ಮುಧೋಳ: ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಜನರ ಕುಂದುಕೊರತೆ, ಕಷ್ಟಕಾರ್ಪಣ್ಯಗಳ ಬಗ್ಗೆ ಖುದ್ದಾಗಿ ಪರಿಶೀಲಿಸದೇ ವೈಮಾನಿಕ ಸಮೀಕ್ಷೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದನ್ನು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಲೇವಡಿ ಮಾಡಿದರು.
ತಾಲೂಕಿನ ವಿವಿಧ ಬ್ಯಾರೇಜ್‌ಗಳು, ಪ್ರವಾಹ ಪೀಡಿತವಾಗಲಿರುವ ಗ್ರಾಮಗಳು ಹಾಗೂ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆಯ ಗುಂಗಿನಲ್ಲಿರುವ ಮುಖ್ಯಮಂತ್ರಿಗಳಿಗೆ ಜನಸಾಮಾನ್ಯರ ನೋವು ಕಣ್ಣಿಗೆ ಕಾಣುತ್ತಿಲ್ಲ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಜನತೆ ಈಗ ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಮುಖ್ಯಮಂತ್ರಿಗಳು ಪರಿಸ್ಥಿತಿಯ ತೀವ್ರತೆ ಮರೆತು ದೆಹಲಿಗೆ ತೆರಳಿರುವುದು ದುರದೃಷ್ಟಕರ ಸಂಗತಿ ಎಂದರು.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೋಯ್ನಾ ಆಣೆಕಟ್ಟಿನಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹರಿಬಿಡಲಾಗುತ್ತಿದ್ದು, ಇದರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಬೆಳಗಾವಿ
ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್ ಜಲಾಶಯ ತುಂಬಿದೆ. ಹೆಚ್ಚುವರಿ ನೀರನ್ನು ಘಟಪ್ರಭಾ ನದಿಗೆ ಬಿಡಲಾಗಿದೆ. ಈಗ 16 ಗ್ರಾಮಗಳು ನೆರೆಹಾವಳಿಗೆ ತುತ್ತಾಗಲಿವೆ ಎಂದು ಅಂದಾಜಿಸಲಾಗಿದ್ದರೂ ಇನ್ನೂ ಹೆಚ್ಚಿನ ಗ್ರಾಮಗಳು ಪ್ರವಾಹಕ್ಕೀಡಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಚನ್ನಾಳ, ಮಿರ್ಜಿ, ಒಂಟಗೋಡಿ, ಮಳಲಿ, ಕಸಬಾಜಂಬಗಿ, ತಿಮ್ಮಾಪುರ, ಢವಳೇಶ್ವರ, ನಂದಗಾಂವ, ಮಲ್ಲಾಪುರ, ಜಾಲಿಬೇರ, ಇಂಗಳಗಿ, ಮಾಚಕನೂರ, ಆಲಗುಂಡಿ ಬಿಕೆ ಸೇರಿದಂತೆ ಅನೇಕ ನದಿಪಾತ್ರದ ಗ್ರಾಮಗಳು ಪ್ರವಾಹಕ್ಕೀಡಾಗಲಿವೆ. ಅಲ್ಲದೇ ಮುಧೋಳ ನಗರದ ಕುಂಬಾರ ಓಣಿ, ಕಾಂಬಳೆ ಗಲ್ಲಿ ಸೇರಿದಂತೆ ಇನ್ನುಳಿದ ತೆಗ್ಗು ಪ್ರದೇಶಗಳಿಗೂ ನೀರು ನುಗ್ಗುವ ಅಪಾಯವಿದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ನಾಯಕ, ರಾಜುಗೌಡ ಪಾಟೀಲ, ಉದಯ, ಸದುಗೌಡ ಪಾಟೀಲ ಉಪಸ್ಥಿತರಿದ್ದರು.