ಸುರಪುರ: ಸಂತರ, ಶರಣರ, ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಶರಣಬಸವೇಶ್ವರ ಜೀವನ ಚರಿತ್ರೆ ಕೇಳುವುದೇ ಒಂದು ಪಾವನ.
ನಾವು ಮಾಡುವ ಪ್ರತಿಯೊಂದು ಕಾಯಕದೊಂದಿಗೆ ಇವರ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಇಂಡಿ ತದ್ದೇವಾಡಿ ಮಠದ ಮಹಾಂತೇಶ ಸ್ವಾಮಿ ಹಿರೇಮಠ ಹೇಳಿದರು.
ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ 15ನೇ ವರ್ಷದ ಶರಣಬಸವೇಶ್ವರ ಪುರಾಣ ಪ್ರವಚನ ಮತ್ತು ಸಂತರಿಂದ ಸದ್ಭಾವ ಚಿಂತನಾ ಸಮಾರೋಪ ಸಮಾರಂಭ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶರಣ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.
ಶರಣಬಸವೇಶ್ವರ ದಾಸೋಹ ಸೇವೆ ಶ್ರೇಷ್ಠ. ಅವರ ಜೀವನದ ಆದರ್ಶಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಅದರಂತೆ ನಡೆದುಕೊಂಡಾಗ ಸಮಾಜದಲ್ಲಿ ಸಾಮರಸ್ಯ ಹೆಚ್ಚಿ ಸಂತರ, ಶರಣರ ಚಿಂತನೆಗಳನ್ನು ಪಾಲಿಸಿದಂತಾಗುತ್ತದೆ. ಪುರಾಣ ಎಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದು. ಕೀರ್ತನಾ ಮತ್ತು ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯನಲ್ಲಿ ಒಳ್ಳೆಯ ವಿಚಾರಗಳು ಮೂಡುತ್ತವೆ ಎಂದರು.
ಆಕಾಶವಾಣಿ ಕಲಾವಿದ ಶರಣಕುಮಾರ ಜಾಲಹಳ್ಳಿ ಮಾತನಾಡಿ, ಕಳೆದ 15 ವರ್ಷಗಳಿಂದ ಗುಮ್ಮಾ ಪರಿವಾರದವರು ಕಲಬುರಗಿಯ ಮಹಾ ದಾಸೋಹಿ ಶರಣ ಬಸವೇಶ್ವರರ ಪುರಾಣ ಪ್ರವಚನ ಹಮ್ಮಿಕೊಂಡು ಬುರುತ್ತಿರುವುದು ಶ್ಲಾಘನೀಯ. ಮಠ-ಮಾನ್ಯಗಳು ಮಾಡುವ ಕಾರ್ಯವನ್ನು ಗುಮ್ಮಾ ಪರಿವಾರದವರು ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿ.ಲಕ್ಷ್ಮಣ ಗುತ್ತೇದಾರ, ಪತ್ರಕರ್ತ ಸಿದ್ದಯ್ಯ ಪಾಟೀಲ, ಅಮರಯ್ಯಸ್ವಾಮಿ ಹಿರೇಮಠ ಜಾಲಿಬೆಂಚಿ, ಶರಣುಕುಮಾರ ಜಾಲಹಳ್ಳಿ, ರಾಚಣ್ಣ ಕುಂಬಾರ ಐವರಿಗೆ ದೇವಸ್ಥಾನ ವತಿಯಿಂದ ಪ್ರಥಮ ಬಾರಿಗೆ ಶರಣ
ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ತಾಲೂಕು ವೀರಶೈವ-ಲಿಂಗಾಯತ ಸಮಾಜದ ಅಧ್ಯಕ್ಷ ಸುರೇಶ ಸಜ್ಜನ್, ಶರಣಪ್ಪ ಗುಮ್ಮಾ ಸೇರಿದಂತೆ ಭಕ್ತರು ಇದ್ದರು. ರಾಚಯ್ಯಸ್ವಾಮಿ ಕಲ್ಲೂರಮಠ ಪುರಾಣ ಪ್ರವಚನ ಸಂಪನ್ನಗೊಳಿಸಿದರು. ಅಪ್ಪಾಸಾಬ್ ನದಾಫ್ ತಬಲಾ ಸಾಥ್ ನೀಡಿದರು. ಅಮರೇಶ ಗೋಗಿ ನಿರೂಪಿಸಿ, ವಂದಿಸಿದರು.