ಸಂಬಂಧಗಳು ಮನುಷ್ಯನನ್ನು ಭಾವನಾ ಜೀವಿಯನ್ನಾಗಿಸುತ್ತವೆ. ಅಂತಹ ಸಂಬಂಧಗಳನ್ನೇ ದ್ವೇಷಿಸಿ, ಅವುಗಳಿಂದ ಪಲಾಯನಗೊಳ್ಳುವ ವ್ಯಕ್ತಿ, ಆ ಭಾವನೆಯ ರುಚಿ ಸವಿಯಲಾರ. ಸಂಬಂಧಗಳ ಅನುಬಂಧ ಹಾಗೂ ಭಾವನೆಗಳ ಕುರಿತು ಹೇಳ ಹೊರಟಿರುವ ಚಿತ್ರ ಈ ವಾರ ತೆರೆಕಂಡಿರುವ ತಿಮ್ಮಯ್ಯ ತಿಮ್ಮಯ್ಯ ಚಿತ್ರ.
ತನ್ನ ಪ್ರೇಯಸಿ ಜೊತೆ ವಿದೇಶಕ್ಕೆ ಹಾರಿ, ಅಲ್ಲಿ ನೆಲೆಕಂಡುಕೊಳ್ಳುವ ಹಂಬಲ ವಿನ್ಸಿ (ಜೂ.ತಿಮ್ಮಯ್ಯ)ಯದು. ಒಂದೆಡೆ ತನ್ನ ಕುಟುಂಬದ ಆಸ್ತಿ ಮಾರಿ ವಿದೇಶಕ್ಕೆ ಹೋಗುವ ಹಂಬಲದಲ್ಲಿದ್ದ ವಿನ್ಸಿಯನ್ನು ವಾಪಾಸ್ ಕರೆತರುವವರು ತಾತ ಸೀನಿಯರ್ ತಿಮ್ಮಯ್ಯ. ಈ ತಾತ- ಮೊಮ್ಮಗ ಸೇರಿದ ಮೇಲೆ ಆರಂಭವಾಗುವ ಕ್ರೇಜಿ ಜರ್ನಿಯ ಕಥೆಯೇ “ತಿಮ್ಮಯ್ಯ ತಿಮ್ಮಯ್ಯ’ ಚಿತ್ರ.
“ತಿಮ್ಮಯ್ಯ ತಿಮ್ಮಯ್ಯ’ ಕಂಪ್ಲೀಟ್ ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಸೀನಿಯರ್ ಮತ್ತು ಜೂನಿಯರ್ ತಿಮ್ಮಯ್ಯ ನಡುವೆ ನಡೆಯುವ ಕಥೆಯಾಗಿದೆ. ಇಲ್ಲಿ ತಿಮ್ಮಯ್ಯ ಕುಟುಂಬದ ಆಸ್ತಿ, “ಬೆಂಗಳೂರು ಕೆಫೆ’ಯ ಅಳಿವು ಉಳಿವಿನ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಚಿತ್ರದ ಮೊದಲರ್ಧ ಪ್ರೇಕ್ಷಕರನ್ನು ನಗುವಿನಲ್ಲಿ ತೇಲಿಸಿದರೆ, ದ್ವಿತೀಯಾರ್ಧಕ್ಕೆ ಸೆಂಟಿಮೆಂಟ್ ಅಂಶಗಳೊಂದಿಗೆ ಸಾಗುತ್ತದೆ. ನಿರ್ದೇಶಕ ಸಂಜಯ್ ಶರ್ಮ ತಮ್ಮ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಒಂದಷ್ಟು ಔಟ್ ಆಫ್ ಬಾಕ್ಸ್ ಯೋಚನೆಯೊಂದಿಗೆ ಮಾಡಿರುವ ದೃಶ್ಯಗಳು ಹೆಚ್ಚು ಇಷ್ಟವಾಗುತ್ತವೆ ಮತ್ತು ಸಿನಿಮಾದ ಪ್ಲಸ್ ಪಾಯಿಂಟ್ ಕೂಡಾ. ಮೊದಲ ಭಾಗದಲ್ಲಿದ್ದ ವೇಗವನ್ನು ದ್ವಿತೀಯಾರ್ಧದಲ್ಲೂ ಕಾಯ್ದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು.
ಇದನ್ನೂ ಓದಿ:ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ: ಮದ್ರಾಸ್ ಹೈಕೋರ್ಟ್
ಈ ಹಿಂದೆ ಅನಂತ್ ನಾಗ್ ಮತ್ತು ದಿಗಂತ್ ಜೋಡಿ ಹಿಟ್ ಎಂದು ಎನಿಸಿಕೊಂಡಿದ್ದು, ಈ ಚಿತ್ರದಲ್ಲಿಯೂ ಅನಂತ್ ನಾಗ್ ಹಾಗೂ ದಿಗಂತ್ ಅವರ ಅಜ್ಜ -ಮೊಮ್ಮಗನ ಕಾಂಬಿನೇಷನ್ ಸುಂದರವಾಗಿ ಮೂಡಿಬಂದಿದೆ. ಭಾವನಾತ್ಮಕ ದೃಶ್ಯಗಳಲ್ಲಿನ ಅಭಿನಯ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವಂತಿದೆ. ಅದರಲ್ಲೂ ಅನಂತ್‌ನಾಗ್ ಅವರ ಮ್ಯಾನರಿಸಂ, ಎನರ್ಜಿ, ನಟನೆ ಸಿನಿಮಾದ ಜೀವಾಳ. ಇಡೀ ಚಿತ್ರವನ್ನೇ ಆವರಿಸಿದಂತಹ ಭಾವ ಕಾಡುತ್ತದೆ.
ಉಳಿದಂತೆ ವಿನೀತ್ ಕುಮಾರ್ ಹಾಗೂ ಪ್ರಕಾಶ್ ತುಮ್ಮಿನಾಡು ಅವರ ಚೇಷ್ಟೆ, ಕಾಮಿಡಿ ಟೈಮಿಂಗ್ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ನಾಯಕಿಯರಾದ ಐಂದ್ರಿತಾ ಮತ್ತು ಶುಭ್ರ ಅಯ್ಯಪ್ಪ ತಮ್ಮ ಪಾತ್ರವನ್ನು ಪೂರ್ಣವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ತಿಮ್ಮಯ್ಯ ತಿಮ್ಮಯ್ಯ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡಲಿದ್ದು, ಮಾಸ್ ಚಿತ್ರಗಳಿಂದ ಆಚೆಗೆ ಫ್ಯಾಮಿಲಿ, ಸೆಂಟಿಮೆಂಟ್- ಡ್ರಾಮಾ ಇಷ್ಟಪಡುವ ಪ್ರೇಕ್ಷಕರಿಗೆ ಚಿತ್ರ ಒಂದೊಳ್ಳೆಯ ಅನುಭವ ನೀಡಲಿದ್ದಾರೆ.
ವಾಣಿ ಭಟ್ಟ