಿ. ಪಶುವೈದ್ಯಕೀಯ
ಪರೀಕ್ಷಕರು, ಕೌಡಿಚ್ಚಾರು
ಗೋಪಾಲಕೃಷ್ಣ ಸಂತೋಷ್ ನಗರ