Advertisement
· ನಾವು ಉಳ್ಕೊಂಡಿದ್ದ ಹೋಟೆಲ್ ಅರಮನೆಯಂಗಿತ್ತು. ಇದೇನಪ್ಪಾ ಹೀಗಿದೆ? ಊಟ-ತಿಂಡಿ ಹೇಗಿರ್ತದೋ ಅಂತ ಯೋಚಿಸ್ತಿದ್ದೆ..· ರಾಷ್ಟ್ರಪತಿಗಳು ನಮಸ್ಕಾರ ಮಾಡಿ ನನ್ನತ್ತ ಬಾಗಿದಾಗ, ನಾನೂ ಅವರ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿದೆ. ಅವರ ನಮಸ್ಕಾರಕ್ಕೆ ನಾನು ಗೌರವ ತೋರಿದ ರೀತಿ ಅದು
· ಡೆಲ್ಲಿಯಿಂದ ಬರುವ ಮೊದಲು, ರಾಷ್ಟ್ರಪತಿ ಭವನದ ಆವರಣದಲ್ಲಿ ಒಂದು ಗಿಡ ನೆಟ್ಟು ಬಂದೆ…
Related Articles
Advertisement
ಅದು ನನ್ನ ಮೊದಲ ವಿಮಾನ ಪ್ರಯಾಣವೇನಲ್ಲ. ಹಾಗಾಗಿ, ಅಷ್ಟೇನೂ ಭಯ ಆಗ್ಲಿಲ್ಲ. ಬಸ್ಸು, ಕಾರಲ್ಲಿ ಹೆಂಗೆ ಪ್ರಯಾಣ ಮಾಡ್ತೀನೋ, ಹಾಗೇ ಪ್ರಯಾಣ ಮಾಡಿದೆ. ಹಾಗೆ ನೋಡಿದ್ರೆ, ವಿಮಾನದಲ್ಲಿ ಹೋಗೋದೇ ಸುಲಭ. ಎರಡು- ಎರಡೂವರೆ ಗಂಟೆಯೊಳಗೆ ಡೆಲ್ಲಿಯಲ್ಲಿದ್ದೆವು.
ಡೆಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ಕಾರು ರೆಡಿ ಇತ್ತು. ಸ್ವಲ್ಪ ಹೊತ್ತಲ್ಲಿ ಒಂದು ದೊಡ್ಡ ಕಟ್ಟಡದ ಎದುರು ಕಾರು ನಿಲ್ಲಿಸಿದರು. ಅದೇ ಕಟ್ಟಡದೊಳಗೆ ನಾವು ನಾಲ್ಕು ದಿನ ಬಾಡಿಗೆಗೆ ಇದ್ದೆವು. ಉಮೇಶ ಹೇಳಿದ ಅದು, ಫೈವ್ ಸ್ಟಾರ್ ಹೋಟೆಲ್ ಅಂತ. “ಅಶೋಕ ಹೋಟೆಲ್’ ಅಂತ ಅದ್ರ ಹೆಸರು. ಡೆಲ್ಲಿಯಲ್ಲಿ ಆ ಹೋಟೆಲ್ ಭಾರೀ ಫೇಮಸ್ ಅಂತಪ್ಪ. ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೆಲ್ಲಾ ಸರ್ಕಾರದವರೇ ಮಾಡಿದ್ದು. ಎಲ್ಲ ಪ್ರಶಸ್ತಿ ಪುರಸ್ಕೃತರೂ ಅಲ್ಲೇ ಉಳಿದುಕೊಂಡಿದ್ದರು. ಅಬ್ಟಾ, ಆ ಹೋಟೆಲ್ ಜಗಮಗಿಸೋ ಅರಮನೆ ಥರ ಇತ್ತು. ಕೇಳಿದ್ದನ್ನೆಲ್ಲ ತಂದುಕೊಡೋಕೆ ಆಳುಗಳೂ ಇದ್ದರು. ಅದನ್ನೆಲ್ಲ ನೋಡಿ ಸ್ವಲ್ಪ ಕಸಿವಿಸಿ ಆಯ್ತು. ಏನಪ್ಪಾ ಹೀಗಿದೆ, ಇಲ್ಲಿ ಊಟ, ತಿಂಡಿ ಹೇಗಿರುತ್ತೋ, ಏನೋ ಅಂತ ಯೋಚಿಸ್ತಿದ್ದೆ. ಯಾಕಂದ್ರೆ, ನಾನು ತಿನ್ನೋದು ರಾಗಿ ಮುದ್ದೆ, ಬಸ್ಸಾರು. ಈ ಡೆಲ್ಲಿಯವರು ಅದೇನು ತಿಂತಾರೋ ನಂಗೊತ್ತಿಲ್ಲ. ಆದ್ರೆ, ಅವರು ಆ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಿದ್ದರು. ಊಟದ ಮೆನುವಿನಲ್ಲಿ ನನಗಾಗಿ ರಾಗಿಮುದ್ದೆಯನ್ನೂ ಸೇರಿಸಿದ್ದರು. ಆರಾಮಾಗಿ ಮುದ್ದೆ ತಿಂದುಕೊಂಡಿದ್ದೆ.
ಮಾರನೆ ದಿನ, ಅಂದ್ರೆ ಮಾ. 15ರಂದು ಹೋಟೆಲ್‌ನಲ್ಲಿ ನಮಗಾಗಿ ಟೀ ಪಾರ್ಟಿ ಏರ್ಪಾಡಾಗಿತ್ತು. ಎಲ್ಲ ಪ್ರಶಸ್ತಿ ಪುರಸ್ಕೃತರನ್ನು ಕರೆದು, ಚಹಾಕೂಟದ ನೆಪದಲ್ಲಿ ಗೌರವಿಸೋದು ಶಿಷ್ಟಾಚಾರವಂತೆ. ಅದನ್ನು ಏರ್ಪಾಡು ಮಾಡಿದ್ದು ಗೃಹ ಸಚಿವ ರಾಜನಾಥ ಸಿಂಗ್. ನಂಗೆ ಅವರ ಹೆಸರನ್ನೆಲ್ಲ ಹೇಳಿದ್ದು ಉಮೇಶನೇ. ಆ ಪಾರ್ಟಿಗೆ ಗಣ್ಯ ವ್ಯಕ್ತಿಗಳೆಲ್ಲ ಬಂದಿದ್ದರು. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಕಿರಿಯ ಸಾಧಕರೂ ಇದ್ದರು. ಟಿವಿಯಲ್ಲಿ ಕೇಳಿ, ನೋಡಿ ಗೊತ್ತಿದ್ದ ಗಣ್ಯರೆಲ್ಲಾ ಅವತ್ತು ಅಲ್ಲಿ ಸೇರಿದ್ದರು. ನಮ್ಮ ಸಾಧನೆಗಳನ್ನು ದೊಡ್ಡವರು ಶ್ಲಾ ಸಿದರು. ತುಂಬಾ ಅಚ್ಚುಕಟ್ಟಾಗಿ ಆ ಚಹಾಕೂಟ ನಡೆಯಿತು.
