Advertisement

ಜಮ್ಮುವಿನಲ್ಲಿ ನಿರ್ಮಾಣವಾಗಲಿದೆ ತಿಮ್ಮಪ್ಪನ ದೇಗುಲ

10:26 AM Feb 14, 2020 | sudhir |

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ತಿರುಪತಿ ತಿಮ್ಮಪ್ಪನ ಮಾದರಿ ದೇಗುಲ ನಿರ್ಮಾಣವಾಗಲಿದೆ. ಅದಕ್ಕಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಟಿಟಿಡಿ ಟ್ರಸ್ಟ್‌ಗೆ 100 ಎಕರೆ ಜಮೀನು ನೀಡಲು ತಾತ್ವಿಕವಾಗಿ ಸಮ್ಮತಿ ಸೂಚಿಸಿದೆ.

Advertisement

ಜಮ್ಮುವಿನಿಂದ ಕಟ್ರಾಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಜಮೀನು ನೀಡುವ ಸಾಧ್ಯತೆಗಳಿವೆ. ಒಟ್ಟು ಎರಡು ಪ್ರದೇಶಗಳಲ್ಲಿ ಸ್ಥಳ ಗುರುತು ಮಾಡಲಾಗಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ನ ಸಂಸದ ವಿಜಯ ಸಾಯಿ ರೆಡ್ಡಿ ಹೇಳಿದ್ದಾರೆ. ಜಮೀನು ಲಭಿಸಿದ ಎರಡು ವರ್ಷಗಳ ಅವಧಿಯಲ್ಲಿ ತಿರುಪತಿ ತಿಮ್ಮಪ್ಪನ ಮಾದರಿ ದೇಗುಲ ನಿರ್ಮಾಣ ಮಾಡುವ ಗುರಿ ಹಾಕಿಕೊಂಡಿದೆ. ವೈಷ್ಣೋದೇವಿ ದೇಗುಲಕ್ಕೆ ಹೋಗುವ ದಾರಿಯಲ್ಲಿಯೇ ಹೊಸ ದೇಗುಲ ನಿರ್ಮಾಣವಾಗಲಿದೆ.

ವೆಚ್ಚ ಯಾರದ್ದು?
ಯೋಜನೆಗೆ ಬೇಕಾಗಿರುವ ಸಂಪೂರ್ಣ ಹಣಕಾಸಿನ ನೆರವನ್ನು ಟಿಟಿಡಿ ಟ್ರಸ್ಟ್‌ ಪೂರೈಸಲಿದೆ ಎಂದಿದ್ದಾರೆ ವಿಜಯ ಸಾಯಿ ರೆಡ್ಡಿ. ಜಮ್ಮುವಿನಿಂದ ಕಟ್ರಾಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಧುಮ್ಮಿ ಮತ್ತು ಮಜಿನ್‌ ಎಂಬಲ್ಲಿ ದೇಗುಲ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಎರಡು ಸ್ಥಳಗಳ ಪೈಕಿ ಒಂದರಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ.

ದೇಗುಲ ಮಾತ್ರವಲ್ಲ
ಒಂದು ನೂರು ಎಕರೆ ಜಮೀನಿನಲ್ಲಿ ಕೇವಲ ತಿಮ್ಮಪ್ಪನ ದೇಗುಲ ಮಾತ್ರ ನಿರ್ಮಾಣವಾಗುವುದಿಲ್ಲ. ವೇದ ವಿಜ್ಞಾನ ಗಳಿಗೆ ಸಂಬಂಧಿಸಿದ ಪಾಠಶಾಲೆ, ಆಸ್ಪತ್ರೆಯನ್ನೂ ನಿರ್ಮಿಸ ಲಾಗುತ್ತದೆ ಎಂದು ವಿಜಯ ಸಾಯಿ ರೆಡ್ಡಿ ಹೇಳಿದ್ದಾರೆ.

ದೀರ್ಘ‌ ಕಾಲದ ಯೋಜನೆ
ಉತ್ತರ ಭಾರತದ ಪ್ರವಾಸಿಗರಿಗೆ ತಿರುಪತಿಗೆ ಭೇಟಿ ನೀಡುವ ಪ್ರಯಾಸ ತಪ್ಪಿಸುವ ನಿಟ್ಟಿನಲ್ಲಿ ಬಹಳ ಹಿಂದೆಯೇ ದೇಗುಲ ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಜಮ್ಮು ಈಗ ಶಾಂತಿಯುತ ಪ್ರದೇಶ. ಅಲ್ಲೀಗ ಯಾವುದೇ ಅನುಚಿತ ಘಟನೆಗಳು ನಡೆಯುತ್ತಿಲ್ಲ ಎಂದು ರೆಡ್ಡಿ ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next