ಡೆಲ್ಲಿಯಲ್ಲಿ ನೋಡಲೇಬೇಕಾದ ಸುಮಾರು ಜಾಗಗಳಿವೆಯಂತಲ್ಲ. ನಮ್ಮ ಜೊತೆ ಬಂದಿದ್ದವರೆಲ್ಲ ಅವತ್ತು ಅಲ್ಲಿಗೆಲ್ಲ ಹೋಗಿ ಬಂದ್ರು. ಡೆಲ್ಲಿ ಅಂದ್ರೆ ತಾಜ್‌ಮಹಲ್ ಅಂದ್ಕೊಂಡಿದ್ದೆ ನಾನು. ಆದ್ರೆ ಅದು ಕೂಡ 200 ಕಿಲೋಮೀಟರ್ ದೂರ ಅಂತಲ್ಲ! ನಂಗೆ ಅಷ್ಟೆಲ್ಲಾ ದೂರ ಹೋಗೋಕೆ ಆಗಲ್ಲ. ಹಾಗಾಗಿ, ನಾನೂ ಉಮೇಶನೂ ಹತ್ತಿರದ ಕುತುಬ್ ಮಿನಾರ್‌ಗೆ ಹೋಗಿದ್ವಿ ಅಷ್ಟೆ. ಗಾಲಿ ಖುರ್ಚಿಯಲ್ಲಿ ಕೂರಿಸಿ ಕರೆದೊಯ್ದ. ಪರವಾಗಿಲ್ಲ ಡೆಲ್ಲಿಯೂ ಹಸುರಾಗಿದೆ. ಆದ್ರೆ, ಬಿಸಿಲು ಇದ್ದಿದ್ರಿಂದ ಕಪ್ಪು ಕನ್ನಡಕ ಹಾಕ್ಕೊಂಡಿದ್ದೆ. ಈಗೆಲ್ಲ ಅದೇ ಸ್ಟೈಲ್ ಅಲ್ವ? ಕುತುಬ್ ಮಿನಾರ್ ಎದುರು ನಿಂತು ಮಗನ ಜೊತೆ ಫೋಟೊನೂ ತೆಗೆಸಿಕೊಂಡೆ.
ಮುಖ್ಯ ಸಮಾರಂಭ ನಡೆದಿದ್ದು ಮಾ. 16ರಂದು. ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದಿತ್ತು. ಅವತ್ತು ನಾವಿದ್ದಲ್ಲಿಗೇ ಕಾರು ಕಳಿಸಿದ್ದರು. ಹೋಟೆಲ್‌ನಿಂದ ಕಾರಿನಲ್ಲಿ ಹೋಗಿ, ದರ್ಬಾರ್ ಹಾಲ್‌ನಲ್ಲಿ ಕುಳಿತೆವು. ಗಣ್ಯರು, ಪ್ರಶಸ್ತಿ ಪುರಸ್ಕೃತರು, ಅವರ ಕುಟುಂಬದವರು, ಮಾಧ್ಯಮದವರು ಹೀಗೆ ಪಂಕ್ತಿ ಪಂಕ್ತಿಗಳಲ್ಲಿ ಜನ ಕುಳಿತಿದ್ದರು. ನಮಗೆ ನಿಗದಿಯಾಗಿದ್ದ ಜಾಗದಲ್ಲಿ ಕುಳಿತ ಸ್ವಲ್ಪ ಹೊತ್ತಲ್ಲೇ ಸಮಾರಂಭ ಶುರುವಾಯಿತು. ಪ್ರಧಾನಿ ಮೋದಿಯವರೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ವೇದಿಕೆ ಮೇಲಿದ್ದವರು, ಒಬ್ಬೊಬ್ಬರ ಹೆಸರನ್ನೇ ಹಿಂದಿಯಲ್ಲಿ ಕರೆಯತೊಡಗಿದರು. ಆಗ ಅವರು ವೇದಿಕೆಯ ಮೇಲೆ ಬಂದು ಪ್ರಶಸ್ತಿ ಸ್ವೀಕರಿಸತೊಡಗಿದರು. ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಹೀಗೆ ಯಾರಿಗೆ ಯಾವ ಪುರಸ್ಕಾರ ಮತ್ತು ಅವರ ಸಾಧನೆಯೇನು ಅಂತಲೂ ಹೇಳುತ್ತಿದ್ದರು. ಆಗ ನೆರೆದವರಿಂದ ಚಪ್ಪಾಳೆಯೋ, ಚಪ್ಪಾಳೆ.
ಸ್ವಲ್ಪ ಹೊತ್ತಿನ ನಂತರ ನನ್ನ ಸರದಿ ಬಂತು. ವೇದಿಕೆಯಲ್ಲಿದ್ದವರು, “ಸಾಲುಮರದ ತಿಮ್ಮಕ್ಕ, ಸಮಾಜಸೇವ’ ಅಂತ ನನ್ನ ಹೆಸರನ್ನು ಹಿಂದಿಯಲ್ಲಿ ಕರೆದರು. ಆಗ ನಾನು ನಿಧಾನ ಎದ್ದು, ವೇದಿಕೆಯತ್ತ ಹೋದೆ. ವಯಸ್ಸಾಗಿದೆಯಲ್ಲಾ, ಬೇರೆಯವರಿಗಿಂತ ನಿಧಾನವಾಗಿ ನಡೆಯುತ್ತಿದ್ದೆ. ಆಗ ಬಿಳಿ ಸಮವಸ್ತ್ರದವನೊಬ್ಬ ಬಂದು ಕೈ ಹಿಡಿದು, ನನಗೆ ನೆರವಾದ. ಮುಂದೆ, ಮೋದಿಯವರೆಲ್ಲ ಕುಳಿತಿದ್ದರು ಅಂದ್ನಲ್ಲ, ಅದೇ ಸಾಲಿನ ಎದುರು ನಡೆದುಕೊಂಡು ವೇದಿಕೆಯತ್ತ ಸಾಗಿದೆ. ಅವರೆಲ್ಲ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು. ನೂರಾರು ಕ್ಯಾಮೆರಾಗಳ ಮಿಂಚು ನನ್ನ ಮೇಲೆ! ವೇದಿಕೆಯ ಎದುರು ಬಂದಾಗ, ಎರಡೂ ಕೈ ಜೋಡಿಸಿ ನಡೆದು ಹೋದೆ. ನಮ್ಮ ಅಲ್ಪ ಕೆಲಸವನ್ನು ಗುರುತಿಸಿ, ಅಷ್ಟು ದೊಡ್ಡ ಪ್ರಶಸ್ತಿ ಕೊಡುತ್ತಿರುವವರಿಗೆ ಮತ್ತು ಆ ವೇದಿಕೆಗೆ ಕೈ ಮುಗಿದು ಗೌರವ ಸಲ್ಲಿಸಲೇಬೇಕಲ್ಲ?
ನಂಗೆ ಪ್ರಶಸ್ತಿ ಕೊಡಲು ನಿಂತಿದ್ದವರು ಈ ದೇಶದ ರಾಷ್ಟ್ರಪತಿಗಳಂತೆ. ಬಹಳ ಎತ್ತರದ ಮನುಷ್ಯ. ನಾನೋ, ಬಾಗಿದ ಬೆನ್ನಿನವಳು. ಅಷ್ಟು ದೊಡ್ಡ ಹುದ್ದೆಯಲ್ಲಿರುವ ಅವರು ನನ್ನತ್ತ ಬಾಗಿ, ಪದಕವೊಂದನ್ನು ಸೆರಗಿಗೆ ಸಿಕ್ಕಿಸಿದರು. ಅವರ ಅಕ್ಕಪಕ್ಕದಲ್ಲೂ ಬಿಳಿ ಸಮವಸ್ತ್ರಧಾರಿಗಳಿದ್ದರು. ಅವರಲ್ಲೊಬ್ಬ ಪ್ರಶಸ್ತಿ ಹಿಡಿದು ನಿಂತಿದ್ದ. ರಾಷ್ಟ್ರಪತಿಗಳು ನಗುತ್ತಲೇ ಒಂದೆರಡು ಮಾತಾಡಿದರು. ಆ ಕ್ಷಣದ ಖುಷಿಯನ್ನು ವಿವರಿಸಲು ಪದಗಳಿಲ್ಲ. ಆಮೇಲೆ ಉದ್ದ ಕೊಳವೆಯಂಥದ್ದನ್ನು ಕೈಗಿತ್ತರು. ಅದರೊಳಗೆ ಏನೇನೋ ಬರೆದಿದೆಯಂತೆ. ಅವರು ನಮಸ್ಕಾರ ಮಾಡುತ್ತಾ, ನನ್ನತ್ತ ಬಾಗಿದಾಗ ನಾನೂ ಅವರ ತಲೆಯ ಮೇಲೆ ಕೈ ಇಟ್ಟು ಆಶೀರ್ವದಿಸಿದೆ. ಅವರು ರಾಷ್ಟ್ರಪತಿಗಳು, ದೊಡ್ಡ ಮನುಷ್ಯರು ಅಂತ ನನ್ನ ತಲೆಗೆ ಬರಲಿಲ್ಲ. ಅವರ ನಮಸ್ಕಾರಕ್ಕೆ ಪ್ರತಿಯಾಗಿ ನಾನು ನಮಸ್ಕಾರ ಮಾಡಿದ ರೀತಿ ಅದು. ಅಲ್ಲಿಯವರೆಗೂ ಅವರತ್ತಲೇ ನೋಡುತ್ತಿದ್ದ ನನಗೆ, ರಾಷ್ಟ್ರಪತಿಗಳೇ, “ಅಲ್ಲಿ ನೋಡಿ, ಆ ಕ್ಯಾಮೆರಾಕ್ಕೆ ಪೋಸ್ ಕೊಡಿ’ ಎಂದು ಸೂಚಿಸಿದರು. ಆಗ ನಾನು ಕ್ಯಾಮೆರಾದತ್ತ ನೋಡಿದೆ. ನೂರಾರು ಫೋಟೊಗಳಲ್ಲಿ ನನ್ನ ಖುಷಿ ಸೆರೆಯಾಯ್ತು. ರಾಷ್ಟ್ರಪತಿಗಳ ಆ ಸೌಜನ್ಯದ ನಡೆಗೆ ನನ್ನ ಹೃದಯ ಭಾರವಾಯ್ತು.
ವೇದಿಕೆ ಇಳಿದು ಬರುವಾಗ ಪ್ರಧಾನಿ ಮೋದಿ ಅವರಿಂದ ಹಿಡಿದು, ಎಲ್ಲ ಗಣ್ಯರೂ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದುದು ಕಾಣಿಸಿತು. ಅದೊಂದು ಧನ್ಯ ಕ್ಷಣ!
ಸಮಾರಂಭ ಮುಗಿಸಿ ರಾಷ್ಟ್ರಪತಿ ಭವನದಿಂದ ಹೊರ ಬಂದ ನಂತರ, ಭವನದ ಆವರಣದಲ್ಲಿ ನಾನು ಅಶೋಕ ಸಸಿಯೊಂದನ್ನು ನೆಟ್ಟೆ. ಈಗ ಈ ಸಾಲುಮರದ ತಿಮ್ಮಕ್ಕ ನೆಟ್ಟ ಗಿಡ ಡೆಲ್ಲಿಯಲ್ಲೂ ಒಂದಿದೆ ಅಂತ ಹೆಮ್ಮೆಯಿಂದ ಹೇಳಬಹುದು. ಆಮೇಲೆ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಜೊತೆಗೆ ಗ್ರೂಪ್ ಫೋಟೊ ಮತ್ತು ಔತಣಕೂಟ ಏರ್ಪಡಿಸಲಾಗಿತ್ತು.
ಮಾ.17ರ ರಾತ್ರಿ ಮತ್ತೆ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದ್ವಿ. ಮನೆಗೆ ಬರೋವಾಗ ಮಧ್ಯರಾತ್ರಿ ಒಂದು ಕಳೆದಿತ್ತೇನೋ. ವಿಮಾನದಲ್ಲಿ ಹೋಗಿದ್ದಕ್ಕೆ ನಂಗೇನೂ ಘಾಸಿಯಾಗಿಲ್ಲ. ಹೀಗೆ ಹೋದೆ, ಹಾಗೇ ಹಾಯಾಗಿ ಬಂದೆ ವಿಮಾನದಲ್ಲಿ.
ಪ್ರಿಯಾಂಕ ಎನ್